Site icon Vistara News

Narendra Modi: ಬಿಹಾರದಲ್ಲಿ ಮೋದಿ ಅಲೆ; ಚಿರಾಗ್‌ ಪಾಸ್ವಾನ್ ನನ್ನ ಬ್ರದರ್ ಎಂದ ಪ್ರಧಾನಿ

Narendra Modi

NDA will win all 40 Bihar seats: PM Narendra Modi campaigns for little brother Chirag Paswan

ಪಟನಾ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಿಹಾರದಲ್ಲಿ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಬಿಹಾರದ ಜಮುಯಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, “ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟವು ಎಲ್ಲ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ” ಎಂದರು. ಹಾಗೆಯೇ, ಲೋಕ ಜನಶಕ್ತಿ ಪಕ್ಷದ (Lok Janshakti Party) ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ (Chirag Paswan) ಅವರನ್ನು “ನನ್ನ ಕಿರಿಯ ಸಹೋದರ” ಎಂದು ಕರೆದರು.

ಚಿರಾಗ್‌ ಪಾಸ್ವಾನ್‌ ಅವರು ಕೆಲ ದಿನಗಳ ಹಿಂದಷ್ಟೇ ಎನ್‌ಡಿಎ ಮೈತ್ರಿಕೂಟದ ಜತೆ ಕೈಜೋಡಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಜಮುಯಿ ಕ್ಷೇತ್ರದಿಂದ ಸ್ಪರ್ಧಿಸಿರುವ ಚಿರಾಗ್‌ ಪಾಸ್ವಾನ್‌ ಪರ ನರೇಂದ್ರ ಮೋದಿ ಪ್ರಚಾರ ನಡೆಸಿದರು. ಸಮಾವೇಶದಲ್ಲಿ ಮಾತನಾಡಿದ ಅವರು, “ನನ್ನ ಕಿರಿಯ ಸಹೋದರ ಚಿರಾಗ್‌ ಪಾಸ್ವಾನ್‌ ಅವರು ನನ್ನ ಗೆಳೆಯ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಹಾದಿಯಲ್ಲಿಯೇ ಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ” ಎಂದರು. ಹಾಗೆಯೇ, “ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬಿಹಾರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳಿಗೆ ಟಾಂಗ್‌

ಭಾಷಣದ ವೇಳೆ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳಿಗೆ ಟಾಂಗ್‌ ಕೊಟ್ಟರು. “ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಸ್ಥಿರ ಆಡಳಿತ ನೀಡುತ್ತಿದ್ದೇವೆ. ದೇಶವನ್ನು ಸಮಗ್ರವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇವೆ. ಆದರೆ, ಪ್ರತಿಪಕ್ಷಗಳು ಪ್ರತಿಯೊಂದರಲ್ಲೂ ರಾಜಕೀಯ ಮಾಡುತ್ತಿವೆ. ಬಿಹಾರದ ಕರ್ಪೂರಿ ಠಾಕೂರ್‌ ಅವರಿಗೆ ಭಾರತರತ್ನ ಕೊಟ್ಟಿದ್ದನ್ನೂ ಪ್ರತಿಪಕ್ಷಗಳು ವಿರೋಧಿಸಿದವು. ಇದು ಅವರ ಮನಸ್ಥಿತಿಯಾಗಿದೆ. ಇದೇ ಕಾರಣಕ್ಕೆ ಜನ ಅವರನ್ನು ದೂರ ಇಟ್ಟಿದ್ದಾರೆ. ನಾವು ಭ್ರಷ್ಟಾಚಾರವನ್ನು ತೊಲಿಗಿಸಿ ಎಂದರೆ, ಅವರು ಭ್ರಷ್ಟಾಚಾರವನ್ನು ರಕ್ಷಿಸಿ ಎಂಬುದಾಗಿ ಹೇಳುತ್ತಿದ್ದಾರೆ” ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ಇದನ್ನೂ ಓದಿ: ಬಿಹಾರದಲ್ಲಿ ಒಂದೇ ಏಟಿಗೆ ಚಿರಾಗ್‌ ಪಾಸ್ವಾನ್‌ ಪಕ್ಷ ತೊರೆದ 22 ನಾಯಕರು; ‘ಇಂಡಿಯಾ’ ಸೇರ್ಪಡೆ?

ಮೋದಿಗೆ ಧನ್ಯವಾದ ಎಂದ ಚಿರಾಗ್‌

ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಚಿರಾಗ್‌ ಪಾಸ್ವಾನ್‌, “ನರೇಂದ್ರ ಮೋದಿ ಅವರು ನನಗೆ ಜಮುಯಿ ಕ್ಷೇತ್ರವನ್ನು ಆಯ್ಕೆ ಮಾಡಿದ್ದಲ್ಲದೆ, ನನ್ನ ಪರವಾಗಿ ಪ್ರಚಾರ ಮಾಡುತ್ತಿರುವುದಕ್ಕೆ ಧನ್ಯವಾದಗಳು” ಎಂದರು. ಬಿಹಾರದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮಿತ್ರ ಪಕ್ಷ ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಎಲ್‌ಜೆಪಿ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಆದರೆ, ಎಲ್‌ಜೆಪಿಯಲ್ಲಿ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಮತ ಎದುರಾಗಿದೆ. ಇದರ ಭಾಗವಾಗಿ ಎಲ್‌ಜೆಪಿ 22 ನಾಯಕರು ಪಕ್ಷ ತೊರೆದಿದ್ದಾರೆ. ಇದು ಲೋಕಸಭೆ ಚುನಾವಣೆಯಲ್ಲಿ ಎಲ್‌ಜೆಪಿ ಮಾತ್ರವಲ್ಲ ಎನ್‌ಡಿಎ ಒಕ್ಕೂಟಕ್ಕೆ ಪೆಟ್ಟು ಬಿದ್ದಂತಾಗಿದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version