ಅಬುಧಾಬಿ: ನರೇಂದ್ರ ಮೋದಿ ಅವರು ಗಲ್ಫ್ ರಾಷ್ಟ್ರವಾದ ಯುಎಇಗೆ ಭೇಟಿ ನೀಡಿದ್ದು (PM Modi UAE Visit) ಫಲಪ್ರದವಾಗಿದೆ. ಭಾರತ ಹಾಗೂ ಯುಎಇ ಮಧ್ಯೆ ಇನ್ನು ರೂಪಾಯಿ ಹಾಗೂ ದಿರ್ಹಮ್ ಕರೆನ್ಸಿಯಲ್ಲೇ ವಹಿವಾಟು ನಡೆಸಲಿದೆ. ಅಂದರೆ, ಭಾರತವು ವ್ಯಾಪಾರ ಮಾಡುವಾಗ ಯುಎಇಗೆ ಹಣ ಪಾವತಿಸಬೇಕಾದರೆ ರೂಪಾಯಿಯಲ್ಲೇ ಪಾವತಿಸಲಿದೆ. ಯುಎಇ ಭಾರತಕ್ಕೆ ದಿರ್ಹಮ್ ಪಾವತಿ ಮಾಡಲಿದೆ.
ನರೇಂದ್ರ ಮೋದಿ ಅವರು ಯುಎಇಗೆ ಶನಿವಾರ (ಜುಲೈ 15) ಒಂದು ದಿನದ ಪ್ರವಾಸ ಕೈಗೊಂಡಿದ್ದು, ಅಬುಧಾಬಿಯಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಯೇದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದರು. ಇದೇ ವೇಳೆ, ಆಯಾ ರಾಷ್ಟ್ರಗಳ ಕರೆನ್ಸಿಯನ್ನು ಬಳಸುವ ಮೂಲಕ ವ್ಯಾಪಾರ, ವಹಿವಾಟು ನಡೆಸಲು ಒಡಂಬಡಿಕೆ ಮಾಡಿಕೊಳ್ಳಲಾಯಿತು. ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಯುಎಇಯ ಸೆಂಟ್ರಲ್ ಬ್ಯಾಂಕ್ ಮಧ್ಯೆ ವಹಿವಾಟಿನ ಕುರಿತು ಒಡಂಬಡಿಕೆ (MoS) ಮಾಡಿಕೊಳ್ಳಲಾಗಿದೆ.
ಕರೆನ್ಸಿ ಒಡಂಬಡಿಕೆ
Flash: India, UAE sign MoU for use of Rupee, Dirham pic.twitter.com/O6Ke2ANtyd
— Sidhant Sibal (@sidhant) July 15, 2023
“ಇದೇ ಮೊದಲ ಬಾರಿಗೆ ಆರ್‌ಬಿಐ ಹಾಗೂ ಯುಎಇ ಸೆಂಟ್ರಲ್ ಬ್ಯಾಂಕ್ ಮಧ್ಯೆ ಒಡಂಬಡಿಕೆಯಾಗಿದೆ. ಇದರಿಂದ ಎರಡೂ ದೇಶಗಳ ಕರೆನ್ಸಿಯಲ್ಲೇ ವಹಿವಾಟು ಸಾಧ್ಯವಾಗಲಿದೆ. ಎರಡೂ ರಾಷ್ಟ್ರಗಳ ನಾಯಕರು ಪಾವತಿ ವ್ಯವಸ್ಥೆಯಲ್ಲಿ ಸಹಕಾರ ನೀಡಲು ಒಪ್ಪಿದ ಬಳಿಕ ಒಡಂಬಡಿಕೆ ಸಾಧ್ಯವಾಗಿದೆ. ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧವು ಇನ್ನಷ್ಟು ವೃದ್ಧಿಯಾಗಲಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: PM Modi UAE Visit: ಪ್ರಧಾನಿ ಮೋದಿಗೆ ಫ್ರೆಂಡ್‌ಶಿಪ್ ಬ್ಯಾಂಡ್ ತೊಡಿಸಿದ ಯುಎಇ ಅಧ್ಯಕ್ಷ
ನರೇಂದ್ರ ಮೋದಿ ಅವರಿಗೆ ಯುಎಇಯಲ್ಲಿ ಅದ್ಧೂರಿಯಾಗಿ ಸ್ವಾಗತ ದೊರೆಯಿತು. ಹಾಗೆಯೇ, ಮೋದಿ ಅವರಿಗಾಗಿ ವಿಶೇಷ ಭೋಜನ ಕೂಟವನ್ನೂ ಆಯೋಜಿಸಲಾಗಿತ್ತು. ಇದೇ ವೇಳೆ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಯೇದ್ ಅಲ್ ನಹ್ಯಾನ್ ಅವರು ಮೋದಿ ಅವರಿಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿ ಎರಡೂ ದೇಶಗಳ ಉತ್ತಮ ಬಾಂಧವ್ಯಕ್ಕೆ ನಾಂದಿ ಹಾಡಿದರು. ಮೂರು ದಿನಗಳಲ್ಲಿ ಫ್ರಾನ್ಸ್ ಹಾಗೂ ಯುಎಇ ಭೇಟಿ ಮುಗಿಸಿಕೊಂಡು ಮೋದಿ ಅವರು ಶನಿವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ.