ನವದೆಹಲಿ: ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ (Russia Presidential Elections) ಐತಿಹಾಸಿಕ ಗೆಲುವು ಸಾಧಿಸಿರುವ ವ್ಲಾಡಿಮಿರ್ ಪುಟಿನ್ (Vladimir Putin) ಅವರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿರುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಸುಮಾರು ಶೇ. 87.8ರಷ್ಟು ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪುಟಿನ್ ಅವರನ್ನು ಅಭಿನಂದಿಸಿದ ಮೋದಿ, “ರಷ್ಯಾ ಒಕ್ಕೂಟದ ಅಧ್ಯಕ್ಷರಾಗಿ ಪುನರಾಯ್ಕೆಯಾದ ವ್ಲಾಡಿಮಿರ್ ಪುಟಿನ್ ಅವರಿಗೆ ಹಾರ್ದಿಕ ಅಭಿನಂದನೆಗಳು” ಎಂದು ಪೋಸ್ಟ್ ಮಾಡಿದ್ದಾರೆ. “ಮುಂಬರುವ ದಿನಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ.
Warm congratulations to H.E. Mr. Vladimir Putin on his re-election as the President of the Russian Federation. Look forward to working together to further strengthen the time-tested Special & Privileged Strategic Partnership between India and Russia in the years to come.…
— Narendra Modi (@narendramodi) March 18, 2024
ಭಾರತ ಮತ್ತು ರಷ್ಯಾ ನಡುವೆ ಬಹಳ ಹಿಂದಿನಿಂದಲೂ ಉತ್ತಮ ಸಂಬಂಧವಿದೆ. ರಷ್ಯಾವು ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ದೇಶವಾಗಿ ಗುರುತಿಸಿಕೊಂಡಿದೆ. ಅಲ್ಲದೆ ಮಧ್ಯಪ್ರಾಚ್ಯ ರಫ್ತುದಾರ ದೇಶವನ್ನು ಹಿಂದಿಕ್ಕಿ ರಷ್ಯಾ ಭಾರತದ ಅಗ್ರ ತೈಲ ಪೂರೈಕೆದಾರನಾಗಿ ಮಾರ್ಪಟ್ಟಿದೆ.
ಮೂರನೇ ಮಹಾಯುದ್ಧದ ಎಚ್ಚರಿಕೆ
ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲೆಯ 77.5% ಮತದಾನವಾಗಿತ್ತು ಎಂದು ರಷ್ಯಾದ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಮುಂದಿನ ಆರು ವರ್ಷಗಳವರೆಗೆ ವ್ಲಾಡಿಮಿರ್ ಪುಟಿನ್ ಅವರೇ ರಷ್ಯಾ ಅಧ್ಯಕ್ಷರಾಗಿ ಇರಲಿದ್ದಾರೆ. ಇವರು ಆರು ವರ್ಷ ರಷ್ಯಾ ಅಧ್ಯಕ್ಷರಾಗಿ ಆಡಳಿತ ನಡೆಸಿದರೆ ರಷ್ಯಾದ 200 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಅಧ್ಯಕ್ಷ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಅಧ್ಯಕ್ಷರಾಗಿ ಚುನಾಯಿತರಾದ ಬೆನ್ನಲ್ಲೇ ಪುಟಿನ್ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ್ದಾರೆ. ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಭಾಷಣ ಮಾಡಿದ ವ್ಲಾಡಿಮಿರ್ ಪುಟಿನ್, ಮಹಾಯುದ್ಧದ ಕುರಿತೇ ಪ್ರಸ್ತಾಪಿಸಿದರು. “ಮೂರನೇ ಮಹಾಯುದ್ಧಕ್ಕೆ ಒಂದೇ ಹೆಜ್ಜೆ ಬಾಕಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೂರನೇ ಮಹಾಯುದ್ಧದಲ್ಲಿ ಯಾರಿಗೆ ಆಸಕ್ತಿ ಇದೆ ಎಂಬುದು ಗೊತ್ತಿದೆ. ನ್ಯಾಟೋ ಪಡೆಗಳು ಈಗಾಗಲೇ ಉಕ್ರೇನ್‌ನಲ್ಲಿ ಬೀಡು ಬಿಟ್ಟಿವೆ. ಫ್ರಾನ್ಸ್ ಹಾಗೂ ಬ್ರಿಟನ್‌ವನ್ನು ಎದುರಿಸಲು ರಷ್ಯಾ ಸಜ್ಜಾಗಿದೆ” ಎಂದು ಬಹಿರಂಗವಾಗಿಯೇ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Vladimir Putin: ವ್ಲಾದಿಮಿರ್ ಪುಟಿನ್ ಹೊಸ ಪ್ರೇಯಸಿಯಂತೆ ಈ ಬಾರ್ಬಿ ಚೆಲುವೆ!
“ನ್ಯಾಟೋ ಪಡೆಗಳು ಉಕ್ರೇನ್‌ನಲ್ಲಿ ಬೀಡು ಬಿಟ್ಟಿರುವುದು ಮೂರನೇ ಮಹಾಯುದ್ಧಕ್ಕೆ ಪ್ರಚೋದನೆ ನೀಡುವಂತಿದೆ. ಆದರೆ, ಇದು ಅವರಿಗೆ ಔಚಿತ್ಯವಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ಮೃತಪಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಹೀಗಿದ್ದರೂ ಪ್ರಚೋದನೆ ನೀಡುತ್ತಿರುವುದು ಅಪಾಯಕಾರಿಯಾಗಿದೆ. ಹಾಗಾಗಿ, ನಾವು ಉಕ್ರೇನ್ ಮೇಲೆ ಮತ್ತೊಂದು ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುತ್ತೇವೆ” ಎಂದು ಹೇಳಿದ್ದಾರೆ. ಇದು ಈಗ ಉಕ್ರೇನ್ ಜನರಿಗೆ ಮತ್ತಷ್ಟು ಆತಂಕ ತಂದೊಡ್ಡಿದೆ. ಇದಕ್ಕೂ ಮೊದಲು ಕೂಡ ವ್ಲಾಡಿಮಿರ್ ಪುಟಿನ್ ಅವರು ಅಣ್ವಸ್ತ್ರ ದಾಳಿಯ ಎಚ್ಚರಿಕೆ ನೀಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ