ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ (Citizenship Amendment Act) ಅಥವಾ ಸಿಎಎ (CAA) ಅನುಷ್ಠಾನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ (Supreme court) ಮಂಗಳವಾರ ಮಧ್ಯಾಹ್ನ ನಿರಾಕರಿಸಿದೆ. ಕಳೆದ ವಾರ ಈ ಕಾಯಿದೆ ಕುರಿತ ಅಧಿಸೂಚನೆ ಹೊರಡಿಸಲಾಗಿತ್ತು. ಕಾನೂನನ್ನು ಪ್ರಶ್ನಿಸಿದ 237 ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಏಪ್ರಿಲ್ 8ರವರೆಗೆ ನ್ಯಾಯಾಲಯವು ಸರ್ಕಾರಕ್ಕೆ ಕಾಲಾವಕಾಶವನ್ನು ನೀಡಿದೆ.
ಹೆಚ್ಚುವರಿಯಾಗಿ, ಆ ದಿನಾಂಕದ ಮೊದಲು ಯಾವುದೇ ವ್ಯಕ್ತಿಗೆ ಪೌರತ್ವವನ್ನು ನೀಡಿದರೆ ಆ ಬಗ್ಗೆ ದೂರು ನೀಡಲು ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಇಂದಿರಾ ಜೈಸಿಂಗ್ ಇಬ್ಬರೂ ಈ ಕೋರಿಕೆಯನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹಾಜರಾಗಿರುವ ಸಾಲಿಸಿಟರ್-ಜನರಲ್ ತುಷಾರ್ ಮೆಹ್ತಾ ಯಾವುದೇ ಹೇಳಿಕೆ ನೀಡಲಿಲ್ಲ.
ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ವಿಚಾರಣೆ ನಡೆಸಿದರು. ಅರ್ಜಿದಾರರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಕೇರಳ ಮೂಲದ ರಾಜಕೀಯ ಪಕ್ಷ) ಮತ್ತು ವಿರೋಧ ಪಕ್ಷದ ನಾಯಕರಾದ ಕಾಂಗ್ರೆಸ್ನ ಜೈರಾಮ್ ರಮೇಶ್ ಮತ್ತು ತೃಣಮೂಲದ ಮಹುವಾ ಮೊಯಿತ್ರಾ ಕೂಡ ಸೇರಿದ್ದಾರೆ.
ಅರ್ಜಿದಾರರು ಸಿಎಎ ಅನುಷ್ಠಾನಕ್ಕೆ ತಡೆ ಕೋರಿದ್ದರು. ಇದು ತಾರತಮ್ಯದಿಂದ ಕೂಡಿದ್ದು, ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದರು. ಕಾಯಿದೆ ಅನುಷ್ಠಾನಕ್ಕಿರುವ ಸವಾಲುಗಳನ್ನು ಅಧ್ಯಯನ ಮಾಡಲು ಹೆಚ್ಚಿನ ಕಾಲಾವಕಾಶ ನೀಡಲು ಕೋರಿದ ಸರ್ಕಾರದ ಮನವಿಯನ್ನು ವಿರೋಧಿಸುವುದಿಲ್ಲ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವನ್ನು ಒತ್ತಾಯಿಸಿದರು.
ಕೇಂದ್ರವು ಸಿಎಎ ಅಡಿಯಲ್ಲಿ ನಿಯಮಗಳನ್ನು ಹೊರಡಿಸಿದ ಒಂದು ದಿನದ ನಂತರ, ಕೇರಳ ಮೂಲದ ರಾಜಕೀಯ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಿಯಮಗಳ ಅನುಷ್ಠಾನಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಕಾನೂನನ್ನು ತಡೆಹಿಡಿಯಬೇಕು; ಈ ಕಾನೂನಿನ ಪ್ರಯೋಜನದಿಂದ ವಂಚಿತರಾಗುವ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದೆ.
IUML ಜೊತೆಗೆ, ಇತರ ಪಕ್ಷಗಳು ಮತ್ತು ವ್ಯಕ್ತಿಗಳಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI), ಅಸ್ಸಾಂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಾ, ಅಸ್ಸಾಂನ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ಮತ್ತು ಇತರರು ಸಹ ಅರ್ಜಿಗಳನ್ನು ಸಲ್ಲಿಸಿದ್ದಾರೆ.
2019ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ CAA ಅನ್ನು ಪ್ರಶ್ನಿಸಿದ ಆರಂಭಿಕ ಪಕ್ಷಗಳಲ್ಲಿ ಒಂದಾದ IUML, ನಿರ್ದಿಷ್ಟ ದೇಶಗಳಿಂದ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ನೀಡುವ ಈ ಕಾನೂನು ʼವೇಗದ ಪ್ರಕ್ರಿಯೆʼಯನ್ನು ಸ್ಥಾಪಿಸುತ್ತಿದೆ. ಇದು ಕೇವಲ ಧಾರ್ಮಿಕ ಗುರುತನ್ನು ಆಧರಿಸಿ ತಾರತಮ್ಯಪೂರಿತವಾದ ಆಡಳಿತವನ್ನು ಜಾರಿಗೊಳಿಸುತ್ತದೆ ಎಂದು ವಾದಿಸಿದೆ.
ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿದಾರರ ನಿಲುವನ್ನು ನಿರಾಕರಿಸಿದ್ದಾರೆ. “ಯಾವುದೇ ಅರ್ಜಿದಾರರಿಗೆ ಪೌರತ್ವ ನೀಡುವಿಕೆಯನ್ನು ಪ್ರಶ್ನಿಸಲು ಯಾವುದೇ ಅಧಿಕಾರವಿಲ್ಲ” ಎಂದು ಹೇಳಿದ್ದಾರೆ. ಸಿಎಎ ವಿರುದ್ಧ 237 ಅರ್ಜಿಗಳು ಬಾಕಿ ಉಳಿದಿದ್ದು, ನಿಯಮಗಳ ಅನುಷ್ಠಾನಕ್ಕೆ ತಡೆ ಕೋರಿ ನಾಲ್ಕು ಮಧ್ಯಂತರ ಅರ್ಜಿಗಳಿವೆ.
ಇದನ್ನೂ ಓದಿ: CAA: ಸಿಎಎ ವಿರೋಧಿಸಿ ಸಲ್ಲಿಸಿದ 230ಕ್ಕೂ ಅಧಿಕ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ