Site icon Vistara News

Oil production: ಕೃಷ್ಣಾ-ಗೋದಾವರಿ ಡೀಪ್ ವಾಟರ್ ಬ್ಲಾಕ್‌ನಿಂದ ತೈಲ ಉತ್ಪಾದನೆ ಶುರು!

Oil production starts from Krishna-Godavari Basin

ನವದೆಹಲಿ: ಅತಿ ಹೆಚ್ಚು ಇಂಧನ ಅನುಭೋಗಿ ರಾಷ್ಟ್ರವಾಗಿರುವ ಭಾರತದಲ್ಲಿ ಮತ್ತೊಂದು ಇಂಧನ ನಿಕ್ಷೇಪ ಕಾರ್ಯಾರಂಭ ಮಾಡಲಿದೆ. ಬಂಗಾಳ ಕೊಲ್ಲಿಯ (Bay of Bengal) ಕೃಷ್ಣಾ-ಗೋದಾವರಿ ಜಲಾನಯನ ವ್ಯಾಪ್ತಿಯಲ್ಲಿ(Krishna-Godavari Basin) ಮೊದಲ ತೈಲ ಉತ್ಪಾದನೆಗೆ ಚಾಲನೆ ನೀಡಲಾಗಿದೆ(Oil Production). ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Union Minister Hardeep Singh Puri) ಅವರು, ಬಂಗಾಳ ಕೊಲ್ಲಿಯಲ್ಲಿ ಕೃಷ್ಣ ಗೋದಾವರಿ ಡೀಪ್-ವಾಟರ್ ಬ್ಲಾಕ್ 98/2ರಿಂದ “ಮೊದಲ ತೈಲ” ಉತ್ಪಾದನೆಯನ್ನು ಆರಂಭಿಸಲಾಗಿದೆ ಎಂದು ಘೋಷಿಸಿದ್ದಾರೆ. ಕಾಕಿನಾಡ ಕರಾವಳಿಯಿಂದ (Kakinad Coastal) 30 ಕಿಲೋಮೀಟರ್ ದೂರದಲ್ಲಿರುವ ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದಲ್ಲಿ ಭಾನುವಾರ ತೈಲೋತ್ಪಾದನೆಗೆ ಚಾಲನೆ ನೀಡಲಾಗಿದೆ.

ತೈಲೋತ್ಪಾದನೆಯನ್ನು ಮೋದಿ ಸರ್ಕಾರದ “ಆತ್ಮನಿರ್ಭರ್ ಭಾರತ್” ಅಭಿಯಾನಕ್ಕೆ ಪ್ರಮುಖ ಉತ್ತೇಜನವಾಗಿದೆ. ದಿನಕ್ಕೆ 45,000 ಬ್ಯಾರೆಲ್‌ ತೈಲ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ದಿನಕ್ಕೆ 10 ಮಿಲಿಯನ್ ಕ್ಯೂಬಿಕ್ ಮೀಟರ್ ಅನಿಲವನ್ನು ಸಹ ಉತ್ಪಾದಿಸಲಾಗುತ್ತದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

“ಮೊದಲ ತೈಲ” ಉತ್ಪಾದನೆಯು ಸಂಕೀರ್ಣ ಮತ್ತು ಕಷ್ಟಕರವಾದ ಆಳವಾದ ನೀರಿನ ಕೆಜಿ-ಡಿಡಬ್ಲ್ಯೂಎನ್-98/2 ಬ್ಲಾಕ್‌ನಿಂದ ಆರಂಭಿಸಲಾಗುತ್ತಿದೆ. ಇದು ಬಂಗಾಳ ಕೊಲ್ಲಿಯ ಕರಾವಳಿಯಲ್ಲಿದೆ. ದಿನಕ್ಕೆ 45,000 ಬ್ಯಾರೆಲ್‌ಗಳು ಉತ್ಪಾದನೆಯಾಗಲಿದ್ದು, ದಿನಕ್ಕೆ 10 ಮಿಲಿಯನ್ ಕ್ಯೂಬಿಕ್ ಮೀಟರ್‌ಗಿಂತಲೂ ಹೆಚ್ಚು ಅನಿಲವನ್ನು ನಿರೀಕ್ಷಿಸಲಾಗಿದೆ ಎಂದು ಸಚಿವ ಪುರಿ ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಯೋಜನೆಯು ಪ್ರಸ್ತುತ ರಾಷ್ಟ್ರೀಯ ತೈಲ ಉತ್ಪಾದನೆಗೆ 7 ಪ್ರತಿಶತ ಮತ್ತು ರಾಷ್ಟ್ರೀಯ ನೈಸರ್ಗಿಕ ಅನಿಲ ಉತ್ಪಾದನೆಗೆ 7 ಪ್ರತಿಶತ ಸೇರಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ ಸಚಿವ ಪುರಿ ಅವರು, 2016-17ರಲ್ಲಿ ಯೋಜನೆಯ ಕೆಲಸ ಪ್ರಾರಂಭವಾಯಿತು. ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸ್ವಲ್ಪ ವಿಳಂಬವಾಯಿತು. 26 ಬಾವಿಗಳಲ್ಲಿ ನಾಲ್ಕು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಬಹಿರಂಗಪಡಿಸಿದರು. ಈ ಸಾಧನೆಯ ಕಿರು ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಕೂಡ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದೆ.

ಒಎನ್‌ಜಿಸಿ ತನ್ನ ಎಪ್‌ಪಿಎಸ್‌ಒಗೆ ಮೊದಲ ತೈಲ ಹರಿವನ್ನು ‘ಕೃಷ್ಣ ಗೋದಾವರಿ ಡೀಪ್-ವಾಟರ್ ಬ್ಲಾಕ್ 98/2 (ಬಂಗಾಳ ಕೊಲ್ಲಿಯಲ್ಲಿ) ಜನರಿ 7ರಂದು ಪಡೆದುಕೊಂಡಿತು. ಯೋಜನೆಯ ಹಂತ-2 ಪೂರ್ಣಗೊಳ್ಳುವ ಹಂತದಲ್ಲಿದೆ. ಹಂತ-3, ಗರಿಷ್ಠ ತೈಲ ಮತ್ತು ಅನಿಲ ಉತ್ಪಾದನೆಯಾಗಲಿದೆ. ಈ ಸಂಬಂಧ ಈಗಾಗಲೇ ಕೆಲಸ ನಡೆಯುತ್ತಿದೆ ಮತ್ತು 2024ರ ಜೂನ್ ತಿಂಗಳಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. 98/2 ಯೋಜನೆಯು ಒಎನ್‌ಜಿಸಿಯ ಒಟ್ಟು ತೈಲ ಮತ್ತು ಅನಿಲ ಉತ್ಪಾದನೆಯನ್ನು ಕ್ರಮವಾಗಿ ಶೇ.11 ಮತ್ತು ಶೇ.15 ರಷ್ಟು ಹೆಚ್ಚಿಸಲಿದೆ ಎಂದು ಒಎನ್‌ಜಿಸಿ ಎಕ್ಸ್ ವೇದಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಒಎನ್‌ಜಿಸಿ ಹೆಲಿಕಾಪ್ಟರ್‌ ತುರ್ತು ಜಲಸ್ಪರ್ಶ , ನಾಲ್ವರು ದುರ್ಮರಣ, ಐವರ ರಕ್ಷಣೆ

Exit mobile version