ನವ ದೆಹಲಿ: ಬಿಹಾರ ರಾಜಕೀಯದಲ್ಲಿ ಕೊನೆಗೂ ಅಂದುಕೊಂಡಂತೇ ಆಗಿದೆ. ರಾಜ್ಯಪಾಲ ಫಗು ಚೌಹಾಣ್ರನ್ನು ಭೇಟಿ ಮಾಡಿದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿ ಕಡಿತವನ್ನು ಅಧಿಕೃತಗೊಳಿಸಿದ್ದಾರೆ. ಅಲ್ಲಿಗೆ ಬಿಹಾರದ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಪಕ್ಕಾ ಪತನಗೊಂಡಂತಾಗಿದೆ. ಕಳೆದ ಎರಡು ದಿನಗಳಿಂದಲೂ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವೆ ಅಸ್ಥಿರತೆ ಉಂಟಾಗಿತ್ತು. ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ನಿತೀಶ್ ಕುಮಾರ್ ಅವರು ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೋರಿದ್ದರು. ಅಂತೆಯೇ, ಇಂದು ಸಂಜೆ 4ಗಂಟೆ ಹೊತ್ತಿಗೆ ಪಟನಾದಲ್ಲಿರುವ ರಾಜಭವನದಲ್ಲಿ, ರಾಜ್ಯಪಾಲ ಫಗು ಚೌಹಾಣ್ರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ‘ನಾವು ಎನ್ಡಿಎಯೊಂದಿಗೆ ಮೈತ್ರಿ ಕಳೆದುಕೊಳ್ಳಬೇಕು, ನಾನು ರಾಜೀನಾಮೆ ನೀಡಬೇಕು ಎಂದು ನಮ್ಮ ಪಕ್ಷದ ಎಲ್ಲ ಸಂಸದರು, ಶಾಸಕರು ಬಯಸಿದರು. ಹಾಗಾಗಿಯೇ ಮೈತ್ರಿ ತೊರೆದಿದ್ದೇವೆ ಎಂದು ತಿಳಿಸಿದರು. ಹಾಗೇ, ರಾಜೀನಾಮೆ ನೀಡಿದ ತಕ್ಷಣ ಅವರು, ಲಾಲೂ ಪ್ರಸಾದ್ ಯಾದವ್ ಮನೆಗೆ ಹೋಗಿ, ಅಲ್ಲಿ ತೇಜಸ್ವಿ ಯಾದವ್ರನ್ನು ಭೇಟಿಯಾಗಿದ್ದಾರೆ. ಅಲ್ಲೀಗ ಮಹಾಘಟ್ಬಂಧನ್ದ ಎಲ್ಲ ಪ್ರಮುಖರೂ ಸೇರಿದ್ದು, ಶೀಘ್ರವೇ ತೇಜಸ್ವಿ ಯಾದವ್ ಅವರನ್ನೆಲ್ಲ ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ: Bihar Politics | ರಾಜೀನಾಮೆಗೆ ನಿತೀಶ್ ನಿರ್ಧಾರ, ಬಿಜೆಪಿ ಜತೆಗಿನ ದೋಸ್ತಿ ಕಟ್