ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿವೆ. ಮಾಲ್ಡೀವ್ಸ್ ಸಂಸದರು ಭಾರತದ ಕ್ಷಮೆಯಾಚಿಸಿದ್ದಾರೆ. ಭಾರತದಲ್ಲಂತೂ ಮಾಲ್ಡೀವ್ಸ್ ವಿರುದ್ಧ ಅಭಿಯಾನವೇ ಶುರುವಾಗಿದೆ. ಇಷ್ಟಾದರೂ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ಅವರ ಒಣ ಜಂಭ ಕಡಿಮೆಯಾಗಿಲ್ಲ. “ನಮ್ಮನ್ನು ಬೆದರಿಸುವುದಕ್ಕೆ ಯಾರಿಗೂ ಪರವಾನಗಿ ಕೊಟ್ಟಿಲ್ಲ” ಎಂದು ಮೊಹಮ್ಮದ್ ಮುಯಿಜು ಹೇಳಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಐದು ದಿನಗಳ ಚೀನಾ ಭೇಟಿ ಮುಗಿಸಿ ಮಾಲ್ಡೀವ್ಸ್‌ಗೆ ಆಗಮಿಸಿದ ಮೊಹಮ್ಮದ್ ಮುಯಿಜು, ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೆ, ಭಾರತದಲ್ಲಿ ಆರಂಭವಾದ ಅಭಿಯಾನದ ಕುರಿತು ಪ್ರತಿಕ್ರಿಯಿಸಿದರು. “ಮಾಲ್ಡೀವ್ಸ್ ಚಿಕ್ಕ ರಾಷ್ಟ್ರ ಆಗಿರಬಹುದು. ಆದರೆ, ನಾವು ಸ್ವತಂತ್ರರಾಗಿದ್ದೇವೆ, ಸಾರ್ವಭೌಮತ್ವ ಹೊಂದಿದ್ದೇವೆ. ಯಾರಿಗೂ ನಾವು ನಮ್ಮನ್ನು ಹೆದರಿಸಲು ಪರವಾನಗಿ ನೀಡಿಲ್ಲ. ಅಷ್ಟಕ್ಕೂ, ನಾವು ಸಮುದ್ರ ಪ್ರದೇಶದಲ್ಲಿ ಭಾರತದ ಜತೆ ಯಾವುದೇ ಸಹಭಾಗಿತ್ವ, ಪಾಲುದಾರಿಕೆಯನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ. ಮೋದಿ ಲಕ್ಷದ್ವೀಪ ಭೇಟಿ ಕುರಿತಂತೆ ಮಾಲ್ಡೀವ್ಸ್‌ನ ಮೂವರು ಸಚಿವರು ನೀಡಿದ ಹೇಳಿಕೆಗೆ ಮಾಲ್ಡೀವ್ಸ್‌ನಲ್ಲೇ ಆಕ್ರೋಶ ವ್ಯಕ್ತವಾಗಿತ್ತು. ಮೂವರು ಸಚಿವರನ್ನು ಅಮಾನತು ಕೂಡ ಮಾಡಲಾಗಿತ್ತು. ಈಗ ಚೀನಾ ಭೇಟಿ ಬಳಿಕ ಮೊಹಮ್ಮದ್ ಮುಯಿಜು ಧಾಟಿಯೇ ಬದಲಾಗಿದೆ.
Maldives President Mohamed Muizzu on Saturday said "We may be small but this doesn't give any the right to bully us". pic.twitter.com/lnxGiULS7W
— Defence & Tech (@bojlurRaha32596) January 13, 2024
ಚೀನಾ ಪರ ಮುಯಿಜು ಹೆಚ್ಚಿನ ಒಲವು
ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಚೀನಾದಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದೆ. ಈಗ ಚೀನಾಗೆ ತೆರಳಿರುವ ಮೊಹಮ್ಮದ್ ಮುಯಿಜು, 50 ದಶಲಕ್ಷ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಾಲ, ವ್ಯಾಪಾರದ ಆಸೆ ತೋರಿಸುತ್ತಿರುವ ಚೀನಾ, ಪಾಕಿಸ್ತಾನದಂತೆ ಮಾಲ್ಡೀವ್ಸ್ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಮೊಹಮ್ಮದ್ ಮುಯಿಜು ಅವರು ಚೀನಾಗೆ ತೆರಳುವ ಕೆಲವೇ ಗಂಟೆಗಳ ಮೊದಲು ಮಾಲ್ಡೀವ್ಸ್ ಸಚಿವರು ಭಾರತದ ವಿರುದ್ಧ ಆರೋಪ ಮಾಡಿರುವುದು ಕೂಡ ಓಲೈಕೆಯ ಸಂಕೇತ ಎನ್ನಲಾಗುತ್ತಿದೆ.
ಇದನ್ನೂ ಓದಿ: ಹೆಚ್ಚಿನ ಪ್ರವಾಸಿಗರನ್ನು ದೇಶಕ್ಕೆ ಕಳುಹಿಸಿ; ಭಾರತ ಪೆಟ್ಟಿನ ಬೆನ್ನಲ್ಲೇ ಚೀನಾಗೆ ಮಾಲ್ಡೀವ್ಸ್ ಮನವಿ
ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ