ಗುವಾಹಟಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ಆರು ನಾಗರಿಕರ ಸಾವಿಗೆ ಕಾರಣವಾದ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಸಂಬಂಧಿಸಿ, ಒಬ್ಬ ಅಧಿಕಾರಿ ಸೇರಿ ಮೂವತ್ತು ಭಾರತೀಯ ಸೇನಾ ಸಿಬ್ಬಂದಿಯ ಮೇಲೆ ಚಾರ್ಜ್‌ಶೀಟ್ ದಾಖಲಿಸಲಾಗಿದೆ.
21 ಪ್ಯಾರಾಮಿಲಿಟರಿಯ ಸಿಬ್ಬಂದಿಗಳು ಇಂಥ ಸನ್ನಿವೇಶದಲ್ಲಿ ಅನುಸರಿಸಬೇಕಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ನಿಯಮಗಳನ್ನು ಅನುಸರಿಸಿಲ್ಲ. ವಿವೇಚನಾರಹಿತವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಭದ್ರತಾಪಡೆ ವಾಹನದಲ್ಲಿದ್ದ ಆರು ಮಂದಿಯನ್ನು ಸ್ಥಳದಲ್ಲೇ ಕೊಂದು ಇಬ್ಬರು ವ್ಯಕ್ತಿಗಳನ್ನು ಗಂಭೀರವಾಗಿ ಗಾಯಗೊಳಿಸಿತ್ತು ಎಂದು ನಾಗಾಲ್ಯಾಂಡ್ ಡಿಜಿಪಿ ಟಿ ಜಾನ್ ಲಾಂಗ್‌ಕುಮರ್ ಶನಿವಾರ ಕೊಹಿಮಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 120 (ಬಿ) (ಕ್ರಿಮಿನಲ್ ಪಿತೂರಿ), 201 (ಸಾಕ್ಷ್ಯ ಕಣ್ಮರೆ) ಮತ್ತು ಇತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಡಿಸೆಂಬರ್ 4, 2021ರಂದು, ಪೂರ್ವ ನಾಗಾಲ್ಯಾಂಡ್‌ನ ಓಟಿಂಗ್ ಗ್ರಾಮದಲ್ಲಿ ಪಿಕಪ್ ಟ್ರಕ್‌ನಲ್ಲಿದ್ದ ಎಂಟು ಗಣಿಕಾರ್ಮಿಕರ ಗುಂಪನ್ನು ಉಗ್ರರೆಂದು ತಿಳಿದು ಭದ್ರತಾ ಪಡೆಗಳು ಗುಂಡು ಹಾರಿಸಿದ್ದರು. ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ನಂತರ ನಡೆದ ಪ್ರತೀಕಾರದ ಹಿಂಸಾಚಾರದಲ್ಲಿ ಇನ್ನೂ ಏಳು ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು.
ಘಟನೆಯ ನಂತರ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸೂಚನೆ ನೀಡಿದರೂ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದರು. ಆದರೆ, ಸೈನಿಕರು ನಿಲ್ಲಿಸುವ ಸೂಚನೆ ನೀಡಿರಲಿಲ್ಲ ಎಂದು ಬದುಕುಳಿದವರು ಹೇಳಿದ್ದರು. ಈ ಘಟನೆ ನಾಗಾಲ್ಯಾಂಡ್‌ನಲ್ಲಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತು ಹಾಗೂ ವಿವಾದಾತ್ಮಕ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು (AFSPA) ತೆಗೆದುಹಾಕಬೇಕು ಎಂದು ಒತ್ತಾಯ ಮೂಡಿತ್ತು.
ಇದನ್ನೂ ಓದಿ: ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲ ಅಸಹಜ ಸಾವು