Site icon Vistara News

Bihar Politics: ಇಂದು ಬೆಳಗ್ಗೆ 10ಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ? ಬಿಹಾರ ರಾಜಕೀಯ ಬಿರುಸು

Nitish kumar takes oath as bihar cm

ಪಟನಾ: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರ ನಡೆಗಳಿಂದಾಗಿ ರಾಜಕೀಯ ಚಟುವಟಿಕೆಗಳು (Bihar Politics) ಚುರುಕುಗೊಂಡಿವೆ. ನಿತೀಶ್‌ ಕುಮಾರ್‌ ಅವರು ಆರ್‌ಜೆಡಿ ಜತೆಗಿನ ಮೈತ್ರಿಗೆ ಭಾನುವಾರ (ಜನವರಿ 28) ವಿದಾಯ ಹೇಳಲಿದ್ದು, ಬೆಳಗ್ಗೆ 10 ಗಂಟೆಗೇ ರಾಜೀನಾಮೆ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೆಳಗ್ಗೆ 9 ಗಂಟೆಗೆ ಬಿಜೆಪಿಯು ಶಾಸಕರ ಸಭೆ ನಡೆಸಲಿದ್ದು, ಬೆಂಬಲ ದೃಢಪಡಿಸಿಕೊಳ್ಳಲಿದೆ. ಇದಾದ ಬಳಿಕ ನಿತೀಶ್‌ ಕುಮಾರ್‌ ಅವರು ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಆರ್‌ಜೆಡಿಯೂ ಶಾಸಕರ ಜತೆ ಸಭೆ ನಡೆಸಿದ್ದು, ಯಾರೂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಸೂಚಿಸಿದ್ದಾರೆ. ಇತ್ತ ಬಿಜೆಪಿಯೂ ಸಾಲು ಸಾಲು ಸಭೆಗಳನ್ನು ನಡೆಸುತ್ತಿದೆ. ನಿತೀಶ್‌ ಕುಮಾರ್‌ ಅವರು ಕೂಡ ರಾಜೀನಾಮೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇಂಡಿಯಾ ಒಕ್ಕೂಟ ಹಾಗೂ ಆರ್‌ಜೆಡಿ ಮೈತ್ರಿಗೆ ಭಾನುವಾರ ವಿದಾಯ ಹೇಳಲಿರುವ ಅವರು, ತಮ್ಮ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿ ಯಾವ ಕ್ಷಣದಲ್ಲಿ ಬೇಕಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿ, ಬಿಹಾರ ರಾಜಕೀಯ ಚಟುವಟಿಕೆಗಳು ದೇಶಾದ್ಯಂತ ಗಮನ ಸೆಳೆಯುವ ಜತೆಗೆ ಕುತೂಹಲ ಕೆರಳಿಸಿವೆ.

ಬಿಹಾರದಲ್ಲಿ ಪಕ್ಷಗಳ ಬಲಾಬಲ

ಪಕ್ಷಶಾಸಕರು
ಆರ್‌ಜೆಡಿ79
ಬಿಜೆಪಿ78
ಜೆಡಿಯು45
ಸಿಪಿಐ (ಎಂಎಲ್)12
ಕಾಂಗ್ರೆಸ್‌19
ಎಚ್‌ಎಎಂ04
ಎಐಎಂಐಎಂ01
ಸಿಪಿಎಂ02
ಸಿಪಿಐ02
ಸ್ವತಂತ್ರ01
ಒಟ್ಟು243
ಮ್ಯಾಜಿಕ್‌ ನಂಬರ್‌122

ಇದನ್ನೂ ಓದಿ: Nitish Kumar: ನಿತೀಶ್‌ ಕುಮಾರ್ ಮತ್ತೆ ಯುಟರ್ನ್;‌ ಇವರ ‘ಜಂಪ್‌’ಗಿದೆ ‘ಲಾಂಗ್’‌ ಇತಿಹಾಸ!

‌ಲೋಕಸಭೆ ಚುನಾವಣೆ ಲೆಕ್ಕಾಚಾರ

ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಜೆಡಿಯುಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಯು ಹಾಗೂ ಲೋಕ ಜನ ಶಕ್ತಿ (LJP) ಮೈತ್ರಿ ಪರವಾಗಿತ್ತು. ಹಾಗಾಗಿ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಯುಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ನಿತೀಶ್‌ ಕುಮಾರ್‌ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟದ ಜೆಡಿಯು 17, ಬಿಜೆಪಿ 16 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version