ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ನಡೆದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿಚಾರಣೆ ಕೇವಲ ಮೂರೇ ದಿನದಲ್ಲಿ ಮುಕ್ತಾಯಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಜುಲೈ ೨೧ರಂದು ಜಾರಿ ನಿರ್ದೇಶನಾಲಯದಿಂದ ಸೋನಿಯಾ ವಿಚಾರಣೆ ಆರಂಭಗೊಂಡಿತ್ತು. ಬಳಿಕ ಮಂಗಳವಾರ ಮತ್ತು ಬುಧವಾರ ಎರಡು ದಿನ ನಡೆದು ಇದೀಗ ಬುಧವಾರ ಮಧ್ಯಾಹ್ನಕ್ಕೇ ಮುಕ್ತಾಯಗೊಂಡಿದೆ ಎಂದು ಹೇಳಲಾಗಿದೆ.
ಮೂರನೇ ದಿನದ ವಿಚಾರಣೆಗಾಗಿ ಸೋನಿಯಾ ಗಾಂಧಿ ಅವರು ಬೆಳಗ್ಗೆ ೧೧ ಗಂಟೆಗೆ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ್ದರು. ಮೂರು ಗಂಟೆಗಳ ವಿಚಾರಣೆ ಬಳಿಕ ಅವರು ಮಧ್ಯಾಹ್ನ ಎರಡು ಗಂಟೆಗೆ ಅಲ್ಲಿಂದ ಹೊರಗೆ ಹೊರಟಿದ್ದಾರೆ. ಅವರನ್ನು ಭೋಜನ ವಿರಾಮದ ಬಳಿಕ ಮರಳುವಂತೆ ಸೂಚಿಸಲಾಗಿಲ್ಲ. ಜತೆಗೆ ಮುಂದಿನ ದಿನಾಂಕವನ್ನೂ ತಿಳಿಸಿಲ್ಲ. ಹೀಗಾಗಿ ಈ ವಿಚಾರಣೆ ಇಲ್ಲಿಗೆ ಮುಕ್ತಾಯ ಕಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಜಾರಿ ನಿರ್ದೇಶನಾಲಯ ಇನ್ನೂ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಸೊನಿಯಾ ಗಾಂಧಿ ಅವರು ಮೊದಲ ದಿನ ಮೂರು ಗಂಟೆ, ಎರಡನೇ ದಿನ ಆರು ಗಂಟೆ ಮತ್ತು ಮೂರನೇ ದಿನ ಮೂರು ಗಂಟೆ ಹೀಗೆ ಒಟ್ಟು ೧೨ ಗಂಟೆಗಳ ಕಾಲ ವಿಚಾರಣೆ ಎದುರಿಸಿದಂತಾಗಿದೆ. ಅವರಿಗೆ ಮೊದಲ ದಿನ ೨೮, ಎರಡನೇ ದಿನ ೫೫ ಮತ್ತು ಮೂರನೇ ದಿನ ೧೭ ಹೀಗೆ ಒಟ್ಟು ೧೦೦ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ವಿಚಾರಣೆಗೆ ಒಳಗಾದ ರಾಹುಲ್ ಗಾಂಧಿ ಅವರನ್ನು ಐದು ದಿನಗಳ ಕಾಲ ಇ.ಡಿ. ಕಚೇರಿಗೆ ಕರೆಸಲಾಗಿತ್ತು. ೫೫ ಗಂಟೆ ವಿಚಾರಿಸಲಾಗಿತ್ತು. ಅವರಿಗೂ ೧೦೦ ಪ್ರಶ್ನೆ ಕೇಳಲಾಗಿತ್ತು.
ಮುಂದುವರಿದ ಪ್ರತಿಭಟನೆ
ಈ ನಡುವೆ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಂಸದರು ದಿಲ್ಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿದರು. ಈ ವೇಳೆ ೬೬ ಮಂದಿ ಕಾಂಗ್ರೆಸ್ ಸಂಸದರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.