Site icon Vistara News

Narendra Dabholkar Case: ವಿಚಾರವಾದಿ ದಾಭೋಲ್ಕರ್ ಹತ್ಯೆ ಪ್ರಕರಣ; ಹಂತಕರಿಗೆ ಜೀವಾವಧಿ ಶಿಕ್ಷೆ

Narendra Dabholkar

ನವದೆಹಲಿ: ಸಾಮಾಜಿಕ ಕಾರ್ಯಕರ್ತ ಹಾಗೂ ಮಹಾರಾಷ್ಟ್ರ(Maharashtra) ಅಂಧಶ್ರದ್ಧ ನಿರ್ಮೂಲನ ಸಮಿತಿ ಮುಖ್ಯಸ್ಥ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಹತ್ಯೆ (Narendra Dabholkar Case) ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 11 ವರ್ಷಗಳ ಬಳಿಕ ಮಹತ್ವದ ತೀರ್ಪು ಹೊರಬಿದ್ದಿದ್ದು, ಇಬ್ಬರು ಹಂತಕರಿಗೆ ಜೀವಾವಧಿ(Life imprisonment) ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಉಳಿದ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಮಹಾರಾಷ್ಟ್ರದ ಪುಣೆಯ ವಿಶೇಷ ನ್ಯಾಯಾಲಯ ಆರೋಪಿಗಳಾದ ಸಚಿನ್ ಅಂಡುರೆ ಮತ್ತು ಸರದ್ ಕಲಾಸ್ಕರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಅಲ್ಲದೇ ತಲಾ 5ಲಕ್ಷ ರೂ, ದಂಡವನ್ನೂ ವಿಧಿಸಿ ಆದೇಶ ಹೊರಡಿಸಿದೆ. ಇನ್ನು ದಾಭೋಲ್ಕರ್ ಹತ್ಯೆ ಸಂಚಿನ ಮಾಸ್ಟರ್ ಮೈಂಡ್ ಡಾ.ವೀರೇಂದ್ರ ತಾವ್ಡೆ ಮತ್ತು ಇತರ ಇಬ್ಬರು ಆರೋಪಿತ ವಕೀಲರಾದ ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯವು ಖುಲಾಸೆಗೊಳಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಗೆ ಸಂಬಂಧಿಸಿದ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ.ಎ. ಜಾಧವ್ ಈ ತೀರ್ಪು ಪ್ರಕಟಿಸಿದ್ದಾರೆ.

2013ರಲ್ಲಿ ನಡೆದಿದ್ದೇನು?

ಪುಣೆಯ ಓಂಕಾರೇಶ್ವರ ಸೇತುವೆಯ ಮೇಲೆ ಬೆಳಗಿನ ವಾಕಿಂಗ್‌ಗೆ ಹೊರಟಿದ್ದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು 2013ರ ಆಗಸ್ಟ್ 20 ರಂದು ಕಿರಾತಕರು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಐವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಸಂಚುಕೋರ ಸನಾತನ ಸಂಸ್ಥೆ ಜೊತೆ ಸಂಪರ್ಕ ಹೊಂದಿದ್ದ ಡಾ.ವೀರೇಂದ್ರ ತಾವ್ಡೆ ಎಂದು ಸಿಬಿಐ ಆರೋಪಿಸಿತ್ತು. ದಾಭೋಲ್ಕರ್ ಅವರು ಹಲವು ವರ್ಷಗಳಿಂದ ಆ ಸಮಿತಿಯನ್ನು ನಡೆಸುತ್ತಿದ್ದರು, ಅವರು ಮೂಢನಂಬಿಕೆ ನಿರ್ಮೂಲನೆಗೆ ಸಂಬಂಧಿಸಿದ ವಿವಿಧ ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಮತ್ತು ಅನೇಕ ಕಾರ್ಯಾಗಾರಗಳನ್ನು ಸಹ ಆಯೋಜಿಸಿದ್ದರು.

ಈ ಹತ್ಯೆಯ ನಂತರ ದೇಶಾದ್ಯಂತ ಸಾಕಷ್ಟು ಗಲಾಟೆ ನಡೆದಿತ್ತು. ನಂತರ, ದಾಭೋಲ್ಕರ್ ಅವರ ಮಕ್ಕಳು ಸಲ್ಲಿಸಿದ ಅರ್ಜಿಗಳ ಮೇಲೆ, ಬಾಂಬೆ ಹೈಕೋರ್ಟ್ ಪ್ರಕರಣವನ್ನು ಪುಣೆ ಪೊಲೀಸರಿಂದ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತ್ತು. ದಾಭೋಲ್ಕರ್ ಅವರ ಕೊಲೆಗೆ ಷಡ್ಯಂತ್ರ ರೂಪಿಸಲಾಗಿದೆ, ಇದರಿಂದಾಗಿ ಜನರ ಮನಸ್ಸಿನಲ್ಲಿ ದೊಡ್ಡ ಮಟ್ಟದಲ್ಲಿ ಭಯವನ್ನು ಉಂಟುಮಾಡಬಹುದು ಮತ್ತು ಅವರ ಕೊಲೆಯ ನಂತರ ‘ಅಂಧಶ್ರದ್ಧ ನಿರ್ಮೂಲನ ಸಮಿತಿ’ಯ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂಬುದು ದುಷ್ಕರ್ಮಿಗಳ ಯೋಚನೆಯಾಗಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿತ್ತು. ಜೂನ್ 2016 ರಲ್ಲಿ ಹಿಂದುತ್ವ ಪರ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದ ಡಾ. ವೀರೇಂದ್ರ ಸಿಂಗ್ ತಾವ್ಡೆಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Mani Shankar Aiyar: ಪಾಕಿಸ್ತಾನವನ್ನು ಕೆಣಕಿದರೆ ಅಣು ಬಾಂಬ್ ಬೀಳಬಹುದು ಹುಷಾರ್! ಮೋದಿಗೆ ಮಣಿಶಂಕರ್ ಅಯ್ಯರ್ ಎಚ್ಚರಿಕೆ!

ಪುಣೆಯಲ್ಲಿ ದಾಭೋಲ್ಕರ್ ಅವರ ಹತ್ಯೆ ಬಳಿಕ ಮತ್ತಷ್ಟು ವಿಚಾರವಾದಿಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಕೊಲೆಗಳು ನಡೆದಿದ್ದವು. 2015ರ ಫೆಬ್ರವರಿಯಲ್ಲಿ ಗೋವಿಂದ್ ಪನ್ಸಾರೆ, ಅದೇ ವರ್ಷದ ಆಗಸ್ಟ್‌ನಲ್ಲಿ ಕರ್ನಾಟಕದ ಸಂಶೋಧಕ ಎಂಎಂ ಕಲಬುರ್ಗಿ ಹಾಗೂ 2017ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಮನೆಯ ಹೊರಗೆ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಿಗೆ ಸಾಮ್ಯತೆ ಇದ್ದು, ಒಂದೇ ಸಂಘಟನೆಯವರ ಕೈವಾಡ ಇವುಗಳಲ್ಲಿ ಇವೆ ಎಂದು ಆರೋಪಿಸಲಾಗಿದೆ.

Exit mobile version