Site icon Vistara News

New Governors: ನೂತನ ರಾಜ್ಯಪಾಲರನ್ನು ನೇಮಿಸಿದ ರಾಷ್ಟ್ರಪತಿ; ಮೈಸೂರಿನ ವಿಜಯ ಶಂಕರ್ ಮೇಘಾಲಯ ಗವರ್ನರ್‌

New Governors

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು 6 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ (New Governors). ಜತೆಗೆ ಮೂವರು ರಾಜ್ಯಪಾಲರನ್ನು ಬೇರೆಡೆಗೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ನೇಮಕವಾಗಿದ್ದಾರೆ. ಇನ್ನು ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಮಣಿಪುರದ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ. ಬನ್ವಾರಿಲಾಲ್ ಪುರೋಹಿತ್ ಅವರ ಬದಲಿಗೆ ಗುಲಾಬ್ ಚಂದ್ ಕಟಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ.

ಇನ್ನು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಆಡಳಿತಾಧಿಕಾರಿಯಾಗಿ ಗುಲಾಬ್ ಚಂದ್ ಕಟಾರಿಯಾ ಅವರನ್ನೇ ನೇಮಕ ಮಾಡಲಾಗಿದೆ. ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢದ ಆಡಳಿತಾಧಿಕಾರಿ ಹುದ್ದೆಗೆ ಬನ್ವಾರಿಲಾಲ್ ಪುರೋಹಿತ್ ಅವರು ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ್ದು, ರಾಷ್ಟ್ರಪದಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ. 83 ವರ್ಷದ ಬನ್ವಾರಿಲಾಲ್ ಪುರೋಹಿತ್ ತಮ್ಮ ರಾಜೀನಾಮೆ ಪತ್ರದಲ್ಲಿ, “ವೈಯಕ್ತಿಕ ಕಾರಣಗಳು ಮತ್ತು ಇತರ ಕೆಲವು ಬದ್ಧತೆಗಳಿಂದಾಗಿ ನಾನು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ರಾಜ್ಯಪಾಲ ಮತ್ತು ಆಡಳಿತಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆʼʼ ಎಂದು ತಿಳಿಸಿದ್ದರು.

ಸಿಕ್ಕಿಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಮತ್ತು ಹೆಚ್ಚುವರಿಯಾಗಿ ಮಣಿಪುರದ ಜವಾಬ್ದಾರಿಯನ್ನು ಸಹ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅನುಸೂಯಾ ಉಕ್ಯೆ ಅವರು ಕಳೆದ ವರ್ಷ ಫೆಬ್ರವರಿಯಿಂದ ಮಣಿಪುರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಜೆಪಿ ಹಿರಿಯ ನಾಯಕ ಓಂ ಪ್ರಕಾಶ್ ಮಾಥುರ್ ಅವರನ್ನು ಸಿಕ್ಕಿಂನ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತೆಲಂಗಾಣದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದ ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಮಹಾರಾಷ್ಟ್ರದ ಜಬಾಬ್ದಾರಿ ನೀಡಲಾಗಿದೆ. ಕೇಂದ್ರದ ಮಾಜಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನಿಯುಕ್ತಿಗೊಳಿಸಲಾಗಿದೆ.

ತ್ರಿಪುರಾದ ಮಾಜಿ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹ ಸಹಾಯಕರಲ್ಲಿ ಒಬ್ಬರಾದ ಮಾಜಿ ಐಎಎಸ್ ಅಧಿಕಾರಿ ಕೆ.ಕೈಲಾಶ್‌ನಾಥನ್‌ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೈಲಾಶ್‌ನಾಥನ್‌ ಜೂನ್ 30ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕ ಹರಿಭಾವು ಕಿಸಾನ್ ರಾವ್ ಬಾಗ್ಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅಸ್ಸಾಂನ ಮಾಜಿ ಲೋಕಸಭಾ ಸದಸ್ಯ ರಾಮನ್ ದೇಕಾ ಅವರನ್ನು ಛತ್ತೀಸ್ ಗಢದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ರಾಜ್ಯ ಹೊಸ ರಾಜ್ಯಪಾಲರು
ಮೇಘಾಲಯಸಿ.ಎಚ್.ವಿಜಯ ಶಂಕರ್
ರಾಜಸ್ಥಾನಹರಿಭಾವು ಕಿಸಾನ್ ರಾವ್ ಬಾಗ್ಡೆ
ತೆಲಂಗಾಣಜಿಷ್ಣು ದೇವ್ ವರ್ಮಾ
ಸಿಕ್ಕಿಂಓಂ ಪ್ರಕಾಶ್ ಮಾಥುರ್
ಜಾರ್ಖಂಡ್ಸಂತೋಷ್ ಕುಮಾರ್ ಗಂಗ್ವಾರ್
ಛತ್ತೀಸ್‌ಗಢರಾಮನ್ ದೇಕಾ
ಮಹಾರಾಷ್ಟ್ರಸಿ.ಪಿ. ರಾಧಾಕೃಷ್ಣನ್
ಪಂಜಾಬ್ಗುಲಾಬ್ ಚಂದ್ ಕಟಾರಿಯಾ
ಅಸ್ಸಾಂ, ಮಣಿಪುರಲಕ್ಷ್ಮಣ್ ಪ್ರಸಾದ್ ಆಚಾರ್ಯ

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

Exit mobile version