ಕೊಚ್ಚಿ: ಭಾರತೀಯ ನೌಕಾಪಡೆಗೆ ಸ್ವದೇಶಿ ನಿರ್ಮಿತ ಹಡಗಿನ ಜತೆಗೆ ಹೊಚ್ಚ ಹೊಸ ಧ್ವಜವೂ ಲಭಿಸಿದೆ. ಈ ಬಾರಿ ರೂಪಿಸಿರುವ ಧ್ವಜದಲ್ಲಿ, ಬ್ರಿಟಿಷರ ವಸಾಹತು ಗುರುತನ್ನು ಸಂಪೂರ್ಣ ಅಳಿಸಿರುವ ಜತೆಗೇ ಸ್ವದೇಶಿ ತತ್ವವನ್ನೂ ಅಳವಡಿಸಲಾಗಿದೆ.
ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಮತ್ತು ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಹಡಗಿನ ಕಾರ್ಯಾರಂಭಕ್ಕೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿಯಲ್ಲಿ ಚಾಲನೆ ನೀಡಿದರು. ಇದೇ ವೇಳೆ ನೌಕಾಪಡೆಯ ನೂತನ ಧ್ವಜವನ್ನೂ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಗುಲಾಮಿ ಮಾನಸಿಕತೆಯಿಂದ ನಮ್ಮ ನಿಜವಾದ ಶಕ್ತಿಯನ್ನು ಕಳೆದುಕೊಂಡಿದ್ದೆವು. ಈಗ ಕಾಲ ಬದಲಾಗಿದೆ. ಗುಲಾಮಿತನದಿಂದ ಹೊರಗೆ ಬರುತ್ತಿದ್ದೇವೆ. ಸೆಪ್ಟೆಂಬರ್ 2 ಐತಿಹಾಸಿಕ ದಿನವಾಗಿದೆ. ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆಯಾಗುವುದು ಮಾತ್ರವಲ್ಲದೇ, ಮತ್ತೊಂದು ಗುಲಾಮಿ ಸಂಕೇತಕ್ಕೆ ತಿಲಾಂಜಲಿ ಇಡುತ್ತಿದ್ದೇವೆ. ಗುಲಾಮಿ ಸಂಕೇತವಾಗಿದ್ದ ಈಗಿರುವ ನೌಕಾಪಡೆಯ ಧ್ವಜದ ಬದಲಿಗೆ ಹೊಸ ಧ್ವಜವನ್ನು ನೌಕಾಪಡೆ ಇಂದಿನಿಂದ ಅಳವಡಿಸಿಕೊಳ್ಳುತ್ತಿದೆ. ಈ ಹೊಸ ಧ್ವಜವನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಅರ್ಪಿಸುತ್ತೇನೆ. ಈ ಧ್ವಜವು ನೌಕಾಪಡೆಯ ಆತ್ಮ ಸಮ್ಮಾನ ಮತ್ತು ಆತ್ಮಬಲವನ್ನು ಹೆಚ್ಚಿಸಲಿದೆ ಎಂದು ಹೇಳಿದರು.
ಧ್ವಜದಲ್ಲಿದ್ದ ಸೇಂಟ್ ಜಾರ್ಜ್ ಕ್ರಾಸ್‌ಗೆ ತಿಲಾಂಜಲಿ
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸುವವರೆಗೂ ಸೇಂಟ್ ಜಾರ್ಜ್ ಕ್ರಾಸ್ ಎನ್ನಲಾಗುವ ಕೆಂಪು ಬಣ್ಣದ ಪ್ಲಸ್ ಆಕಾರದ ಒಂದು ಮೂಲೆಯಲ್ಲಿ ಬ್ರಿಟನ್ ಧ್ವಜವನ್ನು(ಯೂನಿಯನ್ ಜಾಕ್) ಅಳವಡಿಸಲಾಗಿತ್ತು. 1950ರಲ್ಲಿ ಯೂನಿಯನ್ ಜಾಕ್ ಸ್ಥಳದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅಳವಡಿಸಲಾಯಿತು. 2001ರಲ್ಲಿ ತ್ರಿವರ್ಣ ಧ್ವಜವನ್ನು ಉಳಿಸಿಕೊಂಡು ಸೇಂಟ್ ಜಾರ್ಜ್ ಕ್ರಾಸ್ ತೆಗೆಯಲಾಯಿತು, ಒಂದು ಮೂಲೆಗೆ ನೌಕಾದಳದ ಲಾಂಛನವನ್ನು ಅಳವಡಿಸಲಾಯಿತು. 2004 ರಲ್ಲಿ ಮತ್ತೆ ಹಿಂದಿನ ಸ್ಥಿತಿಗೇ ಮರಳಲಾಯಿತು. ಇದೀಗ ಮತ್ತೆ ನೌಕಾದಳದ ಲಾಂಛನವನ್ನು ಸೇರ್ಪಡೆ ಮಾಡಿ ಸೇಂಟ್ ಜಾರ್ಜ್ ಕ್ರಾಸ್ ಅನ್ನು ತೆಗೆದುಹಾಕಲಾಗಿದೆ.
ಶಿವಾಜಿ ಮಹಾರಾಜರ ರಾಜಮುದ್ರೆ
ನೂತನ ಧ್ವಜದಲ್ಲಿ ಒಂದು ಮೂಲೆಯಲ್ಲಿ ತ್ರಿವರ್ಣ ಧ್ವಜವಿದ್ದರೆ ಮತ್ತೊಂದು ಮೂಲೆಯಲ್ಲಿ ನೌಕಾದಳದ ಲಾಂಛನವಿದೆ. ಇದರಲ್ಲಿ ಬದಲಾವಣೆ ಮಾಡಲಾಗಿದ್ದು, ಹಿನ್ನೆಲೆ ಬಣ್ಣವಾಗಿ ನೇವಿ ಬ್ಲೂ ಬಳಸಲಾಗಿದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಈ ಭಾಗದ ಆಕಾರವನ್ನು ಅಷ್ಟಕೋನವಾಗಿ ರೂಪಿಸಲಾಗಿದೆ. ಅಷ್ಟಕೋನ ಎನ್ನುವುದು, ಅಷ್ಟ ದಿಕ್ಕುಗಳಲ್ಲೂ ಸಮುದ್ರವನ್ನು ಕಾಯುವ ಸಂಕಲ್ಪವನ್ನು ಮೂಡಿಸುತ್ತದೆ. ಜತೆಗೆ, ಛತ್ರಪತಿ ಶಿವಾಜಿ ಮಹಾರಾಜದ ರಾಜಮುದ್ರೆಯೂ ಇದೇ ಅಷ್ಟಕೋನಾಕಾರವನ್ನು ಹೊಂದಿತ್ತು.
ಶಿವಾಜಿ ಮಹಾರಾಜರು ಉತ್ತಮ ನೌಕಾದಳವನ್ನೂ ಹೊಂದಿದ್ದರು. ಎರಡು ನೌಕಾ ತುಕಡಿಯನ್ನೂ ಹೊಂದಿದ್ದ ನೌಕಾದಳದ ಮೂಲಕ ಅನೇಕ ಅನ್ವೇಷಣೆ, ಆವಿಷ್ಕಾರಗಳನ್ನು ನಡೆಸಿದ್ದರು. ಅರವತ್ತು ಹಡಗುಗಳು ಹಾಗೂ ಐದು ಸಾವಿರ ಸೈನಿಕರನ್ನು ಹೊಂದಿತ್ತು. ಭಾರತದ ಕರಾವಳಿ ರಕ್ಷಣೆಗೆ ಇದೇ ಮೊದಲ ಸೇನೆ ಎಂದೂ ಹೇಳಲಾಗುತ್ತದೆ. ಈ ಕೀರ್ತಿಯನ್ನೂ ನೌಕಾದಳದ ಧ್ವಜದಲ್ಲಿ ಬಿಂಬಿಸಲಾಗಿದೆ.
ಶಿವಾಜಿ ಮಹಾರಾಜರ ರಾಜಮುದ್ರೆಯ ನಡುವೆಯೂ ಸಂಸ್ಕೃತದಲ್ಲಿ ವಾಕ್ಯವನ್ನು ಹೊಂದಲಾಗಿತ್ತು. ಈಗಾಗಲೆ ಹಿಂದಿನಿಂದಲೂ ಇರುವಂತೆಯೇ ನೌಕಾದಳದ ಲಾಂಛನದಲ್ಲೂ ʼಶಂ ನೋ ವರುಣಃʼ ಎಂಬ ಉಪನಿಷತ್‌ನಿಂದ ಪ್ರೇರಣೆ ಪಡೆದು ರೂಪಿಸಲಾಗಿರುವ ಸಂಸ್ಕೃತ ವಾಕ್ಯವಿದೆ. ಈ ಮೂಲಕ, ಆಗಸ್ಟ್ 15ರ ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ತಿಳಿಸಿದಂತೆ ನೌಕಾದಳದ ಧ್ವಜದಲ್ಲಿದ್ದ ಕೊನೆಯ ವಸಾಹತು ಚಿಹ್ನೆಯನ್ನು ಕಿತ್ತುಹಾಕಲಾಗಿದೆ.
ಇದನ್ನೂ ಓದಿ | INS Vikrant | ಐಎನ್ಎಸ್ ವಿಕ್ರಾಂತ್ ಕಾರ್ಯಾರಂಭ, ನೌಕಾಪಡೆಗೆ ಹೊಸ ಧ್ವಜ ನೀಡಿದ ಪ್ರಧಾನಿ ಮೋದಿ