Site icon Vistara News

Odisha Governor:ರಾಜಭವನದಲ್ಲೇ ಕರ್ತವ್ಯನಿರತ ಅಧಿಕಾರಿ ಮೇಲೆ ರಾಜ್ಯಪಾಲರ ಪುತ್ರನಿಂದ ಹಲ್ಲೆ

Odisha Governor

ಭುವನೇಶ್ವರಂ: ಒಡಿಶಾ ರಾಜ್ಯಪಾಲ(Odisha Governor)ರ ಪುತ್ರನ ವಿರುದ್ಧ ಗಂಭೀರವಾದ ಆರೋಪವೊಂದು ಕೇಳಿಬಂದಿದ್ದು, ರಾಜಭವನದಲ್ಲೇ ಕರ್ತವ್ಯನಿರತ ಸರ್ಕಾರಿ ನೌಕರ(Government Employee)ನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದವಾರ ಪುರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಭೇಟಿ ವೇಳೆ ಈ ಘಟನೆ ನಡೆದಿದ್ದು, ಈ ವಿಚಾರ ಇದೀಗ ರಾಜಕೀಯ ಟೀಕಾಪ್ರಹಾರಕ್ಕೆ ಕಾರಣವಾಗಿದೆ.

ಏನಿದು ಘಟನೆ?

ರಾಜ್ಯಪಾಲ ರಘುಬರ್‌ ದಾಸ್‌ ಅವರ ಪುತ್ರ ಲಲಿತ್‌ ದಾಸ್‌ ವಿರುದ್ಧ ರಾಜಭವನದಲ್ಲಿ ನಿಯೋಜನೆಗೊಂಡಿರುವ ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿ ಭೈಕುಂಠದಾಸ್‌ ಪ್ರಧಾನ್‌ ಹಲ್ಲೆ ಆರೋಪ ಮಾಡಿದ್ದಾರೆ. ಪುರಿ ಜಗನ್ನಾಥ ದೇಗುಲದಲ್ಲಿ ರಥಯಾತ್ರೆ ಪ್ರಯುಕ್ತ ಜು.7 ಮತ್ತು 8ರಂದು ರಾಷ್ಟ್ರಪತಿ ದ್ರೌಪದಿಮುರ್ಮು ಅವರು ಪುರಿಗೆ ಭೇಟಿ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಅವರು ರಾಜಭವನಕ್ಕೆ ಭೇಟಿ ನೀಡುವ ಕಾರಣ ಎಲ್ಲಾ ಸಿದ್ದತೆಗಳ ಮೇಲುಸ್ತುವಾರಿಯನ್ನು ಪ್ರಧಾನ್‌ ನೋಡಿಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಲಲಿತ್‌ ದಾಸ್‌ ಪ್ರಧಾನ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಭೈಕುಂಠದಾಸ್‌ ಪ್ರಧಾನ್‌ ರಾಜ್ಯ ಕಾರ್ಯದರ್ಶಿಯವರಿಗೆ ದೂರು ನೀಡಿದ್ದು, ಜು.7ರ ರಾತ್ರಿ ಲಲಿತ್‌ ದಾಸ್‌ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಜುಲೈ 7 ರಂದು ರಾತ್ರಿ 11.45 ರ ಸುಮಾರಿಗೆ ನಾನು ಕಚೇರಿ ಕೊಠಡಿಯಲ್ಲಿ ಕುಳಿತಿದ್ದಾಗ, ಒಡಿಶಾ ಗವರ್ನರ್ ಅವರ ವೈಯಕ್ತಿಕ ಅಡುಗೆಯವ ಆಕಾಶ್ ಸಿಂಗ್ ನನ್ನ ಕಚೇರಿಗೆ ಬಂದು ಲಲಿತ್ ಕುಮಾರ್ ಅವರನ್ನು ಸೂಟ್ ನಂ -4 ನಲ್ಲಿ ಭೇಟಿಯಾಗಲು ಬಯಸುತ್ತಾರೆ ಎಂದು ಹೇಳಿದರು. ನಾನು ಅಲ್ಲಿಗೆ ಹೋದಾಗ, ಲಲಿತ್ ಕುಮಾರ್ ಕಪಾಳ ಏಕಾಏಕಿ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದರು ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಅವರಿಂದ ತಪ್ಪಿಸಿಕೊಂಡು ನಾನು ಕೋಣೆಯಿಂದ ಓಡಿಹೋಗಲು ಪ್ರಾರಂಭಿಸಿದೆ. ಅನೆಕ್ಸ್ ಕಟ್ಟಡದ ಹಿಂದೆ ಅಡಗಿ ಕುಳಿತೆ. ಆದಾಗ್ಯೂ, ಲಲಿತ್ ಕುಮಾರ್‌ನ ಎರಡು ಪಿಎಸ್‌ಒಗಳು ನನ್ನನ್ನು ಕಂಡು ಲಿಫ್ಟ್ ಮೂಲಕ ನನ್ನನ್ನು ಕೊಠಡಿ ಸಂಖ್ಯೆ 4 ಕ್ಕೆ ಎಳೆ ತಂದವು. ಮತ್ತೆ ನನಗೆ ಅವರು ಮತ್ತೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದರು. ಅಲ್ಲದೇ ಕೆಳಕ್ಕೆ ತಳ್ಳಿ ಕಾಲಿನಿಂದ ಒದ್ದು, ಹಲ್ಲೆ ನಡೆಸಿದರು. ಈ ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಇನ್ನು ದೂರಿನ ಬಗ್ಗೆ ಲಲಿತ್‌ ಕುಮಾರ್‌ ದಾಸ್‌ ಆಗಲೀ ರಾಜ್ಯಪಾಲರ ಕಾರ್ಯದರ್ಶಿ ಸಸ್ವತ್ ಮಿಶ್ರಾ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಪಾಲರ ಸಹಾಯಕ, ಇದೊಂದು ಲಲಿತ್‌ ಕುಮಾರ್‌ ದಾಸ್‌ ವಿರುದ್ಧ ನಡೆಸಿರುವ ಪಿತೂರಿ ಎಂದಿದ್ದಾರೆ. ರಾಜಭವನದ ಅಡುಗೆಯವ ಮತ್ತು ದೂರುದಾರ ಪ್ರಧಾನ್‌ ನಡುವೆ ಇರುವ ಸಮಸ್ಯೆ. ಅವರ ಬಗ್ಗೆ ಈ ಹಿಂದೆ ಹಲವಾರು ದೂರುಗಳು ಕೇಳಿ ಬಂದಿವೆ. ಇದರಲ್ಲಿ ರಾಜ್ಯಪಾಲರ ಪುತ್ರನ ಕೈವಾಡ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ:Retail inflation: ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ದೇಶದ ಚಿಲ್ಲರೆ ಹಣದುಬ್ಬರ ಏರಿಕೆ

Exit mobile version