Site icon Vistara News

ಸ್ವೀಡನ್‌ನಲ್ಲಿರುವ ಕಾರು ದೆಹಲಿಯಿಂದಲೇ ಚಲಾಯಿಸಿದ ಮೋದಿ, 5G ಉದ್ಘಾಟನೆಗೆ ಕ್ಷಣಗಣನೆ

5g launch

ನವ ದೆಹಲಿ: ಭಾರತದಲ್ಲಿ 5G ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಮುನ್ನ ದೆಹಲಿಯ ಪ್ರಗತಿ ಮೈದಾನದಲ್ಲಿ ಅವರು 5G ಸೇವೆಗಳನ್ನು ಪರಿವೀಕ್ಷಿಸಿದರು. ಜತೆಗೆ ಇಂಡಿಯನ್‌ ಮೊಬೈಲ್‌ ಕಾಂಗ್ರೆಸ್‌ನ ಆರನೇ ಆವೃತ್ತಿಯನ್ನೂ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು 5G ತಂತ್ರಜ್ಞಾನದ ಹಲವು ಸೇವೆಗಳನ್ನು ವೀಕ್ಷಿಸಿದರು. ವರ್ಚುಯಲ್‌ ರಿಯಾಲಿಟಿಯ ಮೂಲಕ ಸ್ವೀಡನ್‌ನಲ್ಲಿರುವ ಕಾರನ್ನು ತಾವಿದ್ದಲ್ಲಿಂದಲೇ ಚಲಾಯಿಸಿದರು. ಈ ಸಂದರ್ಭದಲ್ಲಿ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು- Jio, Airtel ಮತ್ತು Vodafone Idea- ಪ್ರಧಾನ ಮಂತ್ರಿಗಳ ಮುಂದೆ ತಮ್ಮ ಸೇವೆಯ ಮಾದರಿಗಳನ್ನು, ಭಾರತದಲ್ಲಿ 5G ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸುವ ಯೋಜನೆಗಳನ್ನು ಪ್ರದರ್ಶಿಸಿದರು. ರಿಲಯನ್ಸ್‌ ಜಿಯೋ ಕಂಪನಿಯ ಚೇರ್‌ಮನ್‌ ಆಕಾಶ್‌ ಅಂಬಾನಿ ತಮ್ಮ ಕಂಪನಿಯ ಸೇವೆಗಳ ಪ್ರಾತ್ಯಕ್ಷಿಕೆ ನೀಡಿದರು.

ಮುಂಬೈನ ಶಾಲೆಯೊಂದರ ಶಿಕ್ಷಕರನ್ನು ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾದ ಮೂರು ವಿಭಿನ್ನ ಸ್ಥಳಗಳ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸುವ ಸೇವೆಯನ್ನು ರಿಲಯನ್ಸ್ ಜಿಯೋ ಪ್ರದರ್ಶಿಸಿತು. ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಹತ್ತಿರ ತರುವ ಮೂಲಕ, ಅವರ ನಡುವಿನ ಭೌತಿಕ ಅಂತರವನ್ನು ನಿವಾರಿಸುವ ಮೂಲಕ 5G ಶಿಕ್ಷಣವನ್ನು ಹೇಗೆ ಸುಗಮಗೊಳಿಸುತ್ತದೆ ಎಂಬುದನ್ನು ಪ್ರದರ್ಶಿಸಲಾಯಿತು.

ಭಾರತದಲ್ಲಿ ಇಂಟರ್‌ನೆಟ್‌ನ ಇನ್ನೊಂದು ಸುತ್ತಿನ ಕ್ರಾಂತಿಗೆ ಕಾರಣವಾಗಲಿರುವ 5ನೇ ತಲೆಮಾರಿನ ಸೇವೆಯ ಸಂಪರ್ಕ ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಪೂರ್ಣಗೊಳ್ಳಲಿದೆ. ಭಾರತದ 13 ನಗರಗಳಲ್ಲಿ ಜನತೆ ಈ ಸೇವೆಯನ್ನು ಸದ್ಯ ಪಡೆಯಲಿದ್ದಾರೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬಯಿ, ಪುಣೆಯಲ್ಲಿ ಇದು ಸಿಗಲಿದೆ.

ಇದನ್ನೂ ಓದಿ | 5G ಇಂಟರ್‌ನೆಟ್‌ ಸೇವೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ, ಏನೇನು ಇರಲಿದೆ?

Exit mobile version