Site icon Vistara News

NEET-UG: ನೀಟ್‌ ಪರೀಕ್ಷೆ ವೇಳೆ ವಂಚನೆ; 10 ಲಕ್ಷ ರೂ.ಗೆ ಬೇಡಿಕೆ ಇಟ್ಟ ಶಿಕ್ಷಕ ಸೇರಿ ಮೂವರ ವಿರುದ್ಧ ಬಿತ್ತು ಕೇಸು

NEET-UG

NEET-UG

ಗಾಂಧಿನಗರ: ನೀಟ್-ಯುಜಿ (NEET-UG) ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಆರು ಅಭ್ಯರ್ಥಿಗಳಿಂದ ತಲಾ 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಅವರನ್ನು ತೇರ್ಗಡೆ ಮಾಡುವುದಾಗಿ ಭರವಸೆ ನೀಡಿದ್ದ ಆರೋಪದ ಮೇಲೆ ಶಾಲಾ ಶಿಕ್ಷಕ ಮತ್ತು ಇತರ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಭಾನುವಾರ (ಮೇ 5) ನೀಟ್-ಯುಜಿ ಪರೀಕ್ಷೆ ನಡೆಸಿತ್ತು. ಈ ವೇಳೆ ಗೋಧ್ರಾ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆದಿದೆ ಎಂಬ ಸುಳಿವು ಜಿಲ್ಲಾಧಿಕಾರಿಗೆ ದೊರೆತ ನಂತರ ತನಿಖೆ ನಡೆಸಲಾಗಿತ್ತು. ಈ ವೇಳೆ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳು

ಸದ್ಯ ಭೌತಶಾಸ್ತ್ರ ಶಿಕ್ಷಕ ತುಷಾರ್ ಭಟ್ ಮತ್ತು ಪರಶುರಾಮ್ ರಾಯ್, ಆರಿಫ್ ವೋರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತುಷಾರ್ ಭಟ್‌ ಕಾರಿನಲ್ಲಿ 7 ಲಕ್ಷ ರೂ. ಪತ್ತೆಯಾಗಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ. ಇದು ಅಭ್ಯರ್ಥಿಯೊಬ್ಬರನ್ನು ಮೆರಿಟ್ ಪಟ್ಟಿಗೆ ಸೇರಿಸಲು ಸಹಾಯ ಮಾಡುವಂತೆ ವೋರಾ ಮುಂಗಡವಾಗಿ ಪಾವತಿಸಿದ ಮೊತ್ತ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ಹೇಗೆ?

ವಿಚಾರಣೆ ವೇಳೆ ವಂಚನೆಯ ಜಾಲದ ವಿವರ ಬೆಳಕಿಗೆ ಬಂದಿದೆ. ಆರೋಪಿಗಳು ಮತ್ತು ಕೆಲವು ನೀಟ್-ಯುಜಿ ಆಕಾಂಕ್ಷಿಗಳ ನಡುವೆ ಒಪ್ಪಂದ ನಡೆದಿತ್ತು. ಅದರ ಪ್ರಕಾರ ಅಭ್ಯರ್ಥಿಗಳು ತಮಗೆ ಗೊತ್ತಿಲ್ಲದ ಪ್ರಶ್ನೆಗೆ ಉತ್ತರ ಬರೆಯದೆ ಹಾಗೆ ಖಾಲಿ ಬಿಡಬೇಕಿತ್ತು. ಪರೀಕ್ಷೆಯ ನಂತರ ಉತ್ತರ ಪತ್ರಿಕೆಯನ್ನು ಸಂಗ್ರಹಿಸಿ ಆ ಖಾಲಿ ಸ್ಥಳವನ್ನು ಭರ್ತಿ ಮಾಡುವುದಾಗಿ ಒಪ್ಪಂದ ನಡೆದಿತ್ತು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಜಿಲ್ಲಾ ಶಿಕ್ಷಣ ಅಧಿಕಾರಿಯ ದೂರಿನ ಮೇರೆಗೆ ಗೋಧ್ರಾ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯ್ ಜಲರಾಮ್ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ತುಷಾರ್ ಭಟ್ ನೀಟ್‌ ಕೇಂದ್ರದ ಉಪ ಅಧೀಕ್ಷಕರಾಗಿ ನೇಮಕಗೊಂಡಿದ್ದರು. ತನಿಖೆ ವೇಳೆ ಅವರ ಮೊಬೈಲ್‌ನಲ್ಲಿ ಸಾಕ್ಷಿ ದೊರೆತಿದೆ. ಪರಶುರಾಮ್ ರಾಯ್ ವ್ಯಾಟ್‌ಆ್ಯಪ್‌ ಮೂಲಕ ಕಳುಹಿಸಿದ 16 ಅಭ್ಯರ್ಥಿಗಳ ಪಟ್ಟಿ ಕಂಡು ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಪಟ್ಟಿಯ ಬಗ್ಗೆ ಕೇಳಿದಾಗ ತುಷಾರ್‌ ಭಟ್‌, ಇವರು ತಮ್ಮ ಕೇಂದ್ರದಲ್ಲಿ ನೀಟ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಎಂದು ಹೇಳಿದ್ದಾರೆ. ಈ ಅಭ್ಯರ್ಥಿಗಳು ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಲು ತಲಾ 10 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಕಿರಿತ್ ಪಟೇಲ್ ತಿಳಿಸಿದ್ದಾರೆ.

ಸದ್ಯ ತುಷಾರ್‌ ಭಟ್‌ ಅವರ ಮೊಬೈಲ್‌ ಫೋನ್‌, ನಗದು ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಮೂವರು ಆರೋಪಿಗಳ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಲಾಗಿದೆ ಎಂದು ಗೋಧ್ರಾ ತಾಲೂಕು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Viral News: ತಮ್ಮನ ಬದಲು ನೀಟ್‌ ಪರೀಕ್ಷೆ ಬರೆದ ಅಣ್ಣ; ಕೊನೆಯ ಕ್ಷಣದಲ್ಲಿ ಸಹೋದರರ ಕಳ್ಳಾಟ ಬಯಲಾಗಿದ್ದು ಹೇಗೆ?

Exit mobile version