ನವದೆಹಲಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿ (Narendra Nodi) ಅವರ ಭದ್ರತೆಯ ಉದ್ದೇಶಕ್ಕಾಗಿ ಅಗತ್ಯವಿರುವ ಮೂರು ಡೀಸೆಲ್ ಚಾಲಿತ ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿಯನ್ನು ವಿಸ್ತರಿಸುವಂತೆ ವಿಶೇಷ ಸಂರಕ್ಷಣಾ ಗುಂಪು (Special Protection Group) ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) ತಿರಸ್ಕರಿಸಿದೆ.
ದೆಹಲಿ ಎನ್‌ಸಿಆರ್ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ.
“ಈ ಮೂರು ವಾಹನಗಳು ಸಾಮಾನ್ಯವಾಗಿ ಬಳಸಲ್ಪಡದ, ವಿಶೇಷ ಉದ್ದೇಶದ ವಾಹನಗಳಾಗಿವೆ. ಈ ವಾಹನಗಳು ಹತ್ತು ವರ್ಷಗಳಲ್ಲಿ ಬಹಳ ಕಡಿಮೆ ಚಲಿಸಿವೆ ಮತ್ತು ಪ್ರಧಾನಿ ಅವರ ಭದ್ರತೆಯ ನಿರ್ದಿಷ್ಟ ಉದ್ದೇಶಕ್ಕಾಗಿ ಅಗತ್ಯವಾಗಿವೆ. ಆದರೆ ಸುಪ್ರೀಂ ಕೋರ್ಟ್ 2018ರ ಅಕ್ಟೋಬರ್ 29ರಂದು ನೀಡಿದ ಆದೇಶದಂತೆ ಆ ವಾಹನಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಎನ್‌ಜಿಟಿ ಹೇಳಿದೆ.
ʼʼಎಸ್‌ಪಿಜಿ ಅರ್ಜಿಯನ್ನು ತಿರಸ್ಕರಿಸಿದ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ಸದಸ್ಯ ಡಾ.ಎ.ಸೆಂಥಿಲ್ ವೇಲ್ ಅವರನ್ನೊಳಗೊಂಡ ಎನ್‌ಜಿಟಿ ಪ್ರಧಾನ ಪೀಠವು ಮಾರ್ಚ್ 22ರ ಆದೇಶದಲ್ಲಿ, ದೆಹಲಿ ಎನ್‌ಸಿಆರ್ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ ತೀರ್ಪು ನೀಡಿದೆʼʼ ಎಂದು ಮೂಲಗಳು ತಿಳಿಸಿವೆ.
ಈ 3 ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿ ಅವಧಿಯನ್ನು ಐದು ವರ್ಷಗಳವರೆಗೆ ಅಂದರೆ 2029ರ ಡಿಸೆಂಬರ್ 23ರವರೆಗೆ ವಿಸ್ತರಿಸಲು ಅನುಮತಿ ನೀಡುವಂತೆ ದೆಹಲಿಯ ಸಾರಿಗೆ ಇಲಾಖೆ, ನೋಂದಣಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಎಸ್‌ಪಿಜಿಯು ಎನ್‌ಜಿಟಿಯನ್ನು ಸಂಪರ್ಕಿಸಿತ್ತು.
2013ರಲ್ಲಿ ತಯಾರಿಸಿದ ಮತ್ತು 2014ರ ಡಿಸೆಂಬರ್‌ನಲ್ಲಿ ನೋಂದಾಯಿಸಲಾದ ಮೂರು ರೆನಾಲ್ಟ್ ಎಂಡಿ -5 (Renault MD-5) ವಿಶೇಷ ಶಸ್ತ್ರಸಜ್ಜಿತ ವಾಹನಗಳು 9 ವರ್ಷಗಳಲ್ಲಿ ಕ್ರಮವಾಗಿ ಸುಮಾರು 6,000 ಕಿ.ಮೀ., 9,500 ಕಿ.ಮೀ. ಮತ್ತು 15,000 ಕಿ.ಮೀ. ಕ್ರಮಿಸಿವೆ. ಈ ವಾಹನಗಳನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ.
ಈ ವಾಹನಗಳನ್ನು 2029ರ ವರೆಗೆ 15 ವರ್ಷಗಳ ಅವಧಿಗೆ ನೋಂದಾಯಿಸಲಾಗಿದೆ. ಆದರೆ ಈ ವಾಹನಗಳು 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಸುಪ್ರೀಂ ಕೋರ್ಟ್‌ನ ಆದೇಶದ ಅನುಗುಣವಾಗಿ 2024ರ ಡಿಸೆಂಬರ್‌ನಲ್ಲಿ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ.
ಇದನ್ನೂ ಓದಿ: Lok Sabha Election: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಇವರೇ ನೋಡಿ ಆ ಸ್ಟಾರ್‌ಗಳು
ಎಸ್‌ಪಿಜಿ ಸಲ್ಲಿಸಿದ ಮನವಿಯಲ್ಲಿ ಏನಿದೆ?
ನೋಂದಣಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ ಎಸ್‌ಪಿಜಿ ಅದಕ್ಕೆ ಕಾರಣವನ್ನೂ ನೀಡಿದೆ. ʼʼಈ ವಾಹನಗಳು ವಿನ್ಯಾಸ ಮತ್ತು ತಾಂತ್ರಿಕ / ಕಾರ್ಯತಂತ್ರಗಳ ವಿಚಾರದಲ್ಲಿ ಬಹಳ ವಿಶೇಷವಾಗಿವೆ ಮತ್ತು ಈ ಅಗತ್ಯಗಳನ್ನು ಪೂರೈಸುವ ವಾಹನಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವುದಿಲ್ಲʼʼ ಎಂದು ಎಸ್‌ಪಿಜಿ ತಿಳಿಸಿದೆ.
ಸುಪ್ರೀಂ ಕೋರ್ಟ್‌ನ 2018ರ ಆದೇಶಕ್ಕೆ ಮೊದಲು ಎನ್‌ಜಿಟಿ 2015ರ ಏಪ್ರಿಲ್‌ನಲ್ಲಿ ದೆಹಲಿ ಎನ್‌ಸಿಆರ್ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಎಲ್ಲ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 10 ವರ್ಷಕ್ಕಿಂತ ಹಳೆಯದಾದ ಯಾವುದೇ ಡೀಸೆಲ್ ವಾಹನವನ್ನು ನೋಂದಾಯಿಸದಂತೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ದೆಹಲಿ ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮವಾಗಿ ಎನ್‌ಜಿಟಿ ಮತ್ತು ಸುಪ್ರೀಂ ಕೋರ್ಟ್ ಈ ಆದೇಶಗಳನ್ನು ಹೊರಡಿಸಿದ್ದವು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ