Site icon Vistara News

Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

Narendra Modi

Narendra Modi

ನವದೆಹಲಿ: ಜೂನ್‌ನಲ್ಲಿ ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಔಟ್ರೀಚ್ ಅಧಿವೇಶನ (G7 Summit Outreach Sessions)ಗಳಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಗುರುವಾರ ಆಹ್ವಾನ ನೀಡಿದ್ದಾರೆ.

ಇಟಲಿಯ ವಿಮೋಚನಾ ದಿನದ 79ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ದೂರವಾಣಿ ಸಂಭಾಷಣೆಯ ವೇಳೆ ಮೋದಿ ಈ ಆಹ್ವಾನ ಸ್ವೀಕರಿಸಿದರು. ಮಾತುಕತೆ ವೇಳೆ ಪ್ರಧಾನಮಂತ್ರಿ ಮೋದಿ ಅವರು ಮೆಲೋನಿ ಮತ್ತು ಇಟಲಿಯ ಜನತೆಗೆ ಶುಭಾಶಯಗಳನ್ನು ತಿಳಿಸಿದರು. ಜತೆಗೆ ಜಿ 7 ಆಹ್ವಾನವನ್ನು ನೀಡಿದ್ದಕ್ಕಾಗಿ ಅವರು ಮೆಲೋನಿಗೆ ಕೃತಜ್ಞತೆ ಸಲ್ಲಿಸಿದರು.

“ಇಟಲಿ ಇಂದು ತನ್ನ ವಿಮೋಚನಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮಾತನಾಡಿದೆ. ಜತೆಗೆ ಶುಭಾಶಯಗಳನ್ನು ಕೋರಿದ್ದೇನೆ. ಜೂನ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಗೆ ಆಹ್ವಾನಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಜಿ 7ನಲ್ಲಿ G20India ವಿಚಾರದ ಬಗ್ಗೆ ಚರ್ಚಿಸಲಾಯಿತು. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ ಸಾಧಿಸಿದ ಗಮನಾರ್ಹ ಫಲಿತಾಂಶಗಳನ್ನು, ವಿಶೇಷವಾಗಿ ಇಟಲಿಯ ಅಧ್ಯಕ್ಷತೆಯಲ್ಲಿ ಜರಗಲಿರುವ ಮುಂಬರುವ ಜಿ 7 ಶೃಂಗಸಭೆಯ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದರು. ಇಬ್ಬರೂ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಪರಸ್ಪರ ಹಿತಾಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ದೃಷ್ಟಿಕೋನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.

ಗ್ರೂಪ್ ಆಫ್ ಸೆವೆನ್ (ಜಿ 7) ಏಳು ಪ್ರಮುಖ ದೇಶಗಳನ್ನು ಒಳಗೊಂಡಿರುವ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಆರ್ಥಿಕ ನೀತಿ, ಜಾಗತಿಕ ಭದ್ರತೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಸಮನ್ವಯಗೊಳಿಸಲು ಈ ದೇಶಗಳು ವಾರ್ಷಿಕವಾಗಿ ಸಭೆ ಸೇರುತ್ತವೆ. ಕಳೆದ ವರ್ಷ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಜಪಾನ್ ಅಧ್ಯಕ್ಷತರಯಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ಪಿಎಂ ಮೋದಿ ಜಪಾನ್‌ನ ಹಿರೋಷಿಮಾಗೆ ಭೇಟಿ ನೀಡಿದ್ದರು. ಭೇಟಿಯ ಸಮಯದಲ್ಲಿ ಕೆಲವು ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದರು.

ಇದನ್ನೂ ಓದಿ: Giorgia Meloni: ಯುರೋಪ್‌ನಲ್ಲಿ ಇಸ್ಲಾಮ್‌ಗೆ ಜಾಗವಿಲ್ಲ: ಇಟಲಿ ಪ್ರಧಾನಿ ಬೋಲ್ಡ್‌ ಮಾತು

ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ

ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.

Exit mobile version