ಬೆಂಗಳೂರು: ಅಮೆರಿಕ ಮತ್ತು ಭಾರತೀಯ ವಿಜ್ಞಾನಿಗಳು ಜತೆಗೂಡಿ ಅಭಿವೃದ್ಧಿಪಡಿಸಿದ ಮತ್ತು ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NASA-ISRO Synthetic Aperture Radar) ಅಥವಾ ನಿಸಾರ್(NISAR) ಉಪಗ್ರಹ ಭಾರತಕ್ಕೆ ಬಂದಿಳಿದಿದೆ. ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಇದನ್ನು ಸಂಯೋಜಿಸಲಾಗಿತ್ತು(NISAR satellite:).
ನಿಸಾರ್ ಉಪಗ್ರಹವು ಅಮೆರಿಕದಿಂದ ಬೆಂಗಳೂರಿಗೆ ಬಂದಿಳಿದಿದೆ. ಅಮೆರಿಕದ ಯುಎಸ್‌ಎಫ್ ಸಿ-17 ವಿಮಾನದ ಮೂಲಕ ಈ ಉಪಗ್ರಹವನ್ನು ಭಾರತಕ್ಕೆ ತರಲಾಗಿದೆ. ಈ ಉಪಗ್ರಹವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2024ರ ಮೊದಲ ತ್ರೈಮಾಸಿಕದಲ್ಲಿ ಉಡಾವಣೆ ಮಾಡಲಾಗುವುದು. ಅದಕ್ಕೂ ಮೊದಲು ಮುಂದಿನ ಕೆಲವು ತಿಂಗಳುಗಳಲ್ಲಿ ಅಂತಿಮ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನಿಸಾರ್ ಕುರಿತು ಅಮೆರಿಕದ ರಾಯಭಾರ ಕಚೇರಿ ಮಾಡಿರುವ ಟ್ವೀಟ್
ಇದನ್ನೂ ಓದಿ: ಚಂದ್ರಯಾನ-3 ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿ: ಇಸ್ರೋ
ಈ ಬೃಹತ್ ಉಪಗ್ರಹವು, ಎರಡು ಪ್ರತ್ಯೇಕ ರಾಡಾರ್‌ಗಳನ್ನು ಹಂದಿದೆ. ಲಾಂಗ್ ರೇಂಜ್ ಎಲ್ ಬಾಂಡ್ ರಾಡಾರ್ ಅನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದೇ ವೇಳೆ ಎಸ್ ಬಾಂಡ್ ರಾಡಾರ್ ಅನ್ನು ಭಾರತೀಯ ವಿಜ್ಞಾನಿಗಳು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಬಳಿಕ ಈ ಎರಡೂ ರಾಡಾರ್‌ಗಳನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಗೆ ಕಳುಹಿಸಲಾಯಿತು. ಅಲ್ಲಿ ಈ ಎರಡೂ ರಾಡಾರ್‌ಗಳನ್ನು ಸಂಯೋಜಿಸಲಾಯಿತು. ಅದನ್ನೀಗ ಭಾರತಕ್ಕೆ ತರಲಾಗಿದ್ದು, 2024ರಲ್ಲಿ ಉಡಾವಣೆ ಮಾಡಲಾಗುವುದು. ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ.