Site icon Vistara News

ಮೂರ್ತಿಯಂತೆ 70 ಗಂಟೆ, ಬಿಲ್‌ ಗೇಟ್ಸ್‌ರಂತೆ 3 ದಿನ ಅಲ್ಲ; ಕೆಲಸಕ್ಕೆ ಶಶಿ ತರೂರ್‌ ಸೊಲ್ಯೂಷನ್ ಇಲ್ಲಿದೆ!

Shashi Tharoor

Narayana Murthy's 70-hour work week vs Bill Gates 3-day working: Shashi Tharoor finds solution

ತಿರುವನಂತಪುರಂ: ದೇಶದ ಏಳಿಗೆಗಾಗಿ ಈಗಿನ ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ (Narayana Murthy) ಅವರು ಹೇಳಿದ್ದು ದೇಶಾದ್ಯಂತ ಚರ್ಚೆಯಾಗಿತ್ತು. ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದಾದ ಕೆಲವೇ ದಿನಗಳ ಬಳಿಕ, “ವಾರದಲ್ಲಿ ಮೂರು ದಿನ ಕೆಲಸ ಮಾಡಿದರೆ ಸಾಕು” ಎಂದು ಉದ್ಯಮಿ ಬಿಲ್‌ ಗೇಟ್ಸ್‌ (Bill Gates) ಹೇಳಿದ್ದರು. ಇದು ಕೂಡ ಚರ್ಚೆಗೆ ಅನುವು ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ, ವಾರದಲ್ಲಿ ಎಷ್ಟು ದಿನ ಕೆಲಸ ಮಾಡಬೇಕು ಎಂಬ ಪ್ರಶ್ನೆಗೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ (Shashi Tharoor) ಉತ್ತರ ಹುಡುಕಿದ್ದಾರೆ.

“ವಾರದಲ್ಲಿ ಮೂರು ದಿನ ಕೆಲಸ ಮಾಡಿದರೆ ಸಾಕು ಎಂದು ಈಗ ಬಿಲ್‌ ಗೇಟ್ಸ್‌ ಹೇಳಿದ್ದಾರೆ. ಇದರ ಬದಲಾಗಿ, ಬಿಲ್‌ ಗೇಟ್ಸ್‌ ಹಾಗೂ ನಾರಾಯಣಮೂರ್ತಿ ಅವರು ಕುಳಿತುಕೊಂಡು ಒಂದು ಒಪ್ಪಂದಕ್ಕೆ ಬರಬೇಕು. ಈಗ ನಾವೇನು ವಾರದಲ್ಲಿ ಐದು ದಿನ ಕೆಲಸ ಮಾಡುತ್ತಿದ್ದೇವೋ, ಅದೇ ಒಪ್ಪಂದಕ್ಕೆ ಇಬ್ಬರೂ ಬರಬೇಕು” ಎಂದು ಶಶಿ ತರೂರ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಮೂಲಕ ವಾರಕ್ಕೆ 70 ಗಂಟೆ ದುಡಿಯುವ ತಾಪತ್ರಯವೂ ಇಲ್ಲದ, ವಾರದಲ್ಲಿ ಮೂರೇ ದಿನ ಕೆಲಸ ಮಾಡುವ ಕಡಿಮೆ ಕೆಲಸವೂ ಅಲ್ಲದ, ಮಧ್ಯಮ ಮಾರ್ಗದ ಪರಿಹಾರವನ್ನು ಶಶಿ ತರೂರ್‌ ನೀಡಿದ್ದಾರೆ.

ನಾರಾಯಣ ಮೂರ್ತಿ ಹೇಳಿದ್ದೇನು?

ಇನ್ಫೋಸಿಸ್‌ನ ಮಾಜಿ ಸಿಎಫ್ಒ ಮೋಹನ್‌ದಾಸ್ ಪೈ ಅವರೊಂದಿಗಿನ ಮಾತುಕತೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು, “ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಯುವಕರು ಇದೇ ರೀತಿ ಮಾಡಿದ್ದರು” ಎಂದು ಹೇಳಿದ್ದರು.

“ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸದ ಹೊರತು, ನಾವು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡದ ಹೊರತು ನಾವು ಪ್ರಚಂಡ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಇನ್ಫೋಸಿಸ್ ನಾರಾಯಣಮೂರ್ತಿ ತಿಳಿಸಿದ್ದರು.

ಇದನ್ನೂ ಓದಿ: 70 Hours Work Debate: 5 ದಿನಗಳ ವೀಕ್‌ ಸತ್ತಿದೆ: ನಾರಾಯಣ ಮೂರ್ತಿ ಪರ ಹರ್ಷ ಗೋಯೆಂಕಾ ಬ್ಯಾಟಿಂಗ್‌

ಬಿಲ್‌ ಗೇಟ್ಸ್‌ ಅಭಿಪ್ರಾಯ ಇದು

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಮನುಷ್ಯನ ಜಾಗವನ್ನು ಆಕ್ರಮಿಸಿಕೊಳ್ಳುವುದಿಲ್ಲ. ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ. ಬದಲಾಗಿ ಇದು ಕೆಲಸಗಾರರ ಹೊರೆ ಕಡಿಮೆ ಮಾಡುತ್ತದೆ. ಅಷ್ಟಕ್ಕೂ ಜೀವನದ ಉದ್ದೇಶ ಎಂದರೆ, ಬರೀ ಕೆಲಸ ಮಾಡುವುದಲ್ಲ. ಯಾವುದೇ ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕೆಲಸ ಮಾಡಿದರೆ ಸಾಕು” ಎಂದು ಬಿಲ್‌ ಗೇಟ್ಸ್‌ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version