ಮುಂಬೈ: ಜೂಜು, ಇಸ್ಪೀಟ್ ಆಡಿ ಮನೆ-ಮಠ ಕಳೆದುಕೊಂಡವರಿದ್ದಾರೆ. ಈಗ ಜೂಜು, ಇಸ್ಪೀಟ್‌ನಂತೆಯೇ ಆನ್‌ಲೈನ್ ಗ್ಯಾಂಬ್ಲಿಂಗ್ (ಆನ್‌ಲೈನ್ ಜೂಜು) ಕೂಡ ಜನರನ್ನು ಬೀದಿಗೆ ತರುತ್ತಿದೆ. ಆನ್‌ಲೈನ್ ಜೂಜಾಟದ ಬಲೆಗೆ ಸಿಲುಕದಿರಿ ಎಂದು ಎಷ್ಟು ಜಾಗೃತಿ ಮೂಡಿಸಿದರೂ ಜೂಜಾಟಕ್ಕೆ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದಲ್ಲಿ (Maharashtra) ಉದ್ಯಮಿಯೊಬ್ಬರು ಆನ್‌ಲೈನ್ ಜೂಜಾಡಿ (Online Gambling) 58 ಕೋಟಿ ರೂ. ಕಳೆದುಕೊಂಡಿದ್ದಾರೆ.
ಹೌದು, ನಾಗ್ಪುರದ ಉದ್ಯಮಿಯೊಬ್ಬರು ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂಬ ಬುಕ್ಕಿ ಜತೆ ಸಂಪರ್ಕ ಸಾಧಿಸಿದ್ದು, ಬುಕ್ಕಿ ಜತೆ ಆನ್‌ಲೈನ್ ಜೂಜಾಡಿದ್ದಾರೆ. ಮೊದಲ ಬಾರಿಗೆ ಜೂಜಾಟದಲ್ಲಿ ಗೆದ್ದ ಉದ್ಯಮಿಯ ಖಾತೆಗೆ ಜೈನ್ 8 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಇನ್ನೂ ಆಸೆಗೆ ಬಿದ್ದು ಜೂಜಾಡಿದ ಉದ್ಯಮಿಯು 5 ಕೋಟಿ ರೂ. ಗೆದ್ದಿದ್ದಾರೆ. ಮತ್ತೆ, ದುರಾಸೆಗೆ ಬಿದ್ದ ಉದ್ಯಮಿಯು ಜೂಜಾಡಿ 58 ಕೋಟಿ ರೂ. ಕಳೆದುಕೊಂಡಿದ್ದಾರೆ.
17 ಕೋಟಿ ರೂ. ವಶ
ಸೊಂತು ನವರತನ್ ಜೈನ್ ಜತೆ ಆನ್‌ಲೈನ್ ಜೂಜಾಡಿ 58 ಕೋಟಿ ರೂ. ಕಳೆದುಕೊಂಡ ಬಳಿಕ ಉದ್ಯಮಿಗೆ ಅರಿವಾಗಿದೆ. ತಮಗೆ ನವರತನ್ ಜೈನ್ ಮೋಸ ಮಾಡಿದ್ದಾನೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಪೊಲೀಸರು ಬುಕ್ಕಿಯ ಮನೆಗೆ ದಾಳಿ ನಡೆಸಿದ್ದಾರೆ. ನವರತನ್ ಜೈನ್ ಮನೆಯಲ್ಲಿ 17 ಕೋಟಿ ರೂ. ನಗದು ಹಾಗೂ 14 ಕೆ.ಜಿ ಚಿನ್ನ ಪತ್ತೆಯಾಗಿದೆ. ದಾಳಿಯ ಸುಳಿವು ಸಿಕ್ಕ ಕೂಡಲೇ ನವರತನ್ ಜೈನ್ ಪರಾರಿಯಾಗಿದ್ದು, ಅತ ದುಬೈಗೆ ಪಲಾಯನಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Vivek Oberoi: ನಟ ವಿವೇಕ್ ಒಬೆರಾಯ್‌ಗೆ ಕೋಟ್ಯಂತರ ರೂ. ವಂಚನೆ; ಮೂವರ ವಿರುದ್ಧ ಕೇಸ್!
ಆನ್‌ಲೈನ್ ಗ್ಯಾಂಬ್ಲಿಂಗ್‌ನಲ್ಲಿ ತೊಡಗಿದವರ ಜತೆ ಸ್ನೇಹ ಸಂಪಾದಿಸಿ, ಅವರಿಗೆ ಮೊದಲು ಲಾಭ ಬರುವಂತೆ ಮಾಡಿ, ನಂತರ ಕೋಟ್ಯಂತರ ರೂ. ವಂಚಿಸುವುದು ನವರತನ್ ಜೈನ್‌ಗೆ ಕರಗತವಾಗಿತ್ತು ಎಂದು ತಿಳಿದುಬಂದಿದೆ. “ಆರಂಭದಲ್ಲಿ ಹಣ ಗೆದ್ದ ಉದ್ಯಮಿಗೆ ಹವಾಲ ಮರ್ಚಂಟ್ ಮೂಲಕ ಹಣ ವರ್ಗಾಯಿಸಲಾಗಿದೆ. ಬಳಿಕ ಉದ್ಯಮಿಗೆ ಮೋಸ ಮಾಡಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ, ಆನ್‌ಲೈನ್ ಜೂಜಿನ ಜಾಲಕ್ಕೆ ಜನ ಸಿಲುಕಬಾರದು ಎಂದು ಎಚ್ಚರಿಸಿದ್ದಾರೆ.