Site icon Vistara News

Nitin Gadkari: ರಸ್ತೆಗಿಳಿಯಲಿದೆ 132 ಸೀಟು, ಹೋಸ್ಟೆಸ್‌ ಒಳಗೊಂಡ ಬಸ್‌; ಸಾರಿಗೆ ವಲಯದಲ್ಲಿನ ಯೋಜನೆ ವಿವರಿಸಿದ ಸಚಿವ ನಿತಿನ್‌ ಗಡ್ಕರಿ

Nitin Gadkari

Nitin Gadkari

ಮುಂಬೈ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಸಾರಿಗೆ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಮುಂದಾಗಿದ್ದಾರೆ. ”132 ಸೀಟುಗಳ ಬಸ್‌ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರಲ್ಲಿ ವಿಮಾನದಲ್ಲಿರುವಂತೆ ಸಕಲ ಸೌಲಭ್ಯಗಳೂ ಇರಲಿದೆ. ಏರ್‌ ಹೋಸ್ಟೆಸ್‌ನಂತೆ ಬಸ್‌ ಹೋಸ್ಟೆಸ್‌ಗಳೂ ಕಾರ್ಯ ನಿರ್ವಹಿಸಲಿದ್ದು, ಈ ಬಸ್‌ನಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ” ಎಂದು ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ʼʼಪರಿಸರ ಮಾಲಿನ್ಯ ಎನ್ನುವುದು ಸದ್ಯ ದೇಶ, ಜಗತ್ತು ಎದುರಿಸುವ ಬಹುದೊಡ್ಡ ಸಮಸ್ಯೆ. ಹೀಗಾಗಿ ಸರ್ಕಾರ ಪರಿಸರಕ್ಕೆ ಹಾನಿ ಉಂಟು ಮಾಡದ ಪರ್ಯಾಯ ವ್ಯವಸ್ಥೆಗಳಿಗೆ ಒತ್ತು ನೀಡಲಿದೆ. ಅದರ ಭಾಗವಾಗಿ ಸಾರ್ವಜನಿಕ ಸಾರಿಗೆ ವಿಭಾಗದಲ್ಲಿಯೂ ಅಮೂಲಾಗ್ರ ಬದಲಾವಣೆ ಜಾರಿಗೆ ತರಲಾಗುವುದುʼʼ ಎಂದು ಹೇಳಿದ್ದಾರೆ.

ಕನಸಿನ ಯೋಜನೆ

ಈ ವೇಳೆ ಅವರು ತಮ್ಮ ಕನಸಿನ 132 ಸೀಟುಗಳ ಬಸ್‌ನ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼ132 ಆಸನಗಳ ಬಸ್ ಅನ್ನು‌ ಪಚಯಿಸಲು ಮುಂದಾಗಿದ್ದೇವೆ. ಇದರ ಪ್ರಾಯೋಗಿಕ ಸಂಚಾರ ನಾಗ್ಪುರದಲ್ಲಿ ನಡೆಯಲಿದೆ. ಈ ಬಸ್‌ ವಿಮಾನದಂತಹ ಆಸನ ಮತ್ತು ಬಸ್ ಹೋಸ್ಟೆಸ್ ಅನ್ನು ಒಳಗೊಂಡಿದೆ. ಸಾಮಾನ್ಯ ಡೀಸೆಲ್ ಬಸ್‌ಗಳಿಗಿಂತ ಅಗ್ಗವಾಗಿರಲಿದೆ. ಮಾಲಿನ್ಯರಹಿತ ಶಕ್ತಿಯ ಮೂಲಗಳಲ್ಲಿ ಚಲಿಸಲಿದೆʼʼ ಎಂದು ವಿವರಿಸಿದ್ದಾರೆ. ʼʼಭಾರತವನ್ನು ಇಂಧನದ ಆಮದುದಾರ ದೇಶವನ್ನಾಗಿಸುವ ಬದಲು ಬದಲು ರಫ್ತುದಾರ ದೇಶವನ್ನಾಗಿಸುವುದೇ ನಮ್ಮ ಸರ್ಕಾರದ ಗುರಿʼʼ ಎಂದು ಅವರು ತಿಳಿಸಿದ್ದಾರೆ.

ಪರಿಸರ ಮಾಲಿನ್ಯ ಪ್ರಮುಖ ಸಮಸ್ಯೆ

ʼʼನಾವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಪರಿಸರ ಮಾಲಿನ್ಯ ಮುಖ್ಯವಾದುದು. ದೇಶದಲ್ಲಿ ಅದರಲ್ಲಿಯೂ ರಾಜಧಾನಿ ದೆಹಲಿಯಲ್ಲಿ ವಾಯು, ಜಲ, ಶಬ್ದ ಮಾಲಿನ್ಯ ಮಿತಿ ಮೀರಿದೆ. ಹೀಗಾಗಿ ನಾವು ಮಾಲಿನ್ಯ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆ ಪರಿಚಯಿಸಲು ಚಿಂತನೆ ನಡೆಸಿದ್ದೇವೆ. ಅದರ ಭಾಗವಾಗಿ ಇಂಡಿಯನ್ ಆಯಿಲ್ 300 ಎಥೆನಾಲ್ ಪಂಪ್‌ಗಳನ್ನು ಸ್ಥಾಪಿಸಲಿದೆ. ಹೊಸ ಮಾದರಿಯ ವಾಹನ ನಿರ್ಮಾಣಕ್ಕೆ ತಯಾರಕರೂ ಮುಂದಾಗಿದ್ದಾರೆ. ಆದ್ದರಿಂದ 100 ರೂ. ಕೊಟ್ಟು ಒಂದು ಲೀಟರ್‌ ಪೆಟ್ರೋಲ್ ಖರೀದಿಸುವ ಬದಲು, 60 ರೂ. ಪಾವತಿಸಿ ಎಥೆನಾಲ್ ಖರೀದಿಸಬಹುದು. ಈ ಹೊಸ ಮಾದರಿಯ ವಾಹನವು ಶೇ. 60 ವಿದ್ಯುತ್ ಮತ್ತು ಶೇ. 40ರಷ್ಟು ಎಥೆನಾಲ್‌ನಲ್ಲಿ ಚಲಿಸಲಿದೆ. ಇದು ಮಾಲಿನ್ಯವನ್ನು ಸಹ ಕಡಿಮೆ ಮಾಡುತ್ತದೆ” ಎಂದು ಸಚಿವರು ಹೇಳಿದ್ದಾರೆ.

“ನಾವು ಟಾಟಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ನಾಗ್ಪುರದಲ್ಲಿ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ. ಜೆಕ್ ಗಣರಾಜ್ಯದಲ್ಲಿ ಮೂರು ಬಸ್ಸುಗಳನ್ನು ಸೇರಿಸಿ ಓಡಿಸುತ್ತಾರೆ. ಅದರಂತೆ ನಮ್ಮ ಈ ಯೋಜನೆ 132 ಸೀಟುಗಳ ಬಸ್‌ ಅನ್ನು ಹೊಂದಿದೆ. ಈ ಬಸ್‌ ರಿಂಗ್ ರಸ್ತೆಯಲ್ಲಿ 49 ಕಿ.ಮೀ. ಪ್ರಯಾಣಿಸುತ್ತದೆ. ಕೇವಲ 40 ಸೆಕೆಂಡು ಚಾರ್ಜ್ ಮಾಡಿದರೆ 40 ಕಿ.ಮೀ. ದೂರ ಸಂಚರಿಸಲಿದೆʼʼ ಎಂದು ಗಡ್ಕರಿ ತಿಳಿಸಿದ್ದಾರೆ.

ಬಸ್‌ನ ವೈಶಿಷ್ಟ್ಯ

“ಬಸ್‌ನಲ್ಲಿ ಎಲ್ಲ ಸೌಲಭ್ಯಗಳನ್ನು ಅಳವಡಿಸುವಂತೆ ಸೂಚಿಸಿದ್ದೇನೆ. ಸೀಟಿನ ಮುಂದೆ ಲ್ಯಾಪ್‌ಟಾಪ್‌ ಇಡಲು ಸ್ಥಳಾವಕಾಶ, ಹವಾನಿಯಂತ್ರಣ ವ್ಯವಸ್ಥೆ, ಆರಾಮದಾಯಕ ಕುರ್ಚಿಗಾಗಿ ಬೇಡಿಕೆ ಇಟ್ಟಿದ್ದೇನೆ. ಏರ್ ಹೋಸ್ಟೆಸ್‌ಗಳಂತೆ ಪ್ರಯಾಣಿಕರಿಗೆ ಹಣ್ಣು, ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳನ್ನು ನೀಡಲು ಬಸ್ ಹೋಸ್ಟೆಸ್‌ಗಳು ಇರಲಿದ್ದಾರೆ. ನನ್ನ ಲೆಕ್ಕಾಚಾರದ ಪ್ರಕಾರ ಈ ಬಸ್‌ನ ವೆಚ್ಚ ಡೀಸೆಲ್ ಬಸ್‌ಗಿಂತ ಶೇ. 30ರಷ್ಟು ಕಡಿಮೆ ಇರಲಿದೆ. ಸೌರಶಕ್ತಿಯನ್ನು ಬಳಸಿದರೆ, ವೆಚ್ಚ ಇನ್ನೂ ಕಡಿಮೆಯಾಗುತ್ತದೆ” ಎಂದು ಅವರು ಹೇಳಿದ್ದಾರೆ.

ತಮ್ಮ ಸಲಹೆಯನ್ನು ಸ್ವೀಕರಿಸಿದ್ದಕ್ಕಾಗಿ ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ಅವರಿಗೆ ಧನ್ಯವಾದ ಅರ್ಪಿಸಿದ ಗಡ್ಕರಿ, ʼʼಇಂಡಿಯನ್ ಆಯಿಲ್ ಕಸದಿಂದ 1 ಲಕ್ಷ ಲೀಟರ್ ಎಥೆನಾಲ್ ಮತ್ತು ಜೈವಿಕ ಬಿಟುಮೆನ್ ಉತ್ಪಾದಿಸುವ ಯೋಜನೆಯನ್ನು ಪ್ರಾರಂಭಿಸಿದೆ. 76,000 ಟನ್ ಜೈವಿಕ ವಾಯುಯಾನ ಇಂಧನವನ್ನು ಸಹ ಉತ್ಪಾದಿಸುತ್ತದೆʼʼ ಎಂದಿದ್ದಾರೆ.

ಇದನ್ನೂ ಓದಿ: Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್​ ಶುಲ್ಕ ಕಟ್ಟಬೇಡಿ; ನಿತಿನ್​ ಗಡ್ಕರಿ ಸೂಚನೆ

Exit mobile version