Site icon Vistara News

Nitin Gadkari: ಖರ್ಗೆ, ಜೈರಾಮ್ ರಮೇಶ್‌ಗೆ ನಿತಿನ್ ಗಡ್ಕರಿ ಲೀಗಲ್ ನೋಟಿಸ್; ಕ್ಷಮೆ ಕೇಳಲು ಮೂರು ದಿನಗಳ ಗಡುವು

gadkari

gadkari

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂದರ್ಶನದ ಆಯ್ದ ಭಾಗವನ್ನು ತಿರುಚಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಶುಕ್ರವಾರ (ಮಾರ್ಚ್‌ 1) ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಜತೆಗೆ ಕ್ಷಮೆ ಕೋರಲು ಮೂರು ದಿನಗಳ ಗಡುವು ನೀಡಿದ್ದಾರೆ.

ಗೊಂದಲ ಉಂಟು ಮಾಡುವ ಮತ್ತು ತಮ್ಮ ಘನತೆಗೆ ಭಂಗ ತರುವ ಉದ್ದೇಶದಿಂದ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ತಿರುಚಿದ ವಿಡಿಯೊ ಹಂಚಿಕೊಳ್ಳಲಾಗಿದೆ ಎಂದು ಗಡ್ಕರಿ ಆರೋಪಿಸಿದ್ದಾರೆ. ಈ ಲೀಗಲ್ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ಪೋಸ್ಟ್ ಅನ್ನು ಅಳಿಸುವಂತೆ ಮತ್ತು ಮೂರು ದಿನಗಳಲ್ಲಿ ಲಿಖಿತವಾಗಿ ಕ್ಷಮೆಯಾಚಿಸಬೇಕು ಎಂದು ಸೂಚಿಸಿದ್ದಾರೆ.

ಏನಿದು ವಿವಾದ?

ಸುದ್ದಿ ಪೋರ್ಟಲ್‌ಗೆ ನೀಡಿದ ಸಂದರ್ಶನದಿಂದ ಈ 19 ಸೆಕೆಂಡ್‌ಗಳ ವಿಡಿಯೊ ಕ್ಲಿಪ್ ಅನ್ನು ತೆಗೆದುಕೊಳ್ಳಲಾಗಿದೆ ಎಂದು ಗಡ್ಕರಿ ಅವರ ವಕೀಲ ಬಾಲೇಂದು ಶೇಖರ್ ಹೇಳಿದ್ದಾರೆ. ಈ ಕ್ಲಿಪ್ ಅವರ ಮಾತಿನ ಸಂದರ್ಭ ಮತ್ತು ಅರ್ಥವನ್ನು ಮರೆ ಮಾಚಿದೆ. ಸಚಿವರ ಖ್ಯಾತಿಯನ್ನು ಕೆಡಿಸುವುದು ಇವರ ಉದ್ದೇಶ ಎಂದು ಅವರು ತಿಳಿಸಿದ್ದಾರೆ. ಪಕ್ಷದೊಳಗೆ ಭಿನ್ನಾಭಿಪ್ರಾಯ ಮತ್ತು ವಿಭಜನೆಯನ್ನು ಬಿತ್ತುವ ಉದ್ದೇಶದಿಂದ ಸಂದರ್ಶನದ ಸಂದರ್ಭ ಮತ್ತು ಮಹತ್ವವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

ʼʼಮಾರ್ಚ್‌ 1, 2024ರಂದು ಕಾಂಗ್ರೆಸ್‌ನ ಅಧಿಕೃತ ಎಕ್ಸ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾದ ವಿಡಿಯೊ ನೋಡಿ ಗಡ್ಕರಿ ಅವರು ಶಾಕ್‌ಗೆ ಒಳಗಾಗಿದ್ದಾರೆ. ಅವರ ಸಂದರ್ಶನದ ಸಂದರ್ಭೋಚಿತ ಉದ್ದೇಶ ಮತ್ತು ಅರ್ಥವನ್ನು ಮರೆಮಾಚುವ ಮೂಲಕ ಈ 19 ಸೆಕೆಂಡ್‌ಗಳ ವಿಡಿಯೊವನನು ಪೋಸ್ಟ್‌ ಮಾಡಿರುವುದು ಗಮನಕ್ಕೆ ಬಂದಿದೆʼʼ ಎಂದು ಲೀಗಲ್‌ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ವಿಡಿಯೊದಲ್ಲೇನಿದೆ?

ಕಾಂಗ್ರೆಸ್‌ ಪೋಸ್ಟ್‌ ಮಾಡಿರುವ ವಿಡಿಯೊಕ್ಕೆ ʼʼಹಳ್ಳಿಗಳು, ಕಾರ್ಮಿಕರು ಮತ್ತು ರೈತರು ಇಂದು ಅತೃಪ್ತರಾಗಿದ್ದಾರೆ. ಹಳ್ಳಿಗಳಲ್ಲಿ ಸಮರ್ಪಕ ರಸ್ತೆಗಳು, ಕುಡಿಯುವ ನೀರು, ಉತ್ತಮ ಆಸ್ಪತ್ರೆಗಳು ಮತ್ತು ಶಾಲೆಗಳಿಲ್ಲ- ನಿತಿನ್ ಗಡ್ಕರಿ, ನರೇಂದ್ರ ಮೋದಿ ಸರ್ಕಾರದ ಸಚಿವʼʼ ಎಂಬ ಕ್ಯಾಪ್ಶನ್‌ ನೀಡಲಾಗಿದೆ. ಅಂದರೆ ತಮ್ಮದೆ ಸರ್ಕಾರದ ವಿರುದ್ಧ ಗಡ್ಕರಿ ಮಾತನಾಡಿದ್ದಾರೆ ಎನ್ನುವುದನ್ನು ಬಿಂಬಿಸಲು ಈ ಮೂಲಕ ಪ್ರಯತ್ನಿಸಲಾಗಿದೆ.

ಇದನ್ನೂ ಓದಿ: Nitin Gadkari: ಉತ್ತಮ ಕೆಲಸ ಮಾಡುವವರಿಗೆ ಅರ್ಹವಾದ ಗೌರವ ಸಿಗುವುದಿಲ್ಲ: ನಿತಿನ್ ಗಡ್ಕರಿ

ದುರುದ್ದೇಶ

“ಸಾರ್ವಜನಿಕರ ದೃಷ್ಟಿಯಲ್ಲಿ ಗಡ್ಕರಿ ಅವರ ಬಗ್ಗೆ ಗೊಂದಲ ಮೂಡಿಸಲು ಮತ್ತು ಅಪಖ್ಯಾತಿಯನ್ನು ಉಂಟು ಮಾಡುವ ಏಕೈಕ ಉದ್ದೇಶ ಇದರ ಹಿಂದೆ. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜನರ ವಿಶ್ವಾಸ ಗೆಲ್ಲಲು ಸಜ್ಜಾಗಿರುವ ಬಿಜೆಪಿಯ ಒಳಗಿರುವ ಒಗ್ಗಟ್ಟಿನಲ್ಲಿ ಬಿರುಕು ಮೂಡಿಸುವ ವ್ಯರ್ಥ ಪ್ರಯತ್ನದೊಂದಿಗೆ ಈ ಕೃತ್ಯವನ್ನು ಎಸಗಲಾಗಿದೆʼʼ ಎಂದು ಬಾಲೇಂದು ಶೇಖರ್ ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version