೭೫ನೇ ಸ್ವಾತಂತ್ರ್ಯೋತ್ಸವದ ಸಡಗರದಲ್ಲಿ ದೇಶಕ್ಕೆ ದೇಶವಿಡೀ ತ್ರಿವರ್ಣಗಳ ಬೆಳಕಿನಲ್ಲಿ ಮಿಂದೇಳುತ್ತಿರುವಾಗ ವಿಶ್ವವಿಖ್ಯಾತಿಯ, ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ಆಗ್ರಾದ ತಾಜ್ ಮಹಲ್ ಮಾತ್ರ ಕತ್ತಲಲ್ಲೇ ಇರಲಿದೆ!
ದೇಶದೆಲ್ಲೆಡೆ ಅದ್ದೂರಿಯಿಂದ ಐತಿಹಾಸಿಕ ಸ್ಮಾರಕಗಳು, ಕಟ್ಟಡಗಳು, ಸೇತುವೆಗಳು, ಜಲಪಾತಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಕೋಟೆ ಕೊತ್ತಲಗಳು, ಅರಮನೆಗಳು ೭೫ರ ಸ್ವಾತಂತ್ರ್ಯ ಸಂಭ್ರಮದ ಹರುಷದಲ್ಲಿ ಹಬ್ಬದ ಕಳೆಯಲ್ಲಿ ಮಿರಮಿರನೆ ಮಿಂಚುತ್ತಿದ್ದರೆ, ತಾಜ್ ಮಹಲ್ ಮಾತ್ರ ಎಂದಿನಂತೆಯೇ ಇರಲಿದೆ. ತನ್ನ ಪಕ್ಕದ ಫತ್ತೇಪುರ ಸಿಕ್ರಿಯಿಂದ ಹಿಡಿದು ಪೋರಬಂದರಿನ ಗಾಂಧೀಜಿ ಜನ್ಮಸ್ಥಳದವರೆಗೆ ದೇಶದ ಬಹುತೇಕ ಎಲ್ಲ ಸ್ಮಾರಕಗಳೂ ಮೂರು ಬಣ್ಣಗಳ ಬೆಳಕಿನಲ್ಲಿ ಈಗಾಗಲೇ ಝಗಮಗಿಸುತ್ತಿದ್ದರೂ ಪ್ರಮುಖ ಸ್ಮಾರಕವೆಂದು ಜಗದ್ವಿಖ್ಯಾತಿ ಗಳಿಸಿರುವ ತಾಜ್‌ಮಹಲ್ ಮಾತ್ರ ಈ ಭಾಗ್ಯ ಏಕಿಲ್ಲ ಎಂಬುದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ!
೧೭ನೇ ಶತಮಾನದ ಈ ತಾಜ್ ಮಹಲ್ ಎಂಬ ಅಮೃತಶಿಲೆಯ ಬೆಳ್ಳಗಿನ ಸ್ಮಾರಕಕ್ಕೆ ಬೆಳಕಿನ ಅಲಂಕಾರ ನೀಡುವ ಬಗ್ಗೆ ಸರ್ವೋಚ್ಛ ನ್ಯಾಯಾಲಯದಿಂದ ನಿಷೇಧ ಇರುವುದರಿಂದ ಇದೊಂದು ಸ್ಮಾರಕ ಮಾತ್ರ ದೇಶದ ಈ ಅತ್ಯಪೂರ್ವ ಗಳಿಗೆಯಲ್ಲಿ ಭಾಗಿಯಾಗುವ ಅವಕಾಶದಿಂದ ದೂರ ಉಳಿದಿದೆ.
೭೭ ವರ್ಷಗಳ ಹಿಂದೆ ಫಳಫಳಿಸಿದ್ದ ತಾಜ್‌ಮಹಲ್!: ಹಾಗೆ ನೋಡಿದರೆ, ಭಾರತದಲ್ಲಿ ಮೊದಲು ಬೆಳಕಿನ ಅಲಂಕಾರವನ್ನು ಕಂಡಿದ್ದೇ ತಾಜ್‌ಮಹಲ್! ಸೂರ್ಯ ಮುಳುಗಿದ ಮೇಲೆ ಝಗಮಗ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುವ ಭಾಗ್ಯ ದಕ್ಕಿಸಿಕೊಂಡ ಭಾರತದ ಮೊದಲ ಐತಿಹಾಸಿಕ ಸ್ಮಾರಕ ತಾಜ್‌ಮಹಲ್. ಆಗ್ರಾ ಟೂರಿಸ್ಟ್ ವೆಲ್‌ಫೇರ್ ಛೇಂಬರ್ ಪ್ರಕಾರ, ೭೭ ವರ್ಷಗಳ ಹಿಂದೆ, ಅಂದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕುವ ಮೊದಲೇ, ಎರಡನೇ ವಿಶ್ವಯುದ್ಧದ ಸಂದರ್ಭ, ವಿಜಯಿಯಾಗಿ ಮರಳಿದ ಸೇನೆಯ ವ್ಯಕ್ತಿಯೊಬ್ಬರಿಗೆ ಸ್ವಾಗತ ಕೋರಲು ಅದ್ದೂರಿ ಸಮಾರಂಭವೊಂದನ್ನು ತಾಜ್‌ಮಹಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭ ಇಡೀ ತಾಜ್‌ಮಹಲನ್ನು ಝಗಮಗಿಸುವ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿತ್ತಂತೆ.
ಇದಲ್ಲದೆ, ಮಾರ್ಚ್ ೨೦, ೧೯೯೭ರಲ್ಲಿ ಖ್ಯಾತ ಪಿಯಾನೋ ವಾದಕ ಯನ್ನಿ ಅವರ ಪಿಯಾನೋ ಕಾರ್ಯಕ್ರಮಕ್ಕಾಗಿ ಇಡೀ ತಾಜ್‌ಮಹಲ್ ಬೆಳಕಿನಿಂದ ಮಿಂದಿತ್ತು. ತಾಜ್ ಮಹಲನ್ನು ಹಿನ್ನೆಲೆಯಾಗಿಟ್ಟುಕೊಂಡು ನೀಲಿ ಬೆಳಕಿನಲ್ಲಿ ತೊಯ್ದು ಹೋಗುವಂತೆ ಮಾಡಿದ್ದ ಆಭೂತಪೂರ್ವ ಕಾರ್ಯಕ್ರಮ ಅದಾಗಿತ್ತು. ನೀಲಿ ಬೆಳಕಿನ ಹಿನ್ನೆಲೆಯಲ್ಲಿ ಬಿಳಿಯ ತಾಜ್‌ಮಹಲಿನ ಚಿತ್ರ ಇಂದಿಗೂ ತಾಜ್‌ಮಹಲಿನ ಬಹಳ ಪ್ರಸಿದ್ಧ ಚಿತ್ರಗಳಲ್ಲಿ ಒಂದು. ಆ ರಾತ್ರಿಯ ಕಾರ್ಯಕ್ರಮದಲ್ಲಿ ನೀಲಿ, ಹಳದಿ, ಪಿಂಕ್ ಬಣ್ಣಗಳಲ್ಲಿ ಮುಳುಗೆದ್ದ ತಾಜ್‌ಮಹಲ್ ಮರುದಿನ ಮಾತ್ರ ಬೇರೆಯೇ ಸ್ಥಿತಿಗೆ ತಲುಪಿತ್ತು. ರಾತ್ರಿಯ ಕೃತಕ ಬೆಳಕಿಗೆ ಆಕರ್ಷಿತವಾಗಿ ಬಂದ ನೂರಾರು ಕೀಟಗಳು ತಾಜ್‌ಮಹಲಿನ ಸುತ್ತಲೂ ರಾಶಿರಾಶಿಯಾಗಿ ಸತ್ತುಬಿದ್ದಿದ್ದವು. ಈ ಕೀಟಗಳಿಂದಾಗಿ, ತಾಜ್‌ಮಹಲಿನ ಬಿಳಿಯ ಅಮೃತಶಿಲೆಗೆ ಹಾನಿಯೂ ಆಗಿತ್ತು ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆಯ ತಜ್ಞರು ಆಗ ಅಭಿಪ್ರಾಯಪಟ್ಟಿದ್ದರು. ಇದಾದ ಮೇಲೆಯೂ ಪ್ರತಿಷ್ಟಿತ ಟಿವಿ ಕಾರ್ಯಕ್ರಮ, ಸಾರೆಗಾಮಪವನ್ನು ಕೂಡಾ ೧೯೯೯ರಲ್ಲಿ ತಾಜ್‌ಮಹಲನ್ನು ಹಿನ್ನೆಲೆಯಾಗಿ ಉಪಯೋಗಿಸಿ ಚಿತ್ರೀಕರಿಸಲಾಗಿತ್ತು. ಹೀಗೆ ಮತ್ತೆ ಮತ್ತೆ ಕೃತಕ ಬೆಳಕಿಗೆ ಒಡ್ಡಿಕೊಳ್ಳುವ ಅವಕಾಶ ಹೆಚ್ಚಾದಂತೆಲ್ಲ, ಪುರಾತತ್ವ ಇಲಾಖೆ ಇದರಿಂದ ಆಗುತ್ತಿದ್ದ ತೊಂದರೆಗಳಿಂದ ಎಚ್ಚೆತ್ತುಕೊಂಡರು. ಈ ಹಿನ್ನೆಲೆಯಲ್ಲಿ ೯೦ರ ದಶಕದ ಕೊನೆಯಲ್ಲಿ, ತಾಜ್‌ಮಹಲ್‌ಗೆ ಯಾವುದೇ ಬಗೆಯ ಕೃತಕ ಬೆಳಕಿನಿಂದ ಅಲಂಕಾರ ಮಾಡಬಾರದು. ಇದರಿಂದ ಶಿಲೆಗೆ ಹಾನಿಯಾಗುವುದಲ್ಲದೆ, ಸ್ಮಾರಕವನ್ನು ಸಂರಕ್ಷಿಸುವಲ್ಲಿ ತೊಂದರೆಯಾಗಲಿದೆ ಎಂದು ವರದಿ ನೀಡಿದರು.
ಇದನ್ನೂ ಓದಿ: ಅಮೃತ ಮಹೋತ್ಸವ | ತ್ರಿವರ್ಣ ಬೆಳಕಿನಲ್ಲಿ ಮಿಂದೇಳುತ್ತಿರುವ ದೆಹಲಿ!
ಇದಾದ ಮೇಲೆ ೨೦೧೫ರಲ್ಲಿ, ತಾಜ್‌ಮಹಲಿಗೆ ಯಾವುದೇ ಕೃತಕ ಬೆಳಕಿನ ಅವಶ್ಯಕತೆಯೇ ಇಲ್ಲ. ತಾಜ್‌ಮಹಲಿನ ಶಿಲೆಯೇ ಬಿಳಿಯಾಗಿರುವುದರಿಂದ ಅದಕ್ಕೆ ಅದರದ್ದೇ ಆದ ಸೌಂದರ್ಯವಿದೆ. ರಾತ್ರಿಯ ನೈಸರ್ಗಿಕ ಬೆಳಕಿನಲ್ಲಿ ಅದು ಅದ್ಭುತವಾಗಿ ಕಾಣುತ್ತದೆ. ಹುಣ್ಣಿಮೆಯ ಚಂದ್ರನ ಬೆಳಕಿನಲ್ಲಿ ತಾಜ್‌ಮಹಲ್ ನೋಡುವುದೇ ಚಂದ. ಇದಕ್ಕಿಂತ ಹೆಚ್ಚಿನ ಬೆಳಕಿನ ಅಗತ್ಯವಾದರೂ ಏನಿದೆ, ತಾಜ್‌ಮಹಲಿನ ಮೇಲೆ ಇಂತಹ ಬೆಳಕಿನ ಪ್ರಯೋಗಗಳೆಲ್ಲ ಬೇಡ. ಕೃತಕ ಬೆಳಕು ಕೀಟಗಳನ್ನು ಆಕರ್ಷಿಸುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಬರುವ ಅವುಗಳಿಂದ ಸ್ಮಾರಕಕ್ಕೆ ಹಾನಿಯಾಗುತ್ತದೆ ಎಂದು ಪುರಾತತ್ವ ಇಲಾಖೆ ತನ್ನ ವಾದವನ್ನು ಮಂಡಿಸಿತ್ತು.
೨೦೧೮ರಲ್ಲಿ, ತಾಜ್‌ಮಹಲ್ ತನ್ನ ಬಿಳಿಯ ಬಣ್ಣದಿಂದ ನಿಧಾನವಾಗಿ ಹಳದಿ ಹಸಿರು ಬಣ್ಣಕ್ಕೆ ತಿರುತ್ತಿರುವುದನ್ನು ಪತ್ತೆಹಚ್ಚಿದ ಇಲಾಖೆ, ಇದಕ್ಕೆ ಕಾರಣ ಹೆಚುತ್ತಿರುವ ಮಾಲಿನ್ಯ. ಜೊತೆಗೆ ಪಕ್ಕದಲ್ಲೇ ಹರಿವ ಯಮುನಾ ನದಿ, ತಾಜ್‌ಮಹಲಿನ ಮೇಲೆ ಪಾಚಿಗಟ್ಟುವುದಕ್ಕೆ ಪೂರಕ ವಾತಾವರಣ ನಿರ್ಮಿಸುತ್ತಿದೆ. ಹಾಗಾಗಿ, ತಾಜ್ ಮಹಲ್ ಈಗ ಇರುವಂತೆಯೇ ಮುಂದೆಯೂ ಉಳಿಯಬೇಕಾದಲ್ಲಿ, ದಯವಿಟ್ಟು ಇದರ ಮೇಲೆ ಇಂತಹ ಪ್ರಯೋಗಗಳನ್ನೆಲ್ಲ ಮಾಡಬೇಡಿ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಾಗಾಗಿ ಎಲ್ಲೆಡೆ ಹಸಿರು ಕೇಸರಿಗಳು ರಾರಾಜಿಸುತ್ತಿದ್ದರೂ, ತಾಜ್‌ಮಹಲ್ ಮಾತ್ರ ಕತ್ತಲಲ್ಲಿ ತನ್ನದೇ ಸಹಜ ಬಿಳಿಯಲ್ಲಿ ಹೊಳೆಯಲಿದೆ!
ಇದನ್ನೂ ಓದಿ: ಸ್ವಾತಂತ್ರ್ಯ ಅಮೃತ ಮಹೋತ್ಸವ | ಸು-30 ಎಂಕೆಐ ವಾಯುಪಡೆಯ ಬೆನ್ನೆಲುಬಾದರೆ ಮಿರೇಜ್ 2000 ತೋಳ್ಬಲ!