ನವದೆಹಲಿ: ಇಂಡಿಯನ್ ನ್ಯಾಷನಲ್ ಲೋಕದಳ (INLD) ಮುಖ್ಯಸ್ಥ, ಮಾಜಿ ಶಾಸಕ ನಫೆ ಸಿಂಗ್ ರಾಠಿ (Nafe Singh Rathi) ಅವರ ಹತ್ಯೆಯ ಹಿಂದೆ ಇಂಗ್ಲೆಂಡ್ ಮೂಲದ ಗ್ಯಾಂಗ್‌ನ ಕೈವಾಡವಿದೆ ಎಂಬ ಸಂದೇಹ ಮೂಡಿದೆ. ಸಂಶಯದ ಮೇರೆಗೆ ಇನ್ನೂ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ (ಫೆಬ್ರವರಿ 25) ನಡೆದ ಈ ಹತ್ಯೆ ದೇಶಾದ್ಯಂತ ಸಂಚಲ ಸೃಷ್ಟಿಸಿತ್ತು.
ಘಟನೆಯ ವಿವರ
ಮಾಜಿ ಶಾಸಕರೂ ಆಗಿರುವ ಐಎನ್‌ಡಿಎಲ್ ಹರ್ಯಾಣ ಘಟಕದ ಅಧ್ಯಕ್ಷ ರಾಠಿ ಭಾನುವಾರ ತಮ್ಮ ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹರ್ಯಾಣದ ಜಜ್ಜರ್‌ನ ಬಹದ್ದೂರ್‌ಗಢ ಪಟ್ಟಣದಲ್ಲಿ ರೈಲು ಕ್ರಾಸಿಂಗ್‌ಗಾಗಿ ರಾಠಿ ಅವರ ವಾಹನವನ್ನು ನಿಲ್ಲಿಸಲಾಗಿತ್ತು. ಆಗ ಸಿನಿಮೀಯ ಮಾದರಿಯ ಘಟನೆ ಸಂಭವಿಸಿತು. ಅಲ್ಲಿಗೆ ಆಗಮಿಸಿದ ಕಾರೊಂದು ರಾಠಿ ಅವರಿದ್ದ ಎಸ್‌ಯುವಿಗೆ ಡಿಕ್ಕಿ ಹೊಡೆಯಿತು. ಬಳಿಕ ಆ ನಿಗೂಢ ಕಾರಿನಿಂದ ಹೊರ ಬಂದ ಸುಮಾರು 5 ಮಂದಿ ರಾಠಿ ಅವರ ಮೇಲೆ ನಿರಂತರವಾಗಿ ಗುಂಡಿನ ಮಳೆಗೆರೆದರು. ಈ ವೇಳೆ 66 ವರ್ಷದ ರಾಠಿ ಮತ್ತು ಅವರ ಸಹಾಯಕ ಸಾವನ್ನಪ್ಪಿದರು. ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಕೋರರು ವಾಹನವನ್ನು ಚಾಲನೆ ಮಾಡುತ್ತಿದ್ದ ರಾಠಿ ಅವರ ಸೋದರಳಿಯನ ಜೀವವನ್ನು ಉಳಿಸಿದ್ದು, ಈ ದಾಳಿಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡುವಂತೆ ಸೂಚಿಸಿ ಪರಾರಿಯಾಗಿದ್ದರು.
ಸದ್ಯ ಪೊಲೀಸರು ದುಷ್ಕರ್ಮಿಗಳು ಆಗಮಿಸಿದ್ದ ಕಾರಿನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಎಫ್ಐಆರ್‌ನಲ್ಲಿ ಇದುವರೆಗೆ ಒಟ್ಟು 15 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ವೀರೇಂದ್ರ ರಾಠಿ, ಸಂದೀಪ್ ರಾಠಿ, ರಾಜ್‌ಪಾಲ್ ಶರ್ಮಾ, ಬಿಜೆಪಿ ಮಾಜಿ ಶಾಸಕ ನರೇಶ್ ಕೌಶಿಕ್ ಸೇರಿದಂತೆ 10 ಪರಿಚಿತರು ಮತ್ತು ಐವರು ಅಪರಿಚಿತರಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಹೊಸದಾಗಿ ಹೆಸರಿಸಲಾದ ವೀರೇಂದ್ರ ರಾಠಿ, ಸಂದೀಪ್ ರಾಠಿ, ರಾಜ್‌ಪಾಲ್ ಶರ್ಮಾ ಈ ಮೂವರ ಪೈಕಿ ಇಬ್ಬರು ರಾಜಕೀಯ ಸಂಬಂಧಗಳನ್ನು ಹೊಂದಿದ್ದಾರೆ.
ಇಂಗ್ಲೆಂಡ್ ಮೂಲದ ಕುಖ್ಯಾತ ದರೋಡೆಕೋರ ಇದರಲ್ಲಿ ಭಾಗಿಯಾಗಿದ್ದಾನೆ ಎಂಬ ಅನುಮಾನ ಮೂಡುವುದರೊಂದಿಗೆ ತನಿಖೆಯು ಅಂತಾರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿದೆ. ಈ ದರೋಡೆಕೋರ ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ಬಿಜೆಪಿ ನಾಯಕರೊಬ್ಬರ ಹತ್ಯೆ ಸೇರಿದಂತೆ ಕೆಲವು ರಾಜಕೀಯ ಮುಖಂಡರ ಕೊಲೆಗಳನ್ನು ಆಯೋಜಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಈ ದರೋಡೆಕೋರನ ನಿಕಟ ಸಹಚರನನ್ನು ಹರ್ಯಾಣ ಪೊಲೀಸರು ಇಂದು (ಫೆಬ್ರವರಿ 27) ಪ್ರಶ್ನಿಸಲಿದ್ದಾರೆ.
ಚುರುಕುಗೊಂಡ ತನಿಖೆ
ರಾಠಿ ಅವರ ಹತ್ಯೆಯ ಹಿಂದೆ ಜೈಲಿನಲ್ಲಿರುವ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ಕಲಾ ಜತೇಡಿ ಅವರೊಂದಿಗೆ ಸಂಬಂಧ ಹೊಂದಿರುವ ಶಾರ್ಪ್ ಶೂಟರ್ಗಳು ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ದೆಹಲಿ ಪೊಲೀಸರ ಅಪರಾಧ ವಿಭಾಗ ಮತ್ತು ವಿಶೇಷ ಸೆಲ್ ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದು, ತೀವ್ರವಾಗಿ ವಿಚಾರಣೆ ನಡೆಸುತ್ತಿದೆ.
ಪೋರ್ಚುಗಲ್‌ನಲ್ಲಿದ್ದಾನೆ ಎಂದು ಶಂಕಿಸಲಾದ ಹಿಮಾಂಶು ಭಾವುನಂತಹ ವಿದೇಶಿ ಮೂಲದ ದರೋಡೆಕೋರರು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆಯೂ ಇದೆ. “ಜೈಲಿನಲ್ಲಿರುವ ದರೋಡೆಕೋರರ ಗ್ಯಾಂಗ್ ಸದಸ್ಯರು ಹಣಕ್ಕಾಗಿ ರಾಠಿ ಅವರನ್ನು ಕೊಲ್ಲಲು ಗುತ್ತಿಗೆ ಪಡೆದಿರಬಹುದು ಎಂದು ಶಂಕಿಸಲಾಗಿದೆ” ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಸಂಶಯ ವ್ಯಕ್ತಪಡಿಸಿದ್ದಾರೆ.
ಬಿಷ್ಣೋಯ್ ಮತ್ತು ಜತೇಡಿಗೆ ಸಂಬಂಧಿಸಿದ ಗ್ಯಾಂಗ್‌ಗಳು ದೆಹಲಿ-ಎನ್‌ಸಿಆರ್, ಹರ್ಯಾಣ, ಪಂಜಾಬ್ ಮತ್ತು ರಾಜಸ್ಥಾನದಾದ್ಯಂತ ಸುಲಿಗೆ ಮತ್ತು ಹತ್ಯೆಗಳಲ್ಲಿ ತೊಡಗಿವೆ. ರಾಠಿ ಅವರ ಹತ್ಯೆಯ ಶೈಲಿ ಹಿಂದಿನ ಘಟನೆಗಳನ್ನು ಹೋಲುತ್ತದೆ. ವಿಶೇಷವಾಗಿ ರಜಪೂತ್ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿ ಅವರ ಹತ್ಯೆಯೊಂದಿಗೆ ಸಾಮ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Nafe Singh Rathee: ಹರ್ಯಾಣ ಐಎನ್‌ಎಲ್‌ಡಿ ನಾಯಕ ರಾಠಿ ಹತ್ಯೆ; ಗುಂಡು ಹಾರಿಸಿದ ಅಪರಿಚಿತರು
ಸಿಬಿಐಗೆ ಹಸ್ತಾಂತರ ?
ಈ ಮಧ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುವುದು ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. “ಸದನವು ಸಿಬಿಐ ತನಿಖೆಯಿಂದ ಮಾತ್ರ ತೃಪ್ತವಾಗುವುದಾದರೆ ನಾವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುತ್ತೇವೆ ಎಂದು ನಾನು ಸದಸ್ಯರಿಗೆ ಭರವಸೆ ನೀಡುತ್ತೇನೆ” ಎಂದು ವಿಜ್ ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ