Site icon Vistara News

Narayana Murthy: ಕಂಪನಿ ಕಟ್ಟಿದರೂ ಇನ್ಫಿ ಮೂರ್ತಿ ಏಕೆ ಟಾಯ್ಲೆಟ್‌ ಕ್ಲೀನ್‌ ಮಾಡುತ್ತಿದ್ದರು?

Narayana Murthy

China Is Great Example: Narayana Murthy On Growth, Opportunities

ನವದೆಹಲಿ: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರು ಇನ್ಫೋಸಿಸ್‌ (Infosys) ಕಟ್ಟಿದ್ದು, ಸಾವಿರಾರು ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದು, ಬೆಂಗಳೂರು ಐ.ಟಿ ಸಿಟಿಯಾಗಲು ಕೊಡುಗೆ ನೀಡಿದ್ದು ಸೇರಿ ಎಲ್ಲ ವಿಷಯಗಳು ಜನರಿಗೆ ಗೊತ್ತಿವೆ. ಆದರೆ, ಇನ್ಫೋಸಿಸ್‌ ಎಂಬ ದೊಡ್ಡ ಸಂಸ್ಥೆ ಕಟ್ಟಿದರೂ ಅವರು ತಮ್ಮ ಮನೆಯ ಶೌಚಾಲಯವನ್ನು ತೊಳೆಯುತ್ತಿದ್ದರು ಎಂಬುದು ಈಗ ಬಹಿರಂಗವಾಗಿದೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದ ವೇಳೆ ಈ ಕುರಿತು ಅವರೇ ಮಾಹಿತಿ ನೀಡಿದ್ದಾರೆ.

“ನಾನು ನನ್ನ ಮಕ್ಕಳಿಗೆ ಒಳ್ಳೆಯ ಆದರ್ಶಗಳ ಬಗ್ಗೆ ತಿಳಿಸಬೇಕಿತ್ತು. ಯಾವ ಕೆಲಸವೂ ದೊಡ್ಡದಲ್ಲ, ಯಾವ ಕೆಲಸವೂ ಚಿಕ್ಕದಲ್ಲ ಎಂಬ ಮನಸ್ಥಿತಿ ಅವರಲ್ಲಿ ಮೂಡಿಸಬೇಕಿತ್ತು. ಇದಕ್ಕಾಗಿ ನಾನು ನನ್ನ ಮನೆಯ ಶೌಚಾಲಯವನ್ನು ಅವರ ಎದುರೇ ತೊಳೆಯುತ್ತಿದ್ದೆ. ಶ್ರೀಮಂತರು ಟಾಯ್ಲೆಟ್‌ ಕ್ಲೀನ್‌ ಮಾಡಿದ ತಕ್ಷಣ ಅವರ ಘನತೆ ಕಡಿಮೆಯಾಗುತ್ತದೆ ಎಂಬುದು ತುಂಬ ಜನರ ಮನಸ್ಥಿತಿಯಾಗಿದೆ. ಹಾಗಾಗಿ, ನನ್ನ ಮಕ್ಕಳ ಎದುರು ಶೌಚಾಲಯ ಸ್ವಚ್ಛಗೊಳಿಸಿ, ನಮಗಿಂತ ಯಾರೂ ಕಡಿಮೆ ಇಲ್ಲ, ಯಾರನ್ನೂ ಕೀಳಾಗಿ ಕಾಣಬಾರದು ಎಂಬುದಾಗಿ ಹೇಳುತ್ತಿದ್ದೆ” ಎಂದು ತಿಳಿಸಿದ್ದಾರೆ.

ಚೀನಾ ನಮಗೆ ಮಾದರಿಯಾಗಲಿ ಎಂದ ಮೂರ್ತಿ

“ಅಭಿವೃದ್ಧಿಯಲ್ಲಿ ಏಷ್ಯಾದ ಹಲವು ರಾಷ್ಟ್ರಗಳು ಮುನ್ನಡೆ ಸಾಧಿಸಿವೆ. ಚೀನಾ, ಸಿಂಗಾಪುರ, ಮಲೇಷ್ಯಾ ಸೇರಿ ಹಲವು ರಾಷ್ಟ್ರಗಳು ಏಳಿಗೆ ಹೊಂದಿವೆ. ಚೀನಾ ನಮಗೆ ಉತ್ತಮ ಉದಾಹರಣೆಯಾಗಿದೆ. ಭಾರತದ ಜಿಡಿಪಿಗಿಂತ ಅವರು ಆರು ಪಟ್ಟು ಜಿಡಿಪಿ ಹೆಚ್ಚು ಜಿಡಿಪಿ ಹೊಂದಿದ್ದಾರೆ. ಸಿಂಗಾಪುರ ಕೂಡ ಅಭಿವೃದ್ಧಿಯಲ್ಲಿ ಮುಂದಿದೆ. ಅವರ ತಲಾದಾಯವು ನಮಗಿಂತ ಹೆಚ್ಚಿದೆ. ಮಲೇಷ್ಯಾ, ಥಾಯ್ಲೆಂಡ್‌ ಕೂಡ ಉತ್ತಮ ಮುನ್ನಡೆ ಸಾಧಿಸಿವೆ” ಎಂದು ಸಂದರ್ಶನದ ವೇಳೆ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಏಳಿಗೆ ಬಗ್ಗೆ ಹೇಳಿದ್ದೇನು?

“ಭಾರತವೂ ಜಗತ್ತಿನಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಆದರೆ, ನಾವು ಬೌದ್ಧಿಕ ಹಾಗೂ ಮೌಲ್ಯಗಳ ಸಂಪತ್ತನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು. ಆಗ ಭಾರತವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತದೆ. ಕಡಿಮೆ ಅವಕಾಶಗಳು ಇರುವವರು, ಬಡತನದಲ್ಲಿ ಹುಟ್ಟಿದವರಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ದೇಶವನ್ನು ಏಳಿಗೆಯತ್ತ ಕೊಂಡೊಯ್ಯಬಹುದಾಗಿದೆ. ಇದಕ್ಕಾಗಿ ಎಲ್ಲರೂ ಸಕಾರಾತ್ಮಕ ಧೋರಣೆಯೊಂದಿಗೆ ಕೊಡುಗೆ ನೀಡಿದಾಗ ಮಾತ್ರ ಭಾರತವು ಇನ್ನಷ್ಟು ಏಳಿಗೆ ಹೊಂದಲಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Sudha Murty: ಮಾತಾಡೋರು ಮಾತಾಡ್ಲಿ; ಅಳಿಯ ರಿಷಿ ಸುನಕ್‌ಗೆ ಸುಧಾಮೂರ್ತಿ ಹೀಗೆ ಹೇಳಿದ್ದೇಕೆ?

ಅಳಿಯ-ಮಗಳ ಬಗ್ಗೆ ಸುಧಾ ಮೂರ್ತಿ ಮಾತು

ಸಂದರ್ಶನದ ವೇಳೆ ಸುಧಾ ಮೂರ್ತಿ ಅವರು ಕೂಡ, ಅಳಿಯ ಹಾಗೂ ಮಗಳ ಬಗ್ಗೆ ಮಾತನಾಡಿದರು. “ರಿಷಿ ಸುನಕ್‌ ಹಾಗೂ ಪುತ್ರಿ ಅಕ್ಷತಾ ಮೂರ್ತಿಗೆ ನಾನು ಆಗಾಗ ಸಲಹೆ ನೀಡುತ್ತಲೇ ಇರುತ್ತೇನೆ. ಜನ ನಿಮ್ಮ ಹುದ್ದೆ ನೋಡಿ ಮಾತನಾಡುತ್ತಾರೆ. ನೀವು ಪ್ರಾಮಾಣಿಕರಾಗಿದ್ದರೆ, ದೇಶಕ್ಕೆ ನೀವು ಸೇವೆ ಸಲ್ಲಿಸುತ್ತಿದ್ದರೆ, ನೀವು ಯಾರ ಮಾತಿಗೂ ಕಿವಿ ಕೊಡಬೇಕಿಲ್ಲ. ಕೆಲವರ ಕೆಲಸವೇ ಮಾತನಾಡುವುದಾಗಿರುತ್ತದೆ. ಜನ ಮಾತನಾಡುತ್ತಲೇ ಇರುತ್ತಾರೆ. ನೀವು ಪ್ರಾಮಾಣಿಕರಾಗಿ ಕೆಲಸ ಮಾಡುತ್ತಿದ್ದರೆ, ಜನರ ಟೀಕೆಗಳನ್ನು ನಿರ್ಲಕ್ಷಿಸಿ ಎಂಬುದಾಗಿ ಮಗಳು ಹಾಗೂ ಅಳಿಯನಿಗೆ ಹೇಳುತ್ತಲೇ ಇರುತ್ತೇನೆ” ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version