ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ನಡೆಯಲಿರುವ ಜಿ 20 ಶೃಂಗಸಭೆಗೆ (National Nutrition Week 2023) ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ದೆಹಲಿಯನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗುತ್ತಿದೆ. ಜಿ 20 ಸದಸ್ಯ ರಾಷ್ಟ್ರಗಳ ನಾಯಕರು ಆಗಮಿಸುವ ಕಾರಣ ಸಭೆಯ ಆಯೋಜನೆಯಲ್ಲಿ ಅದ್ಧೂರಿತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇನ್ನು ಸಭೆಗೆ ಆಯೋಜಿಸುವ ವಿದೇಶಿ ಗಣ್ಯರಿಗೆ ಪೌಷ್ಟಿಕಾಂಶಯುಕ್ತ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದ ರಾಗಿ ಸೇರಿ ಹಲವು ಸಿರಿಧಾನ್ಯಗಳ ಭರಪೂರ ಭೋಜನದ ಮೆನು ಲಭ್ಯವಾಗಿದೆ.
ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ವಿದೇಶದ 500 ಗಣ್ಯರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಅದರಲ್ಲೂ, 2023ಅನ್ನು ಸಿರಿಧಾನ್ಯಗಳ ವರ್ಷ ಎಂಬುದಾಗಿ ಆಚರಿಸಲಾಗುತ್ತಿದೆ. ಹಾಗಾಗಿ, ವಿದೇಶಿ ಗಣ್ಯರಿಗೆ ರಾಗಿ, ಜೋಳ ಸೇರಿ ಹಲವು ಸಿರಿಧಾನ್ಯಗಳಿಂದ ತಯಾರಿಸಿದ, ವಿಧವಿಧದ ತಿನಿಸುಗಳನ್ನು ಬಡಿಸಲಾಗುತ್ತದೆ. ಸುಮಾರು 120 ಬಗೆಯ ತಿನಿಸುಗಳ ರುಚಿಯನ್ನು ವಿದೇಶಿ ಗಣ್ಯರು ನೋಡಲಿದ್ದಾರೆ.
ಹೀಗಿದೆ ಊಟದ ಮೆನು
ವಿದೇಶಿ ಗಣ್ಯರಿಗೆ ತಿಂಡಿ, ಊಟ, ಜ್ಯೂಸ್, ಐಸ್‌ಕ್ರೀಮ್ ಸೇರಿ ಹಲವು ತಿನಿಸುಗಳನ್ನು ತಯಾರಿಸಲಾಗುತ್ತದೆ. ರಾಗಿ ದೋಸೆ, ರಾಗಿ ಪಡ್ಡು, ರಾಗಿ ಬಾದಾಮಿ ಲಡ್ಡು, ಬಜ್ರೆಯ ಬರ್ಫಿ, ಕಾಜು ಪಿಸ್ತಾ ರೋಲ್, ಬಜ್ರೆ ಖೀರ್, ಭಾಪಾ ದೋಯಿ, ಅವಕಾಡೊ ಸಲಾಡ್ ಸೇರಿ ಹಲವು ಬಗೆಯ ತಿನಿಸುಗಳನ್ನು ತಯಾರಿಸಲು ವ್ಯವಸ್ಥೆ ಮಾಡಲಾಗಿದೆ.
“ಭಾರತದಲ್ಲಿ ಸಿರಿಧಾನ್ಯಗಳ ಬಳಕೆ ಶತಮಾನಗಳಿಂದಲೂ ಇದೆ. ಸಿರಿಧಾನ್ಯಗಳು ಅಪಾರ ಪ್ರಮಾಣದಲ್ಲಿ ಪೌಷ್ಟಿಕಾಂಶವನ್ನು ಹೊಂದಿವೆ. ಹಾಗಾಗಿ, ವಿದೇಶಿ ಗಣ್ಯರಿಗೆ ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ. ಆ ಮೂಲಕ ಸಿರಿಧಾನ್ಯಗಳ ಪ್ರಾಮುಖ್ಯತೆಯನ್ನು ವಿದೇಶಿ ಗಣ್ಯರಿಗೂ ಮನವರಿಕೆ ಮಾಡಲಾಗುತ್ತದೆ” ಎಂದು ತಾಜ್ ಹೋಟೆಲ್ ಮುಖ್ಯ ಬಾಣಸಿಗ (ಶೆಫ್) ಅರುಣ್ ಸುಂದರ್‌ರಾಜ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: G20 Summit 2023: ವಿಶ್ವನಾಯಕರು ಪಾಲ್ಗೊಳ್ಳುವ ಜಿ20 ಶೃಂಗ ಸಭೆಗೆ ಭಾರೀ ಭದ್ರತೆ, 1.30 ಲಕ್ಷ ಸಿಬ್ಬಂದಿ ನಿಯೋಜನೆ
1.30 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ
ವಿಶ್ವದ ಪ್ರಮುಖ ನಾಯಕರೆಲ್ಲರೂ ಪಾಲ್ಗೊಳ್ಳಲಿರುವ ಈ ಸಭೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು 1,30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ 80 ಸಾವಿರ ದಿಲ್ಲಿ ಪೊಲೀಸರು ಇರಲಿದ್ದಾರೆ. ದಿಲ್ಲಿ ಪೊಲೀಸ್ ಮತ್ತು ಕೇಂದ್ರ ಭದ್ರತಾ ಪಡೆಗಳು ಸುಮಾರು 45 ಸಾವಿರ ಭದ್ರತಾ ಸಿಬ್ಬಂದಿ ಖಾಕಿ ವೇಷದಲ್ಲಿ ಇರದೇ ನೀಲಿ ಯೂನಿಫಾರ್ಮ್‌ನಲ್ಲಿ ಇರಲಿದ್ದಾರೆ. ಈ 45 ಸಾವಿರ ಭದ್ರತಾ ಪಡೆಯಲ್ಲಿ ಕಮಾಂಡೋಗಳಿದ್ದು, ಅವರು ಹೆಲಿಕಾಪ್ಟರ್‌ಗಳಿಂದ ಇಳಿಯುವ ತರಬೇತಿ ಪಡೆದುಕೊಂಡಿದ್ದಾರೆ. ನಿಖರವಾದ ಚಾಲನಾ ಕೌಶಲ್ಯದೊಂದಿಗೆ ವೈಯಕ್ತಿಕ ಭದ್ರತಾ ಅಧಿಕಾರಿಗಳಂತೆ ಕಾರ್ಯನಿರ್ವಹಿಸಲಿದ್ದಾರೆ. ಭಾರತವು ತನ್ನ ಅತಿಥಿಗಳನ್ನು ರಕ್ಷಿಸುವ ಕರ್ತವ್ಯವನ್ನು ಪೂರೈಸಲು ಇವರು ಸಹಾಯ ಮಾಡಲಿದ್ದಾರೆ.