ನವದೆಹಲಿ: ರಾಷ್ಟ್ರೀಯ ತನಿಖಾ ದಳ(NIA)ವು ಬಿಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಕರ್ನಾಟಕದಲ್ಲಿ ಸಕ್ರಿಯವಾಗಿದ್ದ ನಿಷೇಧಿತ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ(PFI)ದ ಐವರನ್ನು ಬಂಧಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ಬಿಹಾರ, ಕೇರಳ ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಷೇಧಿತ ರಾಡಿಕಲ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಮುಖ ತಂಡವನ್ನು ಭೇದಿಸಿದೆ.
ಬಿಹಾರದ ಫುಲ್ವಾರಿಶರೀಫ್‌ನಲ್ಲಿ ಪಿಎಫ್‌ಐ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯ ತನಿಖೆಯ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ. ಎನ್‌ಐಎ ಪ್ರಕಾರ, ಫುಲ್ವಾರಿಶರೀಫ್ ಮತ್ತು ಮೋತಿಹಾರಿಯಲ್ಲಿರುವ ಪಿಎಫ್‌ಐ ಕಾರ್ಯಕರ್ತರು ಬಿಹಾರದಲ್ಲಿ ನಿಷೇಧಿತ ಸಂಘಟನೆಯ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ದಿಷ್ಟ ಸಮುದಾಯದ ಯುವಕರ ಹತ್ಯೆಗೆ ಶಸ್ತ್ರಾಸ್ತ್ರಗಳನ್ನು ವ್ಯವಸ್ಥೆಗೊಳಿಸಿದ್ದಾರೆಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ಭಾನುವಾರದಿಂದಲೇ ಕಾರ್ಯಾಚರಣೆಯನ್ನು ಕೈಗೊಂಡಿತ್ತು.
ಇದನ್ನೂ ಓದಿ: Praveen Nettaru murder | ಪ್ರವೀಣ್ ನೆಟ್ಟಾರು ಕೊಲೆ: ತಲೆಮರೆಸಿಕೊಂಡಿರುವ ಇಬ್ಬರು ಪಿಎಫ್ಐ ನಾಯಕರಿಗಾಗಿ NIA ಶೋಧ
ಎನ್ಐಎ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದ ಕಾಸರಗೋಡು ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಿಂದ ಐವರು ನಿಷೇಧಿತ ಪಿಎಫ್ಐ ಸದಸ್ಯರನ್ನು ಬಂಧಿಸಲಾಗಿದೆ. ಈ ಬಂಧಿತರು ಭಾರತದ ಹೊರಗಿನಿಂದ ಸಂಗ್ರಹಿಸಿದ ಅಕ್ರಮ ಹಣವನ್ನು ಸಾಗಿಸಲು ಮತ್ತು ಅದರ ನಾಯಕರಿಗೆ ಹಂಚುವ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.