Site icon Vistara News

ಹಿಂಸಾಚಾರ ಸಹಿಸಲ್ಲ; ಭಾರತೀಯರ ಮೇಲಿನ ದಾಳಿ ಖಂಡಿಸಿದ ಅಮೆರಿಕ, ಕ್ರಮದ ಭರವಸೆ

joe biden

'No excuse for violence, unacceptable': US condemns attacks on Indian students

ವಾಷಿಂಗ್ಟನ್:‌ ಅಮೆರಿಕದಲ್ಲಿ ಇತ್ತೀಚೆಗೆ ಭಾರತದ ವಿದ್ಯಾರ್ಥಿಗಳ (Indian Students) ಮೇಲೆ ದಾಳಿ, ಹತ್ಯೆಗಳು ಜಾಸ್ತಿಯಾಗುತ್ತಿದ್ದು, ಭಾರತ ಸರ್ಕಾರವು ಕ್ರಮಕ್ಕೆ ಆಗ್ರಹಿಸಿದೆ. ಇದರ ಬೆನ್ನಲ್ಲೇ, ಅಮೆರಿಕ ಸರ್ಕಾರವು ಭಾರತದ ವಿದ್ಯಾರ್ಥಿಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸಿದೆ. “ಅಮೆರಿಕದಲ್ಲಿ ಯಾವುದೇ ರೀತಿಯ ಹಿಂಸಾಚಾರವನ್ನು (Violence) ನಾವು ಸಹಿಸಿಕೊಳ್ಳುವುದಿಲ್ಲ. ಹಿಂಸಾಚಾರ ನಿಗ್ರಹಕ್ಕೆ ಜೋ ಬೈಡೆನ್‌ (Joe Biden) ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ” ಎಂದು ಅಮೆರಿಕ ತಿಳಿಸಿದೆ.

ಹಿಂಸಾಚಾರದ ಕುರಿತು ರಾಷ್ಟ್ರೀಯ ಭದ್ರತಾ ಸಮಿತಿಯ ಸ್ಟ್ರ್ಯಾಟೆಜಿಕ್‌ ಕಮ್ಯುನಿಕೇಷನ್ಸ್‌ ವಿಭಾಗದ ಸಹ ಸಂಚಾಲಕ ಜಾನ್‌ ಕಿರ್ಬಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭಾರತದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಾಳಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಅಮೆರಿಕದಲ್ಲಿ ಧರ್ಮ ಅಥವಾ ಲಿಂಗದ ಆಧಾರದ ಮೇಲೆ ನಡೆಯುವ ಹಿಂಸಾಚಾರವನ್ನು ಸಹಿಸಿಕೊಳ್ಳುವ ಮಾತೇ ಇಲ್ಲ. ಆಯಾ ರಾಜ್ಯಗಳು, ಸ್ಥಳೀಯ ಆಡಳಿತದ ಜತೆ ಜೋ ಬೈಡೆನ್‌ ಸರ್ಕಾರವು ಸಂಪರ್ಕದಲ್ಲಿದೆ. ಹಿಂಸಾಚಾರದ ನಿಗ್ರಹಕ್ಕೆ ಸಕಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದರು.

“ಧರ್ಮ, ಲಿಂಗ, ಪ್ರಾದೇಶಿಕತೆ ಹಾಗೂ ಬಣ್ಣದ ಆಧಾರದ ಮೇಲೆ ಹಿಂಸಾಚಾರ ನಡೆದರೆ, ಅದರನ್ನು ನೋಡಿಕೊಂಡು ಸರ್ಕಾರವು ಸುಮ್ಮನೆ ಕೂರುವುದಿಲ್ಲ. ಸ್ಥಳೀಯ ಆಡಳಿತಗಳು ಹಿಂಸಾಚಾರ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಬೈಡೆನ್‌ ಸರ್ಕಾರವು ಈ ಕುರಿತು ನಿರಂತರವಾದ ಸಂವಹನ, ಮಾತುಕತೆ ಮೂಲಕ ಹಿಂಸಾಚಾರ ತಡೆಗೆ ಶ್ರಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭದ್ರತೆ ಒದಗಿಸಲಾಗುವುದು. ಅಮೆರಿಕದಲ್ಲಿ ನೆಲೆಸಿರುವವರ ಸುರಕ್ಷತೆ ನಮ್ಮ ಆದ್ಯತೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Burj Khalifa: ಬುರ್ಜ್‌ ಖಲೀಫಾ ಮೇಲೆ ಭಾರತದ ತಿರಂಗಾ; ಮೋದಿ ಭೇಟಿ ಹಿನ್ನೆಲೆ ಗೌರವ

ತಿಂಗಳಲ್ಲಿ ಭಾರತ ಮೂಲದ ಐವರು ವಿದ್ಯಾರ್ಥಿಗಳ ಹತ್ಯೆ

ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಓಹಿಯೋ ರಾಜ್ಯದಲ್ಲಿ ನೀಲ್‌ ಆಚಾರ್ಯ, ಜಾರ್ಜಿಯಾದಲ್ಲಿ ಎಂಬಿಎ ಓದುತ್ತಿದ್ದ ವಿವೇಕ್‌ ಸೈನಿ, 19 ವರ್ಷದ ಶ್ರೇಯಸ್‌ ರೆಡ್ಡಿ ಎಂಬುವರು ಸೇರಿ ಕಳೆದ ಮೂರು ವಾರಗಳಲ್ಲಿ ಐವರು ವಿದ್ಯಾರ್ಥಿಗಳು ಹತ್ಯೆಗೀಡಾಗಿದ್ದಾರೆ. ಇದು ಪೋಷಕರಲ್ಲಿ ಆತಂಕ ಮೂಡಿಸಿದ್ದು, ಅಮೆರಿಕಕ್ಕೆ ವ್ಯಾಸಂಗ ಮಾಡಲು ಮಕ್ಕಳನ್ನು ಕಳುಹಿಸಲು ಕೂಡ ಹೆದರುವಂತಾಗಿದೆ. ಅಮೆರಿಕದಲ್ಲಿ ಭಾರತ ಮೂಲದ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version