Site icon Vistara News

NEET UG 2024: ನೀಟ್‌ ಅಕ್ರಮ; ನಾಲ್ವರು ಏಮ್ಸ್‌ ವಿದ್ಯಾರ್ಥಿಗಳು ಸಿಬಿಐ ಬಲೆಗೆ

Neet UG

ನವದೆಹಲಿ: ನೀಟ್-ಯುಜಿ 2024 (NEET UG 2024) ಅಕ್ರಮಕ್ಕೆ ಸಂಬಂಧಿಸಿದಂತೆ ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್‌ನ ನಾಲ್ಕು ವಿದ್ಯಾರ್ಥಿಗಳನ್ನು ಕೇಂದ್ರೀಯ ತನಿಖಾ ದಳ (CBI) ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.

ಕೆಲವು ದಿನಗಳ ಹಿಂದೆಯಷ್ಟೇ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್ ಅಲಿಯಾಸ್ ಆದಿತ್ಯ ಮತ್ತು ರಾಜು ಸಿಂಗ್ ಅವರನ್ನು ಪಾಟ್ನಾ ಮತ್ತು ಹಜಾರಿಬಾಗ್ (ಜಾರ್ಖಂಡ್)ನಿಂದ ಅರೆಸ್ಟ್‌ ಮಾಡಲಾಗಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಗ್ಯಾಂಗ್‌ನೊಂದಿಗೆ ಏಮ್ಸ್-ಪಾಟ್ನಾ ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

ಅವರ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಸಹ ತನಿಖಾ ಸಂಸ್ಥೆ ವಶಪಡಿಸಿಕೊಂಡಿದೆ. 2021 ರ ಬ್ಯಾಚ್‌ಗೆ ಸೇರಿದ ವಿದ್ಯಾರ್ಥಿಗಳನ್ನು ನಿನ್ನೆ ತಡರಾತ್ರಿ ಅವರ ಹಾಸ್ಟೆಲ್‌ನಿಂದ ಕರೆತಂದ ನಂತರ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ತನಿಖೆಯಲ್ಲಿರುವ ವಿದ್ಯಾರ್ಥಿಗಳ ಕೊಠಡಿಗಳನ್ನು ಸೀಲ್ ಮಾಡಲಾಗಿದೆ.

ಪಂಕಜ್‌ ಕುಮಾರ್‌ 2017 ಬ್ಯಾಚ್‌ನ ಸಿವಿಲ್‌ ಎಂಜಿನಿಯರ್‌ ಆಗಿದ್ದು, ಈತ ಜಮ್ಶೆಡ್‌ಪುರದ ಎನ್‌ಐಟಿಯಲ್ಲಿ ಎಂಜಿಯರಿಂಗ್‌ ಪದವಿ ಪಡೆದಿದ್ದಾನೆ. ಈತ ಹಜಾರಿಭಾಗ್‌ನಲ್ಲಿ ಪ್ರಶ್ನೆ ಪತ್ರಿಕೆ ಕದ್ದಿದ್ದ ಎನ್ನಲಾಗಿದೆ. ಸದ್ಯ ಆತನನ್ನು ಪಾಟ್ನಾದಿಂದ ಅರೆಸ್ಟ್‌ ಮಾಡಲಾಗಿದೆ. ಕಾಗದವನ್ನು ಕದ್ದು ಇತರ ಗ್ಯಾಂಗ್ ಸದಸ್ಯರಿಗೆ ರವಾನಿಸಲು ಕುಮಾರ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ರಾಜು ಸಿಂಗ್‌ನನ್ನು ಸಿಬಿಐ ಬಂಧಿಸಿದೆ, ಸಿಂಗ್ ಅವರನ್ನು ಹಜಾರಿಬಾಗ್‌ನಿಂದ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ,

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG 2024) ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬುದಾಗಿ ಸಲ್ಲಿಕೆಯಾದ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ನೀಟ್‌ ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಗುತ್ತಿದೆ. ಇದರ ಮಧ್ಯೆಯೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಹತ್ವದ ಮುನ್ನಡೆ ಸಾಧಿಸಿದ್ದು, ನೀಟ್‌ ಪ್ರಶ್ನೆಪತ್ರಿಕೆ (NEET UG 2024 Paper Leak) ಸೋರಿಕೆ ಪ್ರಕರಣದ ಕಿಂಗ್‌ಪಿನ್‌ ಆಗಿರುವ ರಾಕೇಶ್‌ ರಂಜನ್‌ (Rakesh Ranjan) ಎಂಬಾತನನ್ನು ಬಂಧಿಸಿದ್ದರು.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಮಧ್ಯೆಯೇ, ಬಿಹಾರದ ಪಟನಾದಲ್ಲಿ ಎರಡು ಕಡೆ ಹಾಗೂ ಪಶ್ಚಿಮ ಬಂಗಾಳದ ಕೋಲ್ಕೊತಾದಲ್ಲಿ ಎರಡು ಕಡೆ ಸಿಬಿಐ ಅಧಿಕಾರಿಗಳು ಗುರುವಾರ (ಜುಲೈ 11) ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಬಿಹಾರದ ಪಟನಾದಲ್ಲಿ ರಾಕೇಶ್‌ ರಂಜನ್‌ ಅಲಿಯಾಸ್‌ ರಾಕಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈತನನ್ನು ಕೋರ್ಟ್‌ಗೂ ಹಾಜರುಪಡಿಸಲಾಗಿದ್ದು, 10 ದಿನ ಸಿಬಿಐ ಕಸ್ಟಡಿಗೆ ನೀಡಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: NEET UG 2024: “ವಿದ್ಯಾರ್ಥಿಗಳ ಗುರುತು ಬಹಿರಂಗ ಪಡಿಸದೇ ನೀಟ್‌ ಫಲಿತಾಂಶ ಪ್ರಕಟಿಸಿ”-NTAಗೆ ಸುಪ್ರೀಂ ಸೂಚನೆ; ವಿಚಾರಣೆ ಮುಂದೂಡಿಕೆ

Exit mobile version