ವಿಶ್ವದಾದ್ಯಂತ ಪ್ರವಾಸಿಗರನ್ನು ಸೆಳೆಯುವ, ಪ್ರಪಂಚದ ಏಳು ಅದ್ಭುತಗಳ ಪಟ್ಟಿಯಲ್ಲಿರುವ ತಾಜ್‌ಮಹಲ್ ೨೦೨೨ರಲ್ಲಿ ಭಾರತದಲ್ಲಿ ಅತೀ ಹೆಚ್ಚು ವಿದೇಶೀಯರನ್ನು ಸೆಳೆದ ತಾಣಗಳ ಪೈಕಿ ಎರಡನೇ ಸ್ಥಾನದಲ್ಲಿದೆ ಎಂದರೆ ನಂಬುತ್ತೀರಾ?
ಹೌದು ನಂಬಲೇಬೇಕು. ಭಾರತದಲ್ಲಿ ಯಾವಾಗಲೂ ಅತೀ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸೆಳೆಯುವ ತಾಣ ನಿಸ್ಸಂಶಯವಾಗಿ ತಾಜ್‌ಮಹಲ್. ಭಾರತದಕ್ಕೆ ಬಂದ ಪ್ರವಾಸಿಗರ್ಯಾರೂ ತಾಜ್‌ಮಹಲನ್ನು ನೋಡದೆ ಮರಳುವುದು ಕಡಿಮೆ. ಪ್ರತಿಯೊಬ್ಬರೂ ವಿಶ್ವದ ಏಳು ಅದ್ಭುತಗಳಲ್ಲೊಂದಾದ ತಾಜ್‌ಮಹಲನ್ನು ನೋಡಿಯೇ ತಮ್ಮ ದೇಶಗಳಿಗೆ ಮರಳುತ್ತಾರೆ. ಆದರೆ ೨೦೨೨ ಮಾತ್ರ ಇಷ್ಟರವರೆಗಿದ್ದ ಈ ದಾಖಲೆಯನ್ನು ಮುರಿದಿದೆ. ಭಾರತದಲ್ಲಿ ಅತೀ ಹೆಚ್ಚು ವಿದೇಶೀಯರನ್ನು ಆಕರ್ಷಿಸಿದ ತಾಣವಾಗಿ ಮೊದಲ ಸ್ಥಾನದಲ್ಲಿ ತಮಿಳುನಾಡಿನ ಮಹಾಬಲಿಪುರಂ ಹೊರಹೊಮ್ಮಿರುವುದು ವಿಶೇಷವಾಗಿದೆ. ತಾಜ್‌ಮಹಲ್ ಎರಡನೇ ಸ್ಥಾನಕ್ಕೆ ಇಳಿದಿದೆ.
ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದ, ೨೦೨೨ರ ಭಾರತದ ಪ್ರವಾಸಿ ಅಂಕಿಅಂಶಗಳ ಆಧಾರದ ಮೇಲೆ ಅತೀ ಹೆಚ್ಚು ವಿದೇಶೀ ಪ್ರವಾಸಿಗರನ್ನು ಕಂಡ ಭಾರತದ ಪ್ರವಾಸೀ ತಾಣ ಈ ಬಾರಿ ಚೆನ್ನೈನಿಂದ ಸುಮಾರು ೬೦ ಕಿಮೀ ದೂರದಲ್ಲಿರುವ ಮಹಾಬಲಿಪುರಂ ಆಗಿದೆ. ಇದು ತಾಜ್ ಮಹಲನ್ನು ಹಿಂದಿಕ್ಕಿದ್ದು ವಿಶೇಷ. ೨೦೨೨ರಲ್ಲಿ ಇದು ೧,೪೪,೯೮೪ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು ಮೊದಲ ಸ್ಥಾನದಲ್ಲಿದೆ. ತಾಜ್ ಮಹಲ್ ಎರಡನೇ ಸ್ಥಾನದಲ್ಲಿದ್ದು ೩೮,೯೨೨ ಪ್ರವಾಸಿಗರನ್ನು ಕಂಡಿದೆ.
ತಮಿಳುನಾಡಿನಲ್ಲಿ ಮಾಮಲ್ಲಪುರಂ ಎಂದು ಕರೆಯಲ್ಪಡುವ ಮಹಾಬಲಿಪುರಂ ಏಳನೇ ಶತಮಾನದಲ್ಲಿ ಪಲ್ಲವ ರಾಜವಂಶ ನಿರ್ಮಿಸಿದ ಐತಿಹಾಸಿಕ ಸ್ಥಳ. ಮಾಮಲ್ಲ ಎಂದರೆ, ಕುಸ್ತಿಪಟು ಎಂಬರ್ಥವಾಗಿದ್ದು, ಪಲ್ಲವ ರಾಜ ನರಸಿಂಹವರ್ಮನ್ ಕುಸ್ತಿಪಟುವೂ ಆಗಿದ್ದರಿಂದ ಇದಕ್ಕೆ ಮಾಮಲ್ಲಪುರಂ ಎಂಬ ಹೆಸರೂ ಬಂತು ಎನ್ನಲಾಗಿದೆ. ೧೯೮೪ರಲ್ಲಿ ಇದು ವಿಶ್ವಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದ್ದು, ಏಕಮಾತ್ರ ಶಿಲಾದೇವಾಲಯಗಳೂ ಇಲ್ಲಿವೆ. ಪೂರ್ವ ಕರಾವಳಿಯಲ್ಲಿರುವ ಈ ದೇವಾಲಯಗಳು ಸಮುದ್ರತೀರದಲ್ಲಿ ತನ್ನ ಅಪ್ರತಿಮ ಶಿಲ್ಪಕಲಾವೈಭವದಿಂದ ವಿದೇಶೀ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಮುಖ್ಯವಾಗಿದೆ.
ಮಹಾಬಲಿಪುರಂನಲ್ಲಿ ಕೊನೇರಿಮಂಟಪ, ಮಹಿಷಾಸುರಮರ್ಧಿನಿ ಗುಹೆ, ವರಾಹಮಂಟಪ, ಮಹಿಷಮರ್ಧಿನಿ, ಭುವಾರಹ, ಗಜಲಕ್ಷ್ಮಿ, ತ್ರಿವಿಕ್ರಮ ಹಾಗೂ ದುರ್ಗಾ ದೇವರುಗಳ ಗುಹಾಂತರ್ದೇವಾಲಯಗಳಿವೆ. ಇದಲ್ಲವೆ, ಇಲ್ಲಿ ಏಕಶಿಲಾ ದೇವಾಲಯಗಳು ಪ್ರಮುಖ ಆಕರ್ಷಣೆ. ರಥದ ಆಕಾರದಲ್ಲಿರುವ ದೇವಾಲಯಗಳು ಏಕಶಿಲೆಯಿಂದ ಕೆತ್ತಲ್ಪಟ್ಟಿದ್ದು, ಐದು ಏಕಶಿಲಾ ದೇವಾಲಯಗಳು ಇಲ್ಲಿನ ಐತಿಹಾಸಿಕ ಮಹತ್ವವನ್ನು ವಿಶ್ವಕ್ಕೇ ಸಾರುತ್ತವೆ. ಪಂಚ ಪಾಂಡವರ ಹಾಗೂ ಅವರ ಹೆಂಡತಿಯ ಹೆಸರಿನಲ್ಲಿ ಈ ದೇವಾಲಯಗಳಿದ್ದು, ದ್ರೌಪದಿ ರಥ, ಭೀಮ ರಥ, ಧರ್ಮರಾಜ ರಥ, ಅರ್ಜುನ ರಥ, ನಕುಲ ಹಾಗೂ ಸಹದೇವ ರಥ ಎಂಬ ಐದು ರಥದಂಥ ದೇವಾಲಯಗಳು ಪ್ರಮುಖವಾದವು. ಇವಿಷ್ಟೇ ಅಲ್ಲದೆ, ಬಂಡೆಕಲ್ಲ ಮೇಲೆ ಕೆತ್ತಿದ ಉಬ್ಬು ಶಿಲ್ಪಗಳು ಇಲ್ಲಿನ ಪ್ರಮುಖವಾದ ಆಕರ್ಷಣೆಗಳಲ್ಲೊಂದು.
ಇದನ್ನೂ ಓದಿ | Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು
ಇವಿಷ್ಟೇ ಅಲ್ಲದೆ, ಸಮುದ್ರ ತೀರದಲ್ಲಿರುವ ಶೋರ್ ಟೆಂಪಲ್ ಎಂದೇ ಪ್ರಖ್ಯಾತಿ ಪಡೆದ ದೇವಾಲಯ ಮಹಾಬಲಿಪುರಂನ ಮತ್ತೊಂದು ಸೆಳೆತ. ಪಲ್ಲವ ದೊರೆ ರಾಜಸಿಂಹ ಎಂಬಾತ ಕಟ್ಟಿಸಿದನೆಂದು ಹೇಳಲಾದ ಶೋರ್ ಟೆಂಪಲ್ ಪ್ರಾಚೀನ ಮುಕುಂದನಾರಾಯಣ ದೇವಸ್ಥಾನವಾಗಿದ್ದು ಅತ್ಯಂತ ಸುಂದರವಾದ ದೇವಾಲಯ.
ಮಹಾಬಲಿಪುರಂ ಎಂಬ ಸಮುದ್ರ ತೀರದ ಪುಟ್ಟ ಪಟ್ಟಣ ವಿಶ್ವವಿಖ್ಯಾತ ತಾಜ್‌ಮಹಲ್‌ನನ್ನು ಹೇಗೆ ಹಿಂದಿಕ್ಕಿ ತಾನು ಮೊದಲ ಸ್ಥಾನದಲ್ಲಿ ನಿಲ್ಲಲು ಸಾಧ್ಯವಾಯಿತು ಎಂಬುದನ್ನು ಲೆಕ್ಕಾಚಾರ ಹಾಖುವುದು ಅಥವಾ ಆ ಸತ್ಯವನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ, ಅಂಕಿ ಅಂಶಗಳು ಇವೇ ಸತ್ಯ ಎನ್ನುತ್ತಿದೆ. ವಿಶೇಷವೆಂದರೆ, ಇದು ಇಂದಿನ ಬದಲಾಗುತ್ತಿರುವ ಪ್ರವಾಸೋದ್ಯಮ ಹಾಗೂ ಪ್ರವಾಸಿಗರ ಆಯ್ಕೆ ಎಂಬುದು ವೇದ್ಯವಾಗುತ್ತದೆ, ಇಂದಿನ ಪ್ರವಾಸಿಗರು, ಮುಖ್ಯವಾಗಿ ವಿದೇಶೀಯರು ಭಾರತದಲ್ಲಿ ನಿಜವಾಗಿ ಅಡಗಿ ಕುಳಿತಿರುವ, ಹೆಚ್ಚು ಬೆಳಕಿಗೆ ಬಾರದ ಐತಿಹಾಸಿಕ ಸ್ಮಾರಕಗಳತ್ತ ಆಕರ್ಷಿತರಾಗಿ ತಾಜ್ ಮಹಲ್ ಹೊರತುಪಡಿಸಿ ಬೇರೆ ಆಯ್ಕೆಗಳತ್ತ ಹೊರಳುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ಇದನ್ನೂ ಓದಿ | Taj Mahal | ಹಾಗೇ ಉಳಿಯಲಿದೆ ತಾಜ್‌ಮಹಲ್ 22 ಕೋಣೆಗಳ ರಹಸ್ಯ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್