Site icon Vistara News

Nitish Kumar: ಬಿಜೆಪಿ ಜತೆ ನಿತೀಶ್‌ ಕುಮಾರ್‌ ದೋಸ್ತಿ ಪಕ್ಕಾ; ಜ.28ಕ್ಕೆ ಸಿಎಂ ಆಗಿ ಪದಗ್ರಹಣ

Nitish Kumar

JDU chief Nitish Kumar's scathing remarks on INDIA bloc leave PM Narendra Modi laughing, watch

ಪಟನಾ: ಇಂಡಿಯಾ ಒಕ್ಕೂಟದ ಸಂಚಾಲಕನಾಗಲು ಒಪ್ಪಿಕೊಳ್ಳದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರು ಈಗ ಮುಂದಿನ ಎರಡು ದಿನದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಆರ್‌ಜೆಡಿ ಜತೆಗಿನ ಮೈತ್ರಿ ನಿಭಾಯಿಸಲು ಹೆಣಗಾಡುತ್ತಿರುವ, ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟದ (India Bloc) ಮೇಲಿನ ಭರವಸೆ ಕಳೆದುಕೊಂಡಿರುವ ನಿತೀಶ್‌ ಕುಮಾರ್‌ ಅವರು ಇದೇ ಭಾನುವಾರ (ಜನವರಿ 28) ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವುದು ಪಕ್ಕಾ ಎಂದು ಮೂಲಗಳು ತಿಳಿಸಿವೆ.

ಜನವರಿ 28ರಂದು ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿಯಾದರೆ, ಬಿಜೆಪಿಯ ಸುಶೀಲ್‌ ಕುಮಾರ್‌ ಅವರು ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಬಿಜೆಪಿ ಜತೆಗಿನ ದೋಸ್ತಿಯೇ ಒಳಿತು ಎಂದು ಭಾವಿಸಿರುವ ನಿತೀಶ್‌ ಕುಮಾರ್‌ ಅವರು ಶೀಘ್ರದಲ್ಲೇ ಆರ್‌ಜೆಡಿ ಜತೆಗಿನ ಮೈತ್ರಿಗೆ ಇತಿಶ್ರೀ ಹಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ನಿತೀಶ್‌ ಕುಮಾರ್‌ ಜತೆ ಕೈ ಜೋಡಿಸುವ ಮೂಲಕ ಬಿಜೆಪಿಯು ಬಿಹಾರ ರಾಜಕೀಯ ಹಾಗೂ ಲೋಕಸಭೆ ಚುನಾವಣೆ ಮೇಲೆ ಹಿಡಿತ ಸಾಧಿಸಿ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

Nitish Kumar And Tejaswi Yadav

ಲೋಕಸಭೆ ಮೈತ್ರಿ ಏಕೆ ಪ್ರಮುಖ?

ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಜೆಡಿಯುಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಯು ಹಾಗೂ ಲೋಕ ಜನ ಶಕ್ತಿ (LJP) ಮೈತ್ರಿ ಪರವಾಗಿತ್ತು. ಹಾಗಾಗಿ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಯುಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ನಿತೀಶ್‌ ಕುಮಾರ್‌ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟದ ಜೆಡಿಯು 17, ಬಿಜೆಪಿ 16 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಸೀಟು ಹಂಚಿಕೆ ಇಲ್ಲ ಎಂದ ಟಿಎಂಸಿ

ಬಿಜೆಪಿಗೆ ಸೆಡ್ಡು ಹೊಡೆದು, ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡಿರುವ ನಿತೀಶ್‌ ಕುಮಾರ್‌ ಅವರಿಗೆ ಸುಗಮವಾಗಿ ಸರ್ಕಾರ ಮುನ್ನಡೆಸಲು ಕೂಡ ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಅವರು ಮತ್ತೆ ಬಿಜೆಪಿ ಜತೆ ಹೆಜ್ಜೆ ಹಾಕಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕುರಿತು ನಿತೀಶ್‌ ಕುಮಾರ್‌ ಅವರು ಅಧಿಕೃತ ಘೋಷಣೆ ಮಾಡಲಿದ್ದಾರೆ. ಬಿಹಾರದಲ್ಲಿ ರಾಹುಲ್‌ ಗಾಂಧಿ ನಡೆಸುವ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳದಿರಲು ನಿತೀಶ್‌ ಕುಮಾರ್‌ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ, ನರೇಂದ್ರ ಮೋದಿ ಅವರನ್ನು ಮಣಿಸಲು ಒಗ್ಗೂಡಿದ ಪ್ರತಿಪಕ್ಷಗಳ ಪರಿಸ್ಥಿತಿ ಈಗ ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಗ ಮಾಡಿದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version