ಚೆನ್ನೈ: ತಮಿಳುನಾಡಿನ ಹತ್ತು ಸ್ಥಳಗಳಲ್ಲಿ ಎನ್‌ಐಎ ರೇಡ್(NIA Raid) ನಡೆಸಿದ್ದು, ಭಯೋತ್ಪಾದನಾ(Terrorism activities) ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಅರೆಸ್ಟ್ ಮಾಡಿದೆ. ತಮಿಳುನಾಡಿನ ಐದು ಜಿಲ್ಲೆಗಳಲ್ಲಿ ಈ ರೇಡ್ ನಡೆದಿದ್ದು, ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಹಿಜ್ಬು-ಉತ್-ತಹ್ರೀರ್‌ನ ಇಬ್ಬರನ್ನು ಬಂಧಿಸಿದೆ. ಈ ಸಂಘಟನೆಯ ಸ್ಥಾಪಕ ತಾಖಿ ಅಲ್ ದಿನ್ ಅಲ್ ಅಬ್ಬಾನಿ ಬರೆದ ಸಂವಿಧಾನವನ್ನು ಪ್ರಪಂಚಾದ್ಯಂತ ಪಸರಿಸಲು ಪ್ರಯತ್ನ ನಡೆಸುತ್ತಿದ್ದಾರೆ.
ಇನ್ನು ಬಂಧಿತ ಉಗ್ರರನ್ನು ಅಬ್ದುಲ್ ರೆಹಮಾನ್ ಮತ್ತು ಮುಜಿಬುಲ್ ರೆಹಮಾನ್ ಅಲಿಯಾಸ್ ಮುಜಿಬುಲ್ ರೆಹಮಾನ್ ಅಲ್ತಾಮ್ ಸಾಹೀಬ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಂಜಾವೂರ್ ಜಿಲ್ಲೆಯವರಾಗಿದ್ದು, ಇವರಿಬ್ಬರೂ ಯುವಕರನ್ನು ಉಗ್ರ ಸಂಘಟನೆಗೆ ಪ್ರೇರೇಪಿಸಲು ಗುಪ್ತವಾಗಿ ತರಗತಿಗಳನ್ನು ನಡೆಸುತ್ತಿದ್ದಾರೆ. ಭಾರತ ಈಗ ನಾಸ್ತಿಕ ರಾಷ್ಟ್ರವಾಗಿ ಬೆಳೆಯುತ್ತಿದೆ. ದೇಶದಲ್ಲಿ ಹಿಂಸಾತ್ಮಕ ಜಿಹಾದ್ ಮೂಲಕ ಇಸ್ಲಾಂ ಮೇಲಿನ ನಂಬಿಕೆಯನ್ನು ಮೂಡಿಸಬೇಕಿದೆ ಎಂಬುದನ್ನು ಯುವಕರಿಗೆ ಬೋಧಿಸುತ್ತಿದ್ದರು ಎಂದು ಎನ್‌ಐಎ ಹೇಳಿದೆ.
ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್, ಸಿಮ್ ಮತ್ತು ಮೆಮೊರಿ ಕಾರ್ಡ್‌ಗಳು ಮತ್ತು ಹಿಜ್ಬ್-ಉತ್-ತಹ್ರೀರ್, ಖಿಲಾಫಾ, ಇಸ್ಲಾಮಿಕ್ ಸ್ಟೇಟ್‌ನ ಸಿದ್ಧಾಂತವನ್ನು ಒಳಗೊಂಡಿರುವ ಪುಸ್ತಕಗಳು ಮತ್ತು ಪ್ರಿಂಟ್‌ಔಟ್‌ಗಳು ಅನೇಕ ವಸ್ತುಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ.
ಮತ್ತೊಂದೆಡೆ ಜಮ್ಮು-ಕಾಶ್ಮೀರದ ರಿಯಾಸಿ(Reasi Terror Attack) ಜಿಲ್ಲೆಯಲ್ಲಿ ಹಿಂದು ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA Raid) ವಿವಿಧ ಸ್ಥಳಗಳಲ್ಲಿ ರೇಡ್ ನಡೆಸಿದೆ. ಮಕ್ಕಳು ಸೇರಿದಂತೆ ಒಂಬತ್ತು ಮಂದಿಯನ್ನು ಉಗ್ರರ ದಾಳಿಯಲ್ಲಿ ಬಲಿಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ಪ್ರಕರಣವನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸಿತ್ತು.
ಇದೀಗ ತನಿಖಾ ಭಾಗವಾಗಿ ಜಮ್ಮು -ಕಾಶ್ಮೀರದ ವಿವಿಧ ಭಾಗಗಳಲ್ಲಿ ಎನ್‌ಐಎ ರೇಡ್ ನಡೆಸಿದೆ. ಉಗ್ರರಿಗೆ ಆಶ್ರಯ, ಸಹಾಯ ನೀಡಿದ ಶಂಕಿತರ ಮೇಲೆ ಈ ರೇಡ್ ನಡೆದಿದ್ದು, ಹಲವು ಮಹತ್ವದ ಮಾಹಿತಿಗಳನ್ನು ಕಳೆ ಹಾಕಿದ್ದಾರೆ. ಇತ್ತೀಚೆಗಷ್ಟೇ ರಿಯಾಸಿ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೌರಿ ಜಿಲ್ಲೆಯಲ್ಲಿ ಹಕೀಮ್ ದಿನ್ ಎಂಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈತನೇ ದಾಳಿಯ ರೂವಾರಿ ಆಗದಿದ್ದರೂ, ಉಗ್ರರ ದಾಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾನೆ. ಇದರಿಂದ ಉಗ್ರರು ಸುಲಭವಾಗಿ ದಾಳಿ ಮಾಡಲು ಸಾಧ್ಯವಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ
ದೆಹಲಿ ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಹಿಂದು ಯಾತ್ರಿಕರು ಜೂನ್ 9ರಂದು ಬಸ್‌ನಲ್ಲಿ ವೈಷ್ಣೋದೇವಿ ಯಾತ್ರೆಗೆ ಹೊರಟಿದ್ದರು. ರಿಯಾಸಿ ಜಿಲ್ಲೆಯ ತೆರ್ಯಾತ್ ಗ್ರಾಮದ ಬಳಿಯ ಮಾರ್ಗವಾಗಿ ಬಸ್ ಚಲಿಸುತ್ತಿತ್ತು. ಆದರೆ, ಉಗ್ರರು ಬಸ್ ಅನ್ನು ಹಿಂಬಾಲಿಸಿಕೊಂಡು ಬಂದು ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಬಸ್ ಕಣಿವೆಗೆ ಉರುಳಿತ್ತು. ಇದರಿಂದಾಗಿ 9 ಮಂದಿ ಮೃತಪಟ್ಟರೆ, 33 ಜನ ಗಾಯಗೊಂಡಿದ್ದರು. ದಾಳಿಯ ಹೊಣೆಯನ್ನು ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ಹೊತ್ತುಕೊಂಡಿದೆ.
ಇದನ್ನೂ ಓದಿ:Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!