ಇತಿಹಾಸದಲ್ಲೇ ಅದು ಅಲ್ಪಾವಧಿಯ ಯುದ್ಧಗಳಲ್ಲೊಂದಾಗಿದ್ದರೂ, ಅತ್ಯಂತ ತೀಕ್ಷ್ಣವಾಗಿತ್ತು. ಭಾರತದ ವೀರ ಸೇನಾನಿಗಳು ಮತ್ತು ಯೋಧರ ಪಡೆ, ಇಂದಿಗೆ ಸರಿಯಾಗಿ 51 ವರ್ಷಗಳ ಹಿಂದೆ, ತಾಯ್ನಾಡನ್ನು ವೀರಾವೇಶದಿಂದ ಹೋರಾಡಿ ಸಂರಕ್ಷಿಸಿದ್ದಲ್ಲದೆ, ಪೂರ್ವ ಪಾಕಿಸ್ತಾನವನ್ನೇ ಪಾಕಿಸ್ತಾನದ ಹಿಡಿತದಿಂದ ವಿಮೋಚನೆಗೊಳಿಸಿದ್ದರು! ಅದು ಬಾಂಗ್ಲಾದೇಶ ಎಂಬ ಹೊಸ ದೇಶದ ಹುಟ್ಟಿಗೆ ಕಾರಣವಾಗಿದ್ದ ಸಮರವಾಗಿತ್ತು! ( Vijay Diwas | 1971 ಡಿಸೆಂಬರ್ 16 ) ಭಾರತದ ವೀರ ಕಲಿಗಳೆದುರು ಸೋತು ಸುಣ್ಣವಾಗಿದ್ದ ಪಾಕಿಸ್ತಾನದ 93,000 ಸೈನಿಕರು ಭಾರತಕ್ಕೆ ಮಂಡಿಯೂರಿ ಶರಣಾಗತರಾಗಿದ್ದರು!
ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 16 ರಂದು ವಿಜಯ ದಿವಸವನ್ನು ( Vijay Diwas) ಆಚರಿಸಲಾಗುತ್ತದೆ. 1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಭಾರತದ ಚಾರಿತ್ರಿಕ ಗೆಲುವಿನ ಸ್ಮರಣಾರ್ಥ ಇತಿಹಾಸದ ಘಟನೆಯನ್ನು ಸ್ಮರಿಸುವ ದಿನವಿದು. ವಿಜಯ ದಿವಸಕ್ಕೆ ಐತಿಹಾಸಿಕ ಮಹತ್ವ ಇದೆ. ಈ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗ ಮತ್ತು ಬಲಿದಾನವನ್ನೂ ಗೌರವಿಸುವ ದಿನವಿದು. (ವಿಸ್ತಾರ Explainer) 1971 ಡಿಸೆಂಬರ್ 4ರಿಂದ ಆರಂಭವಾದ ಯುದ್ಧವು ಡಿಸೆಂಬರ್ 16ಕ್ಕೆ ಮುಕ್ತಾಯವಾಯಿತು.
1971ರ ಭಾರತ-ಪಾಕಿಸ್ತಾನ ಯುದ್ಧಕ್ಕೆ ಕಾರಣವೇನು?
ದೇಶ ವಿಭಜನೆಯ ಬಳಿಕ ಬಂಗಾಳದ ಪೂರ್ವ ಭಾಗವು ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ಎಂದು ಕರೆಸಿಕೊಂಡು ಪಾಕಿಸ್ತಾನಕ್ಕೆ ಸೇರ್ಪಡೆಯಾಯಿತು. ಈಗಿನ ಪಾಕಿಸ್ತಾನವು ಪಶ್ಚಿಮ ಪಾಕಿಸ್ತಾನವಾಗಿತ್ತು. ಪಾಕಿಸ್ತಾನದ ಈ ಎರಡು ಪೂರ್ವ-ಪಶ್ಚಿಮ ಪ್ರದೇಶಗಳ ನಡುವೆ 1200 ಮೈಲಿಗಳ ಅಂತರದ ಭಾರತದ ಗಡಿಭಾಗವಿತ್ತು.
ಹೀಗಿದ್ದರೂ, ಪಾಕಿಸ್ತಾನವು ಪೂರ್ವ ಪಾಕಿಸ್ತಾನದ ಅಭಿವೃದ್ಧಿಯ ಬಗ್ಗೆ ಅಲಕ್ಷ್ಯ ವಹಿಸಿತ್ತು. ಭೌಗೋಳಿಕವಾಗಿ ಬಹು ದೂರದಲ್ಲಿದ್ದುದರಿಂದ ಆಳ್ವಿಕೆಯೂ ಕಷ್ಟಕರವಾಗಿತ್ತು. ಸಾಂಸ್ಕೃತಿಕ, ಭಾಷಿಕ ವ್ಯತ್ಯಾಸಗಳೂ ಭಿನ್ನಾಭಿಪ್ರಾಯ ಸೃಷ್ಟಿಸಿತ್ತು. ಕ್ರಮೇಣ ಜನರು ಹೆಚ್ಚಿನ ಸ್ವಾಯತ್ತತೆ, ಸ್ವಾತಂತ್ರ್ಯಕ್ಕಾಗಿ ಚಳುವಳಿ ಆರಂಭಿಸಿದರು.
1970ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಸ್ಥಳೀಯ ಅವಾಮಿ ಪಕ್ಷವು 162 ಸೀಟುಗಳ ಪೈಕಿ 160ರಲ್ಲಿ ಗೆದ್ದುಕೊಂಡಿತ್ತು. ಪಕ್ಷದ ನಾಯಕ ಶೇಖ್ ಮುಜಿಬುರ್ ರೆಹಮಾನ್ ಪ್ರಧಾನಿಯಾದರು. ಆದರೆ ಅವರಿಗೆ ಕಚೇರಿಯನ್ನು ನಿರಾಕರಿಸಲಾಯಿತು. ಪ್ರತಿಭಟನಾ ನಿರತ ಜನರನ್ನು ಹಿಂಸಾತ್ಮಕವಾಗಿ ಹತ್ತಿಕ್ಕಲಾಯಿತು. ( ಶೇಖ್ ಮುಜಿಬುರ್ ರೆಹಮಾನ್ ಅವರು ಈಗಿನ ಪ್ರಧಾನಿ ಶೇಖ್ ಹಸೀನಾ ಅವರ ತಂದೆ.) ಬಂಗಾಳಿ ಭಾಷಿಕರೇ ಬಹುಸಂಖ್ಯಾತರಾಗಿದ್ದ ಪೂರ್ವ ಪಾಕಿಸ್ತಾನದಲ್ಲಿ ಉರ್ದನ್ನು ಅಧಿಕೃತ ಭಾಷೆಯಾಗಿ ಹೇರಲಾಗಿತ್ತು. ಪಾಕಿಸ್ತಾನದ ಮಿಲಿಟರಿ ಸರ್ಕಾರ ಕೂಡ ಪೂರ್ವ ಪಾಕಿಸ್ತಾನಕ್ಕೆ ಹೆಚ್ಚಿನ ಗಮನ ಹರಿಸಿದ್ದಿರಲಿಲ್ಲ. ಇದು ಸಂಘರ್ಷಕ್ಕೆ ಕಾರಣವಾಯಿತು.
ಈ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಭಾರತೀಯ ಸೇನೆಯ ಕೊಡುಗೆಯನ್ನು ಬಾಂಗ್ಲಾದೇಶದ ಕವಿ ದೌಡ್ ಹೈದರ್ ಸ್ಮರಿಸಿದ್ದಾರೆ. ” 1971ರ ಮಾರ್ಚ್ 25 ರಂದು ಮಧ್ಯ ರಾತ್ರಿ ಪಾಕಿಸ್ತಾನವು ಬಾಂಗ್ಲಾದೇಶದಲ್ಲಿ ನರಮೇಧ ನಡೆಸಿತ್ತು. ನಿರಾಶ್ರಿತರು ಭಾರತಕ್ಕೆ ಪ್ರವಾಹೋಪಾದಿಯಲ್ಲಿ ಧಾವಿಸಿದ್ದರು. ಅವರಿಗೆ ಆಶ್ರಯ ನೀಡಿದ ಭಾರತ, ಸ್ವಾತಂತ್ರ್ಯ ಹೋರಾಟಕ್ಕೆ ನೆರವು ನೀಡಿತ್ತು ಎನ್ನುತ್ತಾರೆ ಅವರು.
1971ರ ಡಿಸೆಂಬರ್ 16 ರಂದು ಏನಾಯಿತು?
ಎಪ್ಪತ್ತರ ದಶಕದಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳದ ರಾಷ್ಟ್ರೀಯವಾದಿಗಳು, ಪಾಕಿಸ್ತಾನದಿಂದ ವಿಮೋಚನೆಯಾಗಲು ನಡೆಸುತ್ತಿದ್ದ ಹೋರಾಟಕ್ಕೆ ಭಾರತ ಬೆಂಬಲಿಸುತ್ತಿದೆ ಎಂದು ಪಾಕಿಸ್ತಾನ ದೂರಿತ್ತು. ಇದರಿಂದಾಗಿ ಉಭಯ ದೇಶಗಳ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ವಿವಾದ ಬಗೆಹರಿಸಲು ಅಂತಾರಾಷ್ಟ್ರೀಯ ಮಧ್ಯಪ್ರವೇಶವನ್ನು ಬಯಸಿದರು. ಆದರೆ ಕಾಶ್ಮೀರದಲ್ಲಿ ಭಾರತದ 11 ವಾಯುನೆಲೆಗಳ ಮೇಲೆ ಪಾಕಿಸ್ತಾನ ಸೇನಾಪಡೆಯು ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ, ಉಭಯ ದೇಶಗಳ ನಡುವೆ ಪರಿಸ್ಥಿತಿ ಬಿಗಡಾಯಿಸಿತು. ಪಾಕ್ ಸೇನಾಪಡೆಯು ಅಮೃತ ಸರ, ಪಠಾಣ್‌ಕೋಟ್, ಶ್ರೀನಗರ, ಅವಂತಿಪುರ, ಅಂಬಾಲಾ, ಸಿರ್ಸಾ ಮತ್ತು ಆಗ್ರಾದಲ್ಲಿ 1971ರ ಡಿಸೆಂಬರ್ 3 ರಂದು ವಾಯುಪಡೆಯ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಹೀಗಾಗಿ ಪ್ರಧಾನಿ ಇಂದಿರಾಗಾಂಧಿಯವರು ಸೇನಾ ಮುಖ್ಯಸ್ಥ ಮಾಣಿಕ್‌ಷಾ ಅವರ ಜತೆಗೆ ಸಮಾಲೋಚನೆ ನಡೆಸಿದ ಬಳಿಕ, ಪಾಕ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸಿದರು.
” ನಮಗೆ ಈಗ ಯುದ್ಧ ಬಿಟ್ಟರೆ ಬೇರೆ ಆಯ್ಕೆ ಇಲ್ಲ. ನಮ್ಮ ವೀರ ಯೋಧರು ಮತ್ತು ಸೇನಾನಿಗಳು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಈಗ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಲಾಗಿದೆ. ಯಾವುದೇ ಸಂದರ್ಭವನ್ನು ಎದುರಿಸಲು ನಾವು ಸಜ್ಜಾಗಿದ್ದೇವೆʼʼ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ರೇಡಿಯೊದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು.
ಪಾಕಿಸ್ತಾನವು ತನ್ನ ಕಾರ್ಯಾಚರಣೆಯನ್ನು ಆಪರೇಷನ್ ಚೆಂಗೀಸ್ ಖಾನ್ ಎಂದು ಕರೆದಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತವು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ ಪ್ರತಿ ದಾಳಿ ನಡೆಸಿತು. ಪಶ್ಚಿಮ ಪಾಕಿಸ್ತಾನದಲ್ಲಿ ಕರಾಚಿ ಬಂದರನ್ನು ಭಾರತೀಯ ಸೇನಾ ಪಡೆ ವಶಪಡಿಸಿಕೊಂಡಿತು. ಡಿಸೆಂಬರ್ 6ರಂದು ಭಾರತವು ಬಾಂಗ್ಲಾದೇಶವನ್ನು ಅಧಿಕೃತವಾಗಿ ಸ್ವತಂತ್ರ ದೇಶ ಎಂದು ಮಾನ್ಯತೆ ನೀಡಿತ್ತು.
ಡಿಸೆಂಬರ್ 16ಕ್ಕೆ ಯುದ್ಧ ಮುಕ್ತಾಯ
ಪೂರ್ವ ಪಾಕಿಸ್ತಾನದಲ್ಲಿ ಅಲ್ಲಿನ ರಾಷ್ಟ್ರೀಯವಾದಿಗಳು ಭಾರತದ ಸೇನಾ ಪಡೆಯ ಜತೆಗೆ ಕೈಜೋಡಿಸಿ, ಪಾಕಿಸ್ತಾನ ಪಡೆಯ ವಿರುದ್ಧ ಹೋರಾಡಿದರು. ಭಾರತದ ಸೇನೆಯು ಪಾಕಿಸ್ತಾನದ 15,010 ಕಿ.ಮೀ ಭೂ ಪ್ರದೇಶವನ್ನು ವಶಪಡಿಸಿತ್ತು. 1971ರ ಡಿಸೆಂಬರ್ 16ರಂದು ಢಾಕಾದಲ್ಲಿ ಪಾಕಿಸ್ತಾನ ಶರಣಾಗುವ ತನಕ, ಒಟ್ಟು 13 ದಿನಗಳ ಕಾಲ ಈ ಯುದ್ಧ ನಡೆಯಿತು. ಬಾಂಗ್ಲಾದೇಶ ವಿಮೋಚನಾ ಯುದ್ಧ ಎಂದೇ ಇದನ್ನು ಕರೆಯಲಾಯಿತು.
ಪಾಕಿಸ್ತಾನದ 93,000 ಸೈನಿಕರ ಶರಣಾಗತಿ!
ಪಾಕಿಸ್ತಾನ ಸೇನಾ ಪಡೆಯು ಢಾಕಾದಲ್ಲಿ 1971ರ ಡಿಸೆಂಬರ್ 16ರಂದು ಶರಣಾಗತಿಯ ಒಪ್ಪಂದಕ್ಕೆ ಸಹಿ ಹಾಕಿತು. ಪಾಕ್ ಸೇನಾ ಮುಖ್ಯಸ್ಥ ಅಮಿರ್ ಅಬ್ದುಲ್ಲಾ ಖಾನ್ ಅವರು 93,000 ಸೈನಿಕರೊಂದಿಗೆ ಶರಣಾಗಿದ್ದರು. ಎರಡನೇ ವಿಶ್ವ ಯುದ್ಧದ ಬಳಿಕ ಇದು ಅತಿ ದೊಡ್ಡ ಶರಣಾಗತಿಯಾಗಿದೆ. ಇದು ಪೂರ್ವ ಪಾಕಿಸ್ತಾನದ ಬದಲಿಗೆ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರದ ಹುಟ್ಟಿಗೆ ಕಾರಣವಾಯಿತು. ಇದರೊಂದಿಗೆ ಬಾಂಗ್ಲಾದೇಶದ ಮೇಲೆ ಪಾಕಿಸ್ತಾನದ ಹಿಡಿತ ಅಂತ್ಯವಾಯಿತು. ಅದರ ದ್ವಿರಾಷ್ಟ್ರ ಸಿದ್ಧಾಂತ ನೆಲ ಕಚ್ಚಿತು. ಈ ಯುದ್ಧದಲ್ಲಿ ಭಾರತದ 3,900 ಯೋಧರು ಹುತಾತ್ಮರಾಗಿದ್ದರು. 9,851 ಮಂದಿ ಗಾಯಗೊಂಡಿದ್ದರು.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿಸಿದವು. ಪಾಕಿಸ್ತಾನದ ಈಸ್ಟರ್ನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಕ್ ನಿಯಾಜಿ ಮತ್ತು ಭಾರತದ ಈಸ್ಟರ್ನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜಗ್ಜಿತ್ ಸಿಂಗ್ ಅರೋರಾ ಒಪ್ಪಂದಕ್ಕೆ ಸಹಿ ಹಾಕಿದ್ದರು.
1972ರಲ್ಲಿ ಮುಜಿಬುರ್ ರೆಹ್ಮಾನ್ ಅವರು ಬಾಂಗ್ಲಾದೇಶದ ಮೊದಲ ಅಧ್ಯಕ್ಷರಾದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪನೆಗೋಸ್ಕರ, ಶಿಮ್ಲಾ ಒಪ್ಪಂದಕ್ಕೆ ಭಾರತ-ಪಾಕ್ ಸಹಿ ಹಾಕಿತು. ಹಾಗೂ ಶರಣಾಗತರಾಗಿದ್ದ 93,000 ಪಾಕ್ ಸೈನಿಕರನ್ನು ಬಿಡುಗಡೆಗೊಳಿಸಲಾಯಿತು.
1971ರ ಯುದ್ಧವನ್ನು ಯುದ್ಧಗಳ ಇತಿಹಾಸದಲ್ಲಿಯೇ ಅತ್ಯಲ್ಪ ಅವಧಿಯ ಸಮರಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ಭಾರತ ವಿಜಯ ದಿವಸವನ್ನು ಈ ವರ್ಷ ಹೇಗೆ ಆಚರಿಸುತ್ತಿದೆ?
ಈ ವರ್ಷ 51ನೇ ವಿಜಯ ದಿವಸವನ್ನು ಆಚರಿಸಲಾಗುತ್ತಿದೆ. ಭಾರತವು ಕಾರ್ಗಿಲ್ ವಿಜಯ ದಿವಸವನ್ನು ಪ್ರತಿ ವರ್ಷ ಜುಲೈ 26ರಂದು ಆಚರಿಸುತ್ತಿದೆ. ಅದು 1999ರಲ್ಲು ಕಾರ್ಗಿಲ್‌ನಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಗಳಿಸಿದ ವಿಜಯದ ಸ್ಮರಣೆಗೋಸ್ಕರ ನಡೆಯುತ್ತದೆ. ಸೇನಾಪಡೆಯ ಸದರ್ನ್ ಕಮಾಂಡ್ ” ಸದರ್ನ್ ಸ್ಟಾರ್ ವಿಜಯ್ ರನ್-22 ‘ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪುಣೆ ಮತ್ತು ಇತರ 15 ನಗರಗಳ ವಲಯದಲ್ಲಿ ಸದರ್ನ್ ಕಮಾಂಡ್ ಕಾರ್ಯನಿರ್ವಹಿಸುತ್ತದೆ. ಈ ಸಲ “ಸೈನಿಕರಾಗಿ ಓಟ, ಸೈನಿಕರ ಜತೆ ಓಟʼ ಎಂಬ ಥೀಮ್‌ನೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.