ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸಿದ್ದ ೩೭೦ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿದ ವಿದ್ಯಮಾನಕ್ಕೆ ಆಗಸ್ಟ್ ೫ಕ್ಕೆ ನಾಲ್ಕು ವರ್ಷ. ಇದರ ವಿರುದ್ಧ ಆಕ್ರೋಶ ಹೊರಗೆಡಹುವ ಉದ್ದೇಶದಿಂದಲೋ ಏನೋ ಎಂಬಂತೆ ಉಗ್ರರು ಗುರುವಾರ ಪುಲ್ವಾಮಾದಲ್ಲಿ ದಾಳಿ ನಡೆಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಗಡೂರಾ ಪ್ರದೇಶದಲ್ಲಿ ಗುರುವಾ ಸಂಜೆ ಉಗ್ರರು ವಲಸೆ ಕಾರ್ಮಿಕರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದು, ಒಬ್ಬ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ.
ಮೃತ ವಲಸೆ ಕಾರ್ಮಿಕನನ್ನು ಬಿಹಾರದ ಸಾಕ್ವಾ ಪರ್ಸಾ ಪ್ರದೇಶದ ನಿವಾಸಿ ಮಹಮ್ಮದ್ ಮುಮ್ತಾಜ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಬಿಹಾರದ ರಾಮ್‌ಪುರ ನಿವಾಸಿಗಳಾದ ಮೊಹಮ್ಮದ್ ಆರಿಫ್ ಮತ್ತು ಮೊಹಮ್ಮದ್ ಮಜಬೂಲ್ ಅವರನ್ನು ಪುಲ್ವಾಮಾದ ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರು ಕಾಶ್ಮೀರೇತರ ನಿವಾಸಿಗಳ ಮೇಲೆ ಗುರಿ ಇಟ್ಟು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ದುಷ್ಕರ್ಮಿಗಳು ಕೆಲವು ತಿಂಗಳ ಹಿಂದೆ ನಿರಂತರವಾಗಿ ವಲಸಿಗರ ಮೇಲೆ ದಾಳಿ ನಡೆಸುತ್ತಿದ್ದರು. ಶಿಕ್ಷಕಿ ಸೇರಿದಂತೆ ಹಲವರು ದುಷ್ಕರ್ಮಿಗಳ ಸಿಟ್ಟಿಗೆ ಬಲಿಯಾಗಿದ್ದರು.
ಈ ಘಟನೆಯನ್ನು ಶ್ರೀನಗರದ ಮಾಜಿ ಡೆಪ್ಯುಟಿ ಮೇಯರ್ ಶೇಖ್ ಇಮ್ರಾನ್ ಅವರು ಉಗ್ರವಾಗಿ ಖಂಡಿಸಿದ್ದು, ಹಿಂಸೆಯ ಹಿಂದೆ ಯಾವುದೇ ಕಾರಣವಿದ್ದರೂ ಅದನ್ನು ಸಮರ್ಥಿಸಿಕೊಳ್ಳಲಾಗದು ಎಂದಿದ್ದಾರೆ.
೨೦೧೮ರ ಆಗಸ್ಟ್ ೫ರಂದು ಪ್ರಧಾನಿ ನರೇಂದ್ರ ಮೋದಿ ಅವರು ೩೭೦ನೇ ವಿಧಿಯಡಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಿಸಿದ್ದರು. ಈ ಮೂಲಕ ಕಾಶ್ಮೀರದಲ್ಲಿ ಭಾರತದ ಉಳಿದೆಲ್ಲ ಭಾಗಗಳ ಜನರು ಸಮಾನ ಹಕ್ಕನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದರು. ಮುಸ್ಲಿಮರ ದೌರ್ಜನ್ಯದಿಂದ ಭಯಗೊಂಡು ಕಣಿವೆ ಬಿಟ್ಟು ಬಂದಿದ್ದ ಕಾಶ್ಮೀರಿ ಪಂಡಿತರಿಗೆ ಅಲ್ಲಿಗೆ ಮರಳಲು, ಉದ್ಯೋಗ ಪಡೆಯಲು ಅವಕಾಶ ನೀಡಲಾಗಿತ್ತು. ಇದರಿಂದ ಸಾವಿರಾರು ಪಂಡಿತರು ಮರಳಿ ತಮ್ಮೂರನ್ನು ಸೇರಿದ್ದರು.
ಈ ನಡುವೆ ಈ ರೀತಿ ಮರಳಿ ಬಂದ ಪಂಡಿತರ ವಿರುದ್ಧ ಕಾಶ್ಮೀರದಲ್ಲಿ ಆಕ್ರೋಶ ಹೆಚ್ಚಾಗಿದ್ದು, ಕೆಲವರ ಕೊಲೆ ಕೂಡಾ ನಡೆದಿದೆ. ಸರಕಾರ ಕಾಶ್ಮೀರಿ ಪಂಡಿತರಿಗೆ ರಕ್ಷಣೆಯ ಭರವಸೆಯನ್ನು ನೀಡಿದೆ.
ಉಗ್ರವಾದಿ ಕಾಶ್ಮೀರಿಗಳು ಈಗ ಹೊರ ರಾಜ್ಯದಿಂದ ಬಂದ ಕಾರ್ಮಿಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅದರ ಭಾಗವಾಗಿ ಪುಲ್ವಾಮಾದ ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ| ಕಾಶ್ಮೀರದ PM Package ನೌಕರರನ್ನು ಜೂ. 6ರೊಳಗೆ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲು ಆದೇಶ