ನವದೆಹಲಿ: ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು (Gurpatwant Singh Pannun) ಹತ್ಯೆ ಮಾಡಲು ಅಮೆರಿಕದಲ್ಲಿ ಭಾರತ ಸಂಚು ರೂಪಿಸಿದೆ ಎನ್ನುವ ಆರೋಪಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲ ಬಾರಿ ಪ್ರತಿಕ್ರಿಯಿಸಿದ್ದು, ಯಾವುದೇ ಪುರಾವೆಗಳನ್ನು ಒದಗಿಸಿದರೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. “ಯಾರಾದರೂ ನಮಗೆ ಯಾವುದೇ ಮಾಹಿತಿಯನ್ನು ನೀಡಿದರೆ, ನಾವು ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತೇವೆ” ಎಂದು ಮೋದಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ʼʼಕಾನೂನಿನ ನಿಯಮಕ್ಕೆ ನಾವು ಬದ್ಧʼʼ ಎಂದು ಪ್ರತಿಪಾದಿಸಿದ್ದಾರೆ.
52 ವರ್ಷದ ನಿಖಿಲ್ ಗುಪ್ತಾ ವಿರುದ್ಧ ಅಮೆರಿಕ, ಬಾಡಿಗೆಗಾಗಿ ಕೊಲೆ ಮಾಡಲು ಸಂಚು ರೂಪಿಸಿದ ಆರೋಪ ಹೊರಿಸಿದ್ದು, ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ನ್ಯೂಯಾರ್ಕ್ ದಕ್ಷಿಣ ಜಿಲ್ಲೆಯ ಯುಎಸ್ ಅಟಾರ್ನಿ ಮ್ಯಾಥ್ಯೂ ಜಿ ಓಲ್ಸೆನ್ ಹೇಳಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿರುವ ಸಿಖ್ ಪ್ರತ್ಯೇಕತಾವಾದಿ ನಾಯಕನನ್ನು ಕೊಲ್ಲಲು ನಿಖಿಲ್ ಗುಪ್ತಾ ಹಂತಕನಿಗೆ 100,000 ಡಾಲರ್ ಪಾವತಿಸಲು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತವು ಪನ್ನುನ್‌ನನ್ನು 2020ರಲ್ಲಿ ಭಯೋತ್ಪಾದಕ ಎಂದು ಘೋಷಿಸಿತ್ತು.
“ವಿದೇಶಗಳಲ್ಲಿ ನೆಲೆಗೊಂಡಿರುವ ಕೆಲವು ಉಗ್ರಗಾಮಿ ಗುಂಪುಗಳ ಚಟುವಟಿಕೆಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ” ಎಂದು ಹೇಳಿದ ಪ್ರಧಾನಿ, “ಈ ಶಕ್ತಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ, ಬೆದರಿಕೆಯಲ್ಲಿ ತೊಡಗಿವೆ ಮತ್ತು ಹಿಂಸಾಚಾರವನ್ನು ಪ್ರಚೋದಿಸಿವೆ” ಎಂದು ತಿಳಿಸಿದ್ದಾರೆ. ಹತ್ಯೆಯ ಸಂಚು ಭಾರತ-ಅಮೆರಿಕ ಮಧ್ಯೆ ಘರ್ಷಣೆಗೆ ಕಾರಣವಾಗಿದೆ ಎಂಬ ವದಂತಿಯ ಹೊರತಾಗಿಯೂ, “ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಸಹಕಾರ ನಮ್ಮ ಪಾಲುದಾರಿಕೆಯ ಪ್ರಮುಖ ಅಂಶ. ಕೆಲವು ಘಟನೆಗಳನ್ನು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳೊಂದಿಗೆ ಹೋಲಿಸುವುದು ಸರಿಯಲ್ಲ” ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸಿಖ್ಖರಿಗೆ ಸಾರ್ವಭೌಮ ರಾಷ್ಟ್ರಕ್ಕಾಗಿ ಸಾರ್ವಜನಿಕವಾಗಿ ಪ್ರತಿಪಾದಿಸಿದ ಭಾರತೀಯ ಮೂಲದ ಅಮೆರಿಕ ಪ್ರಜೆಯನ್ನು ನ್ಯೂಯಾರ್ಕ್ ನಗರದಲ್ಲಿ ಹತ್ಯೆ ಮಾಡಲು ಸಂಚಯ ರೂಪಿಸಲಾಗಿದೆ ಎಂದು ಅಮೆರಿಕ ಈ ಹಿಂದೆ ಆರೋಪಿಸಿತ್ತು. ಅಮೆರಿಕದ ಆರೋಪಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಮತ್ತು “ಅಗತ್ಯ ಕ್ರಮ” ಕೈಗೊಳ್ಳಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಘೋಷಿಸಿತ್ತು.
ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್‌ನಲ್ಲಿ ನಡೆದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ನವದೆಹಲಿಯ ಏಜೆಂಟರ ಕೈವಾಡವಿದೆಯೇ ಎಂದು ತಮ್ಮ ದೇಶ ತನಿಖೆ ನಡೆಸುತ್ತಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ಹೇಳಿಕೆ ನೀಡಿದ ನಂತರ ನವೆಂಬರ್‌ನಲ್ಲಿ ನ್ಯೂಯಾರ್ಕ್ ಭಾರತದ ವಿರುದ್ಧ ಆರೋಪ ಹೊರಿಸಿತ್ತು. ಈ ಆರೋಪಗಳಿಗೆ ತಿರುಗೇಟು ನೀಡಿರುವ ಭಾರತ, ಈ ಹೇಳಿಕೆಯನ್ನು “ಅಸಂಬದ್ಧ” ಎಂದು ಬಣ್ಣಿಸಿತ್ತು ಮತ್ತು 41 ಕೆನಡಾದ ರಾಜತಾಂತ್ರಿಕರನ್ನು ದೇಶವನ್ನು ತೊರೆಯುವಂತೆ ಒತ್ತಾಯಿಸುವ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಇದಕ್ಕೂ ಮೊದಲು ಜಸ್ಟಿನ್ ಟ್ರುಡೋ ಆರೋಪಿಸಿದ್ದರು.
ಇದನ್ನೂ ಓದಿ: ಪನ್ನುನ್ ಹತ್ಯೆಗೆ ಸ್ಕೆಚ್; ಅಮೆರಿಕ ಆರೋಪಕ್ಕೆ ಭಾರತ ಪ್ರತಿಕ್ರಿಯೆ, ಉನ್ನತ ಸಮಿತಿ ರಚನೆ