Site icon Vistara News

Onion Price: ಭಾರತದಿಂದ ರಫ್ತು ನಿಷೇಧ; ನೆರೆಹೊರೆಯ ದೇಶಗಳಲ್ಲಿ ಈರುಳ್ಳಿ ಸಿಗದೆ ಕಣ್ಣೀರು!

Bangalore Rose Onion

ಹೊಸದಿಲ್ಲಿ: ಏಷ್ಯಾದ ಪ್ರಮುಖ ಅಡಿಗೆ ಪದಾರ್ಥವಾದ ಈರುಳ್ಳಿಯ ರಫ್ತನ್ನು (Onion export ban) ಭಾರತ ಶುಕ್ರವಾರದಿಂದ (ಡಿಸೆಂಬರ್ 8) ನಿಷೇಧಿಸಿರುವುದರಿಂದ, ಭಾರತದ ನೆರೆಯ ದೇಶಗಳಲ್ಲಿ ಈರುಳ್ಳಿ ಬೆಲೆ (Onion Price) ಗಗನಕ್ಕೇರಿದೆ.

ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ಮಾರುಕಟ್ಟೆಗಳಲ್ಲಿ ತೀವ್ರ ಬೆಲೆ ಏರಿಕೆ ಉಂಟಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಹೇಳಿದೆ. 2024ರ ಮಾರ್ಚ್ 31ರವರೆಗೆ ರಫ್ತು ನಿಷೇಧ ಹಾಕಲಾಗಿದೆ. ಭಾರತವು ಈ ವರ್ಷ ಅಕ್ಟೋಬರ್ 28ರಂದು ಈರುಳ್ಳಿ ರಫ್ತಿನ ಮೇಲೆ ಪ್ರತಿ ಟನ್‌ಗೆ $800 (66,707 ರೂ.) ಕನಿಷ್ಠ ರಫ್ತು ದರವನ್ನು ಪರಿಚಯಿಸಿತ್ತು.

ಬಾಂಗ್ಲಾದೇಶದಲ್ಲಿ ಈರುಳ್ಳಿ ಬೆಲೆ ಗಮನಾರ್ಹ ಏರಿಕೆಯನ್ನು ಅನುಭವಿಸಿದ್ದು, ಪ್ರತಿ ಕಿಲೋಗ್ರಾಂಗೆ 200 ಟಕಾ (151 ರೂ.)ತಲುಪಿತು. ಒಂದೇ ದಿನದಲ್ಲಿ 130ರಿಂದ 200ಕ್ಕೆ ಏರಿಕೆಯಾಗಿದೆ. ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ಮಾರ್ಚ್ ವರೆಗೆ ವಿಸ್ತರಿಸುವ ಭಾರತದ ನಿರ್ಧಾರ ಈ ಉಲ್ಬಣಕ್ಕೆ ಕಾರಣವಾಗಿದೆ. ಒಂದು ವಾರದ ಹಿಂದೆ ಪ್ರತಿ ಕಿಲೋಗ್ರಾಂಗೆ 105 ಟಕಾ ಇತ್ತು. ರಫ್ತು ನಿಷೇಧದ ಜತೆಗೆ ಮಿಚಾಂಗ್ ಚಂಡಮಾರುತದಿಂದಾಗಿ ದೇಶೀಯ ಪೂರೈಕೆಯಲ್ಲಿನ ಬಿಕ್ಕಟ್ಟೇ ಬೆಲೆ ಏರಿಕೆಗೆ ಕಾರಣವೆಂದು ವರ್ತಕರು ತರ್ಕಿಸಿದ್ದಾರೆ.

ಭೂತಾನ್‌ನಲ್ಲಿ ಈರುಳ್ಳಿ ರಫ್ತಿನ ಮೇಲೆ ಭಾರತದ ನಿಷೇಧದ ನಂತರ ಈರುಳ್ಳಿ ಬೆಲೆ ಏರಿದೆ. ಬೆಲೆಗಳು ಪ್ರತಿ ಕಿಲೋಗ್ರಾಮ್‌ಗೆ Nu (Bhutanese Ngultrum) 150 (ಸುಮಾರು 150 ರೂ.) ತಲುಪಿದವು. ಈ ಹಿಂದೆ ಪ್ರತಿ ಕಿಲೋಗ್ರಾಂಗೆ 50-70 ದರದಲ್ಲಿ ತರಕಾರಿ ಮಾರಾಟವಾಗುತ್ತಿತ್ತು ಎಂದು ದೇಶದ ರಾಜಧಾನಿ ಥಿಂಪು ನಿವಾಸಿಗಳು ಹೇಳಿದ್ದಾರೆ. ಭಾರತದ ಘೋಷಣೆಯ ನಂತರ ಬೆಲೆಯು ಪ್ರತಿ ಕಿಲೋಗ್ರಾಂಗೆ Nu 70-80ರಿಂದ Nu 100ಕ್ಕೆ ಏರಿದೆ ಎಂದು ಭೂತಾನ್ ಬ್ರಾಡ್‌ಕಾಸ್ಟಿಂಗ್ ಸೇವೆ (BBS) ವರದಿ ತಿಳಿಸಿದೆ. ಭಾರತೀಯ ಅಧಿಕಾರಿಗಳು ಶುಕ್ರವಾರ ಭೂತಾನ್‌ಗೆ ಹೋಗುವ ಮಾರ್ಗದಲ್ಲಿ ಎಂಟು ಟ್ರಕ್‌ ಈರುಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನೇಪಾಳ ದೇಶ ಈರುಳ್ಳಿಗಾಗಿ ಭಾರತವನ್ನು ಸಂಪೂರ್ಣವಾಗಿ ಅವಲಂಬಿಸಿದೆ. ಭಾರತದ ನಿಷೇಧದ ಹಿನ್ನೆಲೆಯಲ್ಲಿ ಬೆಲೆಯೇರಿಕೆ ಒತ್ತಡವನ್ನು ಎದುರಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ, ನೇಪಾಳವು ಭಾರತದಿಂದ 6.75 ಬಿಲಿಯನ್ ಮೌಲ್ಯದ ಸುಮಾರು 190 ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ. ಭಾರತದ ಇತ್ತೀಚಿನ ರಫ್ತು ನಿರ್ಬಂಧಗಳನ್ನು ಅನುಸರಿಸಿ, ದೇಶದಲ್ಲಿ ಈರುಳ್ಳಿ ಬೆಲೆಗಳು ಏರಿದೆ. ಚಿಲ್ಲರೆ ವ್ಯಾಪಾರದಲ್ಲಿ ಪ್ರತಿ ಕಿಲೋಗ್ರಾಂಗೆ ಸುಮಾರು 200 ರೂ.ಗೆ ದ್ವಿಗುಣಗೊಂಡಿದೆ. ನೇಪಾಳವು ಆಮದು ಮಾಡಿಕೊಂಡ ಈರುಳ್ಳಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ವ್ಯಾಪಾರಿಗಳು ಮತ್ತಷ್ಟು ಹೆಚ್ಚಳವನ್ನು ನಿರೀಕ್ಷಿಸುತ್ತಾರೆ.

ಮಾಲ್ಡೀವ್ಸ್ ಆರ್ಥಿಕ ಸಚಿವ ಮೊಹಮ್ಮದ್ ಸಯೀದ್ ಅವರು ಭಾರತದ ರಫ್ತು ನಿರ್ಬಂಧದಿಂದ ದೇಶವು ಅಗತ್ಯ ವಸ್ತುಗಳ ಆಮದು ಮಾಡಿಕೊಳ್ಳುವಲ್ಲಿ ಅಡ್ಡಿಯಾಗುವುದಿಲ್ಲ ಎಂದಿದ್ದಾರೆ. ನೇಪಾಳದಂತೆ ಮಾಲ್ಡೀವ್ಸ್ ಕೂಡ ಭಾರತದಿಂದ ಈರುಳ್ಳಿ ರಫ್ತಿನ ಮೇಲೆ ಅವಲಂಬಿತವಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯಿಂದ ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ. ಈ ಹಿಂದೆ ಪ್ರತಿ ಗೋಣಿಚೀಲಕ್ಕೆ MVR (Maldivian Rufiyaa) 200-MVR 350ರ ನಡುವೆ ಬೆಲೆಯಿತ್ತು. ಈಗ ಕೆಲವು ಸ್ಥಳಗಳಲ್ಲಿ MVR 500ಕ್ಕೆ (ಸುಮಾರು 2500 ರೂ.) ಮಾರಾಟ ಮಾಡಲಾಗುತ್ತಿದೆ.

ಶ್ರೀಲಂಕಾದ ಸ್ಥಳೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಿಲೋಗೆ ಸುಮಾರು 300 ರೂ.ಗೆ ಏರಿಕೆಯಾಗಿದೆ ಎಂದು ಡೈಲಿ ಮಿರರ್ ವರದಿ ಮಾಡಿದೆ. ಆಮದುದಾರರು ಪರ್ಯಾಯ ಪೂರೈಕೆದಾರರನ್ನು ಅನ್ವೇಷಿಸುತ್ತಿದ್ದಾರೆ ಎಂದು ಶ್ರೀಲಂಕಾದ ಅಗತ್ಯ ಆಹಾರ ಸರಕುಗಳ ಆಮದುದಾರರು ಮತ್ತು ವ್ಯಾಪಾರಿಗಳ ಸಂಘದ ವಕ್ತಾರರು ಡೈಲಿ ಮಿರರ್‌ಗೆ ತಿಳಿಸಿದರು.

ಇದನ್ನೂ ಓದಿ: Onion Price: ಬೆಲೆ ಏರಿದ ಈರುಳ್ಳಿ ಕೈಬಿಟ್ಟು ಅಡುಗೆ ಮಾಡಲು ಇಲ್ಲಿವೆ ಸ್ಮಾರ್ಟ್‌ ಉಪಾಯಗಳು!

Exit mobile version