ಪಟನಾ: ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು, ಮತ್ತೆ ಬಿಜೆಪಿ ಜತೆಗೂಡಿ ಬಿಹಾರದ (Bihar Politics) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ನಿತೀಶ್ ಕುಮಾರ್ (Nitish Kumar) ಅವರೀಗ ಭಾರಿ ಸುದ್ದಿಯಲ್ಲಿದ್ದಾರೆ. ಅವರು ಮತ್ತೆ ಎನ್‌ಡಿಎ ಮೈತ್ರಿಕೂಟ ಸೇರಿರುವುದರ ಕುರಿತು ಪರ-ವಿರೋಧ ಚರ್ಚೆಯಾಗುತ್ತಿವೆ. ನಿತೀಶ್ ಕುಮಾರ್ ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ, ಯಾರ ಜತೆಗೆ ಬೇಕಾದರೂ ಕೈಜೋಡಿಸುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಅವರು, “ಈ ಬಾರಿ ಬಿಜೆಪಿ ಜತೆಗಿನ ಮೈತ್ರಿ ಬಿಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪೋಸ್ಟ್ ಮಾಡಿರುವ ನಿತೀಶ್ ಕುಮಾರ್, “ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರವು ಅಸ್ತಿತ್ವಕ್ಕೆ ಬಂದಿದೆ. ರಾಜ್ಯದ ಜನರ ಸೇವೆಯನ್ನು ನಾನು ಮುಂದುವರಿಸುತ್ತೇನೆ. ನನ್ನ ಹಾಗೂ ಬಿಹಾರ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದೆ. ರಾಜ್ಯದಲ್ಲೂ ಇದೇ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕೇಂದ್ರದ ಸಹಕಾರದೊಂದಿಗೆ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವುದೇ ಗುರಿ” ಎಂದು ಹೇಳಿದ್ದಾರೆ.
#WATCH | Nitish Kumar takes oath as Bihar CM for the 9th time after he along with his party joined the BJP-led NDA bloc.#BiharPolitics pic.twitter.com/v9HPUQwhl3
— ANI (@ANI) January 28, 2024
ಇದನ್ನೂ ಓದಿ: Nitish Kumar: ನಿತೀಶ್ ಕುಮಾರ್ ಬಂಡಾಯದ ನಡುವೆ ದುರ್ವಾಸನೆ ಬೀರುತ್ತಿದೆ ಲಾಲು ಪುತ್ರಿಯ ‘ತ್ಯಾಜ್ಯ’ ಪೋಸ್ಟ್
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ಎನ್‌ಡಿಎ ಜತೆ ಕೈಜೋಡಿಸುತ್ತಿರುವುದು ಪ್ರಾಮುಖ್ಯತೆ ಪಡೆದಿದೆ. ಆರ್‌ಜೆಡಿ ಜತೆಗಿನ ಮೈತ್ರಿ ಮಾತ್ರವಲ್ಲ, ಇಂಡಿಯಾ ಒಕ್ಕೂಟದಿಂದಲೂ ನಿತೀಶ್ ಕುಮಾರ್ ಅವರು ಹೊರಬಂದಿದ್ದಾರೆ. ಈಗಾಗಲೇ ಆರ್‌ಜೆಡಿ ಸಚಿವರನ್ನು ವಜಾಗೊಳಿಸಿರುವ ನಿತೀಶ್ ಕುಮಾರ್ ಅವರು, ಬಿಜೆಪಿ ಶಾಸಕರಿಗೆ ಮಂತ್ರಿಗಿರಿ ನೀಡಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ನಿತೀಶ್ ಕುಮಾರ್, “ರಾಜ್ಯದ ಜನರ ಹಿತದೃಷ್ಟಿಯಿಂದ ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ರಾಜೀನಾಮೆ ನೀಡಿದ್ದೇನೆ. ಶಾಸಕರ ಅಭಿಪ್ರಾಯ ಪಡೆದ ಬಳಿಕವೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇಂಡಿಯಾ ಒಕ್ಕೂಟದಿಂದಲೂ ನಾನು ಹೊರಬಂದಿದ್ದೇನೆ. ಮೈತ್ರಿಯಲ್ಲಿ ಒಗ್ಗಟ್ಟು ಮೂಡದ ಕಾರಣ ಹೊರಬಂದಿದ್ದೇನೆ” ಎಂದು ತಿಳಿಸಿದ್ದರು.
ಬಿಜೆಪಿ ಜತೆ ಹೋಗೋದಕ್ಕಿಂತ ಸಾಯೋದೇ ಮೇಲು ಎಂದಿದ್ದರು
ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು, ಆಗಷ್ಟೇ ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಅವರು 2023ರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಮತ್ತೆ ಬಿಜೆಪಿ ಜತೆ ಕೈಜೋಡಿಸುತ್ತೀರಾ ಎಂಬ ಪ್ರಶ್ನೆಗೆ ಅವರು, “ನಾನು ಬಿಜೆಪಿ ಜತೆ ಹೋಗುವುದಕ್ಕಿಂತ ಸಾಯೋದೇ ಮೇಲು ಎಂದು ಭಾವಿಸಿದ್ದೇನೆ. ಬಿಜೆಪಿಯವರು ಹೇಳುವುದೆಲ್ಲ ಸುಳ್ಳು. ಅವರು ತೇಜಸ್ವಿ ಯಾದವ್ ಹಾಗೂ ಅವರ ತಂದೆ ಮೇಲೆ ಯಾವುದೇ ಕಾರಣ ಇಲ್ಲದೆ ಪ್ರಕರಣ ದಾಖಲಿಸಿದ್ದಾರೆ” ಎಂದಿದ್ದರು. ಆದರೆ, ಈಗ ನಿತೀಶ್ ಕುಮಾರ್ ಅವರು ಮತ್ತೆ ಬಿಜೆಪಿ ಜತೆ ಕೈಜೋಡಿಸಿದ ಕಾರಣ ಈ ವಿಡಿಯೊ ವೈರಲ್ ಆಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ