ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಸ್. ನಿಜಲಿಂಗಪ್ಪ ಅವರ ನಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಎರಡನೇ ಅಧ್ಯಕ್ಷರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗುವ ಮೂಲಕ, ರಾಷ್ಟ್ರೀಯ ಪಕ್ಷಗಳಲ್ಲಿ ಕನ್ನಡಿಗರ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೆ ಬಿಜೆಪಿ ಕಾಂಗ್ರೆಸ್‌ನ ಪ್ರಮುಖ ಸ್ಥಾನಗಳಲ್ಲಿ ಕನ್ನಡಿಗರಿದ್ದಾರೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಿ.ವಿ. ಶ್ರೀನಿವಾಸ್ ಈಗಾಗಲೆ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಜೆಪಿಯ ಸಂಘಟನೆಯಲ್ಲೂ ಅನೇಕ ಕನ್ನಡಿಗರಿದ್ದಾರೆ. ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್. ಸಂತೋಷ್ ಇದ್ದಾರೆ. ಅವರು ಬಿಜೆಪಿಯ ಅತ್ಯುನ್ನತ ನಿರ್ಧಾರಕ ಸಮಿತಿಯಾದ ಸಂಸದೀಯ ಮಂಡಳಿಯಲ್ಲೂ ಸದಸ್ಯರಾಗಿದ್ದಾರೆ. ಇತ್ತೀಚೆಗಷ್ಟೆ ಬಿ.ಎಸ್. ಯಡಿಯೂರಪ್ಪ ಅವರನ್ನೂ ಈ ಮಂಡಳಿಗೆ ನೇಮಿಸಲಾಗಿದೆ.
ರಾಜ್ಯದ ಮತ್ತೊಬ್ಬ ನಾಯಕ ಸಿ.ಟಿ. ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅನೇಕ ರಾಜ್ಯಗಳ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ಯುವ ಘಟಕದಂತೆಯೇ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿಯೂ ಕನ್ನಡಿಗರೇ ಇದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಯುವಮೋರ್ಚಾ ಅಧ್ಯಕ್ಷರಾಗಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕನ್ನಡಿಗರಿಗೆ ಹೆಚ್ಚು ಪ್ರಾಶಸ್ತ್ಯ ದೊರಕುತ್ತಿರುವುದು, ಈ ಪಕ್ಷಗಳು ದಕ್ಷಿಣ ಭಾರತವನ್ನು, ಮುಖ್ಯವಾಗಿ ಕರ್ನಾಟಕವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿವೆ ಎಂಬ ಸಂದೇಶವನ್ನು ನೀಡುತ್ತಿವೆ.
ಇದನ್ನೂ ಓದಿ | Kharge Congress President | ಮಲ್ಲಿಕಾರ್ಜುನ ಖರ್ಗೆಗೆ ಶುಭಾಶಯಗಳ ಸುರಿಮಳೆ! ಯಾರು, ಏನು ಹೇಳಿದರು?