ಹೊಸದಿಲ್ಲಿ: ರಾಜ್ಯಗಳಿಗೆ ನಿಧಿ ಹಂಚಿಕೆ ತಾರತಮ್ಯದ ಕುರಿತು ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ (Congress) ನಡೆಸುತ್ತಿರುವ ದಾಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance minister Nirmala Sitharaman) ಸೋಮವಾರ ಸಂಸತ್ತಿನಲ್ಲಿ ತಿರುಗೇಟು ನೀಡಿದ್ದಾರೆ. “ಕರ್ನಾಟಕದಲ್ಲಿ ಆರು ತಿಂಗಳ ಹಿಂದೆ ಎಲ್ಲ ಚೆನ್ನಾಗಿತ್ತಾ?ʼʼ ಎಂದು ಅವರು ಪ್ರಶ್ನಿಸಿದ್ದು, ಇದು “ಖರ್ಚು ಮಾಡಬಾರದ ಕಡೆ ಮಾಡಿದ್ದರಿಂದ ಆದ ಫಲ” ಎಂದು ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದಾರೆ.
“ಕಾಂಗ್ರೆಸ್ ದೂರಿನಲ್ಲಿ ಹುರುಳಿಲ್ಲ. ನನಗೆ ಈ ರಾಜ್ಯ ಇಷ್ಟವಿಲ್ಲ, ಆದ್ದರಿಂದ ಅಲ್ಲಿಗೆ ಹಣಕಾಸು ಪಾವತಿ ಮಾಡುವುದಿಲ್ಲ ಎಂದು ಯಾವುದೇ ಹಣಕಾಸು ಸಚಿವರು ಹೇಳಲು ಸಾಧ್ಯವಿಲ್ಲ, ಅದು ಅಸಾಧ್ಯ. ವ್ಯವಸ್ಥೆಯು ಈ ವಿಷಯದಲ್ಲಿ ಶಿಸ್ತುಬದ್ಧವಾಗಿದೆ” ಎಂದು ಸೀತಾರಾಮನ್ ಲೋಕಸಭೆಯಲ್ಲಿ ಉತ್ತರಿಸಿದರು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಕೇಳಿದ್ದ ಪ್ರಶ್ನೆಗಳಿಗೆ ನಿರ್ಮಲಾ ಉತ್ತರಿಸಿದರು. ಕರ್ನಾಟಕದಂತಹ ರಾಜ್ಯಗಳಿಗೆ ಹಣವನ್ನು ತಡೆಹಿಡಿಯುವ ಮೂಲಕ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಅಧೀರ್ ರಂಜನ್ ಆರೋಪಿಸಿದ್ದರು. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು ನ್ಯಾಯಸಮ್ಮತವಾದ ಹಣಕಾಸಿನ ಬಾಕಿಯಿಂದ ವಂಚಿತವಾಗಿವೆ ಎಂಬ ಸಾಮಾನ್ಯ ಗ್ರಹಿಕೆ ಇದೆ ಎಂದು ಚೌಧರಿ ಹೇಳಿದ್ದು, ಕರ್ನಾಟಕವನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದರು.
“ಕರ್ನಾಟಕ ರಾಜ್ಯವು ತನ್ನ ನ್ಯಾಯಸಮ್ಮತವಾದ ಹಣದಿಂದ ವಂಚಿತವಾಗಿದೆ ಎಂಬುದು ನಿಜವೇ? ಆರು ತಿಂಗಳ ಹಿಂದೆ ಎಲ್ಲವೂ ಚೆನ್ನಾಗಿತ್ತಾ? (hunky dory) ಈಗ ಏನಾಯಿತು?” ಎಂದು ನಿರ್ಮಲಾ ಕೇಳಿದರು. “ಆರು ತಿಂಗಳ ಹಿಂದಿನವರೆಗೆ ಎಲ್ಲವೂ ಚೆನ್ನಾಗಿತ್ತು ಎಂದು ಅಧೀರ್‌ಜೀ ಹೇಳುತ್ತಿದ್ದಾರೆ. ಹಾಗಾದರೆ ಏನು ತಪ್ಪಾಗಿದೆ? ನೀವು ಖರ್ಚು ಮಾಡಬಾರದ ಕಡೆ ಖರ್ಚು ಮಾಡಲು ಪ್ರಾರಂಭಿಸಿದ್ದೀರಾ? ನಾನು ಅದನ್ನು ಪ್ರಶ್ನಿಸುತ್ತಿಲ್ಲ. ಆದರೆ ನೀವು ಅದನ್ನು ಖರ್ಚು ಮಾಡಿದ್ದೀರಿ. ಹೀಗಾಗಿ ಕೇಂದ್ರದ ಮೇಲೆ ಆಪಾದನೆ ಮಾಡಬೇಡಿ. ಏಕೆಂದರೆ ನಿಯಮಾವಳಿ ಮೀರಲು ಸಾಧ್ಯವಿಲ್ಲ” ಎಂದು ನಿರ್ಮಲಾ ಉತ್ತರಿಸಿದ್ದಾರೆ.
“SGST ರಾಜ್ಯಗಳಿಗೆ 100 ಪ್ರತಿಶತದಷ್ಟು ಹೋಗುತ್ತದೆ. ಇದು ಸ್ವಯಂಚಾಲಿತ ನಿಬಂಧನೆಯಾಗಿದೆ. IGST ಅಂತಾರಾಜ್ಯ ಪಾವತಿಗಳನ್ನು ಒಳಗೊಂಡಿರುತ್ತದೆ. ಅದನ್ನು ವಿಂಗಡಿಸಲಾಗುತ್ತದೆ ಮತ್ತು ನಂತರ ನಿಯತಕಾಲಿಕವಾಗಿ ವಾಸ್ತವಕ್ಕೆ ಸರಿಹೊಂದಿಸಲಾಗುತ್ತದೆ. CGST ಅನ್ನು ಹಣಕಾಸು ಆಯೋಗದ ಸೂಚನೆಯಂತೆ ವಿಂಗಡಿಸಲಾಗಿದೆ. ಆದ್ದರಿಂದ ದಯವಿಟ್ಟು ಅರ್ಥಮಾಡಿಕೊಳ್ಳಿ… ನನಗೆ ಬೇಕಾದಂತೆ ಹಣಕಾಸಿನ ಹಂಚಿಕೆ ಬದಲಾಯಿಸುವ ಹಕ್ಕು ನನಗಿಲ್ಲ. ನಾನು 100 ಪ್ರತಿಶತ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಸರಿಸಬೇಕು. ಪ್ರತಿಯೊಬ್ಬ ಹಣಕಾಸು ಮಂತ್ರಿಯೂ ಅದನ್ನೇ ಮಾಡುತ್ತಾರೆ” ಎಂದರು.
ಅಧೀರ್ ಚೌಧರಿ ಅವರ ಅಡ್ಡಿಪಡಿಸುವ ಮಾತುಗಳಿಂದ ಕೆರಳಿದ ನಿರ್ಮಲಾ, ಒಂದು ಬಾರಿ ತಮ್ಮ ತಾಳ್ಮೆಯನ್ನು ಸಂಪೂರ್ಣವಾಗಿ ಕಳೆದುಕೊಂಡರು. “ಹಣಕಾಸು ಆಯೋಗ ಏನು ಮಾಡಬೇಕು ಎಂದು ನಮಗೆ ಸೂಚಿಸದಿದ್ದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಅಧೀರ್‌ಜೀ, ದಯವಿಟ್ಟು ಮಾತಾಡಬೇಡಿ. ನನಗೆ ಈ ವಿಷಯದಲ್ಲಿ ವೈಯಕ್ತಿಕ ವಿವೇಚನೆ ಬಳಸುವ ಸ್ವಾತಂತ್ರ್ಯವಿಲ್ಲ” ಎಂದು ನಿರ್ಮಲಾ ಹೇಳಿದರು.
ರಾಜ್ಯಕ್ಕೆ ಹೆಚ್ಚಿನ ಹಣಕ್ಕಾಗಿ ಆಗ್ರಹಿಸಿ ಫೆಬ್ರವರಿ 7ರಂದು ದೆಹಲಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಆಡಳಿತಾರೂಢ ಪಕ್ಷದ ಶಾಸಕರು ಪ್ರತಿಭಟನೆ ಆಯೋಜಿಸಿದ್ದು, ಅದಕ್ಕೆ ಮುನ್ನ ಚೌಧರಿ ಅವರ ಈ ಆರೋಪ ಬಂದಿದೆ. 15ನೇ ಹಣಕಾಸು ಆಯೋಗದ ವರದಿಯ ನಂತರ ಕರ್ನಾಕಟಕ್ಕೆ ಕಡಿಮೆ ತೆರಿಗೆ ಹಂಚಿಕೆ ಪಾಲು ಬಂದಿದ್ದು, ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಭಾನುವಾರ ಸಿದ್ದರಾಮಯ್ಯ ಹೇಳಿದ್ದರು. ಇದರ ಪರಿಣಾಮ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ₹45,000 ಕೋಟಿಗಳಷ್ಟು ನಷ್ಟವಾಗಿದೆ ಎಂದಿದ್ದರು.
ಇದನ್ನೂ ಓದಿ: Budget 2024: ಇದು ‘ನಿರ್ಮಲ’ ಬಜೆಟ್! ತೆರಿಗೆ ಬದಲಾವಣೆಯೂ ಇಲ್ಲ, ಪುಕ್ಕಟೆ ಯೋಜನೆಯೂ ಇಲ್ಲ!