Site icon Vistara News

NSA Ajit Doval: ಅಜಿತ್‌ ದೋವಲ್‌ ಲಂಡನ್‌ ಭೇಟಿ: ಖಲಿಸ್ತಾನ್‌, ಬಿಬಿಸಿ, ಭಯೋತ್ಪಾದನೆ ವಿಚಾರದಿಂದಾಗಿ ಈ ಬಾರಿ ಮಾತುಕತೆ ಕಠಿಣ

Ajit Doval

ನವ ದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬ್ರಿಟನ್‌ ಭದ್ರತಾ ಸಲಹೆಗಾರರ ಜತೆ ಇಂದು ಮಾತುಕತೆ ನಡೆಸಲಿದ್ದು, ಸಿಖ್‌ ಮೂಲಭೂತವಾದ, ಮುಸ್ಲಿಂ ಮೂಲಭೂತವಾದ ಹಾಗೂ ಬಿಬಿಸಿ ಸಾಕ್ಷ್ಯಚಿತ್ರಗಳ ಬಗ್ಗೆ ದೇಶದ ಗಂಭೀರ ಕಳವಳ ವ್ಯಕ್ತಪಡಿಸಲಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಂದು ಲಂಡನ್‌ನಲ್ಲಿ ಇಂಗ್ಲೆಂಡಿನ ಭದ್ರತಾ ಸಲಹೆಗಾರ ಟಿಮ್ ಬ್ಯಾರೊ ಅವರನ್ನು ಭೇಟಿಯಾಗಲಿದ್ದಾರೆ. ಇದು ವಾರ್ಷಿಕ ಭೇಟಿಯಾಗಿದೆ. ಇಂಗ್ಲೆಂಡ್‌ನಲ್ಲಿ ಹೆಚ್ಚುತ್ತಿರುವ ಸಿಖ್ ಮೂಲಭೂತವಾದ, ಅದರೊಂದಿಗೆ ಪಾಕ್ ಮುಸ್ಲಿಮರಿಂದ ಉತ್ತೇಜಿತವಾಗಿರುವ ಭಾರತ-ವಿರೋಧಿ ಭಾವನೆಗಳ ಹೆಚ್ಚಳ ಹಾಗೂ ಅವೆರಡರ ಕಡೆಗೂ ನಿರ್ಲಕ್ಷ್ಯ ತೋರುತ್ತಿರುವ ಇಂಗ್ಲೆಂಡ್‌ನ ನಿಲುವಿನ ಬಗ್ಗೆ ಅವರು ಗಂಭೀರ ಕಳವಳ ವ್ಯಕ್ತಪಡಿಸುವ ನಿರೀಕ್ಷೆಯಿದೆ. ಜತೆಗೆ ಅವರು, ಬಿಬಿಸಿ ಸುದ್ದಿಸಂಸ್ಥೆಯು 2002ರ ಗುಜರಾತ್ ಗಲಭೆಗಳ ಬಗ್ಗೆ ಮತ್ತೆ ಕೆದಕಲು, ಪ್ರಧಾನಿ ನರೇಂದ್ರ ಮೋದಿಯವರನ್ನು ಖಳನಂತೆ ಬಿಂಬಿಸಲು ಪ್ರಯತ್ನಿಸುತ್ತಿರುವುದನ್ನು ಕೂಡ ಪ್ರಶ್ನಿಸಲಿದ್ದಾರೆ ಎಂದು ತಿಳಿದು ಬಂದಿದೆ.

ವಾಷಿಂಗ್ಟನ್‌ಗೆ ಭೇಟಿ ನೀಡಿರುವ ಅಜಿತ್‌ ದೋವಲ್‌, ಅಲ್ಲಿ ಅಮೆರಿಕದ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರೊಂದಿಗೆ ಸಕಾರಾತ್ಮಕ ಸಂವಾದ ನಡೆಸಿ ಹಿಂತಿರುಗುತ್ತಿದ್ದಾರೆ. ಈ ಮಧ್ಯೆ ಅವರು ಲಂಡನ್‌ನಲ್ಲಿ ಟಿಮ್‌ ಬ್ಯಾರಿ ಅವರನ್ನು ಭೇಟಿಯಾಗಲಿದ್ದು, ದ್ವಿಪಕ್ಷೀಯ ಸಂಬಂಧದ ಸ್ಥಿತಿ, ಉಕ್ರೇನ್ ಯುದ್ಧ ಮತ್ತು ಇಂಡೋ-ಪೆಸಿಫಿಕ್‌ನೊಂದಿಗೆ ಜಾಗತಿಕ ಕಾರ್ಯತಂತ್ರದ ಕುರಿತು ಮಾತುಕತೆ ನಡೆಸಲಿದ್ದಾರೆ. ಪಾಕ್ ಸುತ್ತಮುತ್ತ ಹೊರಹೊಮ್ಮುತ್ತಿರುವ ಭಯೋತ್ಪಾದನೆ ಮತ್ತು ಮಧ್ಯಪ್ರಾಚ್ಯದ ಒಟ್ಟಾರೆ ಪರಿಸ್ಥಿತಿಯ ಕುರಿತು ಇಬ್ಬರೂ ಟಿಪ್ಪಣಿ ವಿನಿಮಯ ಮಾಡಿಕೊಳ್ಳುವ ನಿರೀಕ್ಷೆಯಿದೆ.

ಭಾರತ ಮತ್ತು ಯುಕೆ ಈ ವರ್ಷ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಆದರೆ ಅಲ್ಲಿನ ಆಡಳಿತಗಾರರಲ್ಲಿ ಇನ್ನೂ ಇರುವ ಸಾಮ್ರಾಜ್ಯಶಾಹಿ ಮನಸ್ಥಿತಿಯೇ ಇದಕ್ಕೆ ಅಡ್ಡಿಯಾಗಿದೆ. IMF ಪ್ರಕಾರ, ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ. ಆದರೆ G-7 ಆರ್ಥಿಕತೆಗಳಲ್ಲಿ ಬ್ರಿಟನ್ ದುರ್ಬಲ ಕೊಂಡಿಯಾಗಿದೆ. ಜತೆಗೆ, ಅಲ್ಲಿನ ಪ್ರಧಾನ ಮಂತ್ರಿ ರಿಷಿ ಸುನಕ್‌ ಅವರು ಭಾರತದ ಕಡೆ ಮೃದುಭಾವ ಹೊಂದಿದ್ದರೂ, ಅಲ್ಲಿನ ಹೆಚ್ಚಿನ ಸಂಸದರು ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಭಾರತೀಯ ಉಪಖಂಡದಲ್ಲಿ ದೊಡ್ಡಣ್ಣನಂತೆ ವರ್ತಿಸಲು ಬ್ರಿಟನ್‌ ಬಯಸುತ್ತಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ವಿಚಾರಗಳಲ್ಲಿ ಅದು ಭಾರತದ ಜತೆ ಮುಖಕ್ಕೆ ಮುಖ ಕೊಟ್ಟು ನೋಡಲು ಬಯಸುತ್ತಿಲ್ಲ.

ಇದನ್ನೂ ಓದಿ: ರಷ್ಯಾ ಮತ್ತು ಉಕ್ರೇನ್‌ ಕದನ ವಿರಾಮಕ್ಕೆ ಸದ್ದಿಲ್ಲದೆ ಭಾರತದ ಪ್ರಯತ್ನ: ಮಾಸ್ಕೋದಲ್ಲಿ ದೋವಲ್‌

ಕಾಶ್ಮೀರ ಮತ್ತು ಪೌರತ್ವ ತಿದ್ದುಪಡಿ ಕಾಯಿದೆ ವಿಚಾರದಲ್ಲಿ ಭಾರತವನ್ನು ವಿರೋಧಿಸುವ ಪಾಕ್ ಇಸ್ಲಾಮಿಸ್ಟ್ ಗುಂಪುಗಳು, ಇಲ್ಲಿ ಬೇರೂರಿರುವ ಸಿಖ್ ಮೂಲಭೂತ ಗುಂಪುಗಳ ಬಗೆಗೆ ಸಾಕಷ್ಟು ಸಾಕ್ಷ್ಯ ಇದೆ. ಅವು ಭಾರತದಲ್ಲಿ ಉಂಟುಮಾಡುತ್ತಿರುವ ಭಯೋತ್ಪಾದನೆಯ ಬಗ್ಗೆ ಗುಪ್ತಚರ ಮೂಲಗಳು ಸಾಕ್ಷಿ ನೀಡಿವೆ. ಆದರೆ ಖಲಿಸ್ತಾನ್ ಭಯೋತ್ಪಾದನೆಗೆ ಪೂರೈಕೆಯಾಗುತ್ತಿರುವ ಹಣವನ್ನು ನಿಲ್ಲಿಸಲು ಬ್ರಿಟನ್‌ ಮನಸ್ಸು ಮಾಡಿಲ್ಲ. ಬ್ರಿಟನ್ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂಸಾಚಾರವನ್ನು ಸಮರ್ಥಿಸುತ್ತಿದೆ. ಭಾರತದ ವಿರುದ್ಧ ಒತ್ತಡದ ಬಿಂದುವಾಗಿ ಮೂಲಭೂತವಾದಿಗಳನ್ನು ಬಳಸುತ್ತಿದೆ ಎಂದು ಭಾರತ ಸರ್ಕಾರ ನಂಬುತ್ತಿದೆ.

ಬ್ರಿಟನ್‌ ಬಗ್ಗೆ ಮೋದಿ ಸರ್ಕಾರಕ್ಕೆ ಇರುವ ಇನ್ನೊಂದು ಅಸಮಾಧಾನ ಎಂದರೆ ನೀರವ್ ಮೋದಿ, ವಿಜಯ್ ಮಲ್ಯ, ಸಂಜಯ್ ಭಂಡಾರಿ ಮತ್ತಿತರ ಆರ್ಥಿಕ ಅಪರಾಧಿಗಳಿಗೆ ಅದು ನೀಡಿರುವ ಸುರಕ್ಷಿತ ಆಶ್ರಯ. ಭಾರತ ಮತ್ತು ಬ್ರಿಟನ್ ಹಸ್ತಾಂತರ ಒಪ್ಪಂದವನ್ನು ಹೊಂದಿದ್ದರೂ ಸಹ ಒಬ್ಬ ಆರ್ಥಿಕ ಅಪರಾಧಿಯನ್ನೂ ಭಾರತಕ್ಕೆ ಹಿಂತಿರುಗಿಸಲಾಗಿಲ್ಲ.

ಹಾಗೆಯೇ ಗುಜರಾತ್‌ ಗಲಭೆಗಳ ವಿಚಾರದಲ್ಲಿ ನರೇಂದ್ರ ಮೋದಿ ಅವರಿಗೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದ್ದರೂ, ಆ ವಿಚಾರವನ್ನು ಪುನಃ ಕೆದಕುವ ಮೂಲಕ ಭಾರತೀಯರನ್ನು ಧ್ರುವೀಕರಿಸಲು ಬಿಬಿಸಿಗೆ ಅವಕಾಶ ನೀಡಿದ್ದಕ್ಕಾಗಿಯೂ ಭಾರತ ಅಸಮಾಧಾನಗೊಂಡಿದೆ.

ಇದನ್ನೂ ಓದಿ: ಎನ್​ಎಸ್​ಎ ಅಜಿತ್​ ದೋವಲ್​ಗೆ ಭದ್ರತೆ ನೀಡುತ್ತಿದ್ದ ಮೂವರು ಕಮಾಂಡೋಗಳು ವಜಾ

Exit mobile version