Site icon Vistara News

Operation Ajay: ಇಸ್ರೇಲ್‌ನಿಂದ ಎರಡನೇ ವಿಮಾನ ಆಗಮನ, 235 ಭಾರತೀಯರು ತಾಯ್ನಾಡಿಗೆ

Operation Ajay

ಹೊಸದಿಲ್ಲಿ: ಯುದ್ಧದ ನಡುವೆ ಇಸ್ರೇಲ್‌ನಲ್ಲಿ (israel palestine war) ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ವದೇಶಕ್ಕೆ ಕರೆತರುವ ಆಪರೇಷನ್ ಅಜಯ್ (Operation Ajay) ಮುಂದುವರಿದಿದ್ದು, ಎರಡನೇ ಚಾರ್ಟರ್ ವಿಮಾನ ಶನಿವಾರ ಬೆಳಿಗ್ಗೆ ಟೆಲ್ ಅವಿವ್‌ನಿಂದ ನವದೆಹಲಿಗೆ ಬಂದಿಳಿಯಿತು. ಎರಡನೇ ವಿಮಾನದಲ್ಲಿ ಎರಡು ಶಿಶುಗಳು ಸೇರಿದಂತೆ ಒಟ್ಟು 235 ಭಾರತೀಯರು ಆಗಮಿಸಿದ್ದಾರೆ. ಈ ವಿಮಾನದಲ್ಲಿ 9 ಮಂದಿ ಕನ್ನಡಿಗರು ಸಹ ಆಗಮಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು Xನಲ್ಲಿ ಈ ಪ್ರಯಾಣಿಕರ ಚಿತ್ರಗಳನ್ನು ಹಂಚಿಕೊಂಡರು. “#OperationAjay Flight #2 235 ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುವ ವಿಮಾನ ಟೆಲ್ ಅವೀವ್‌ನಿಂದ ಟೇಕ್ ಆಫ್ ಆಗುತ್ತಿದೆ.” ಎಂದು ಟ್ವೀಟ್‌ ಮಾಡಿದರು.

‘ಆಪರೇಷನ್ ಅಜಯ್’ ಅಡಿಯಲ್ಲಿ ಮೊದಲ ವಿಮಾನದ ಮೂಲಕ 212 ಭಾರತೀಯರು ಶುಕ್ರವಾರ ಇಸ್ರೇಲ್‌ನಿಂದ ಭಾರತ ತಲುಪಿಕೊಂಡಿದ್ದರು. ಮೊದಲ ವಿಮಾನ ಗುರುವಾರ ಸಂಜೆ ಇಸ್ರೇಲ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟು ಶುಕ್ರವಾರ ಬೆಳಿಗ್ಗೆ ನವದೆಹಲಿ ತಲುಪಿತು. ಪ್ರಯಾಣಿಕರನ್ನು ʻಮೊದಲು ಬಂದವರಿಗೆ ಮೊದಲು ಸೇವೆ’ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಸರ್ಕಾರ ಅಕ್ಟೋಬರ್ 11ರಂದು ‘ಆಪರೇಷನ್ ಅಜಯ್’ ಪ್ರಾರಂಭಿಸಿತು. ಅಕ್ಟೋಬರ್ 7ರಂದು ಯುದ್ಧ ಪ್ರಾರಂಭವಾದಾಗ ಏರ್ ಇಂಡಿಯಾ ಮತ್ತು ಇತರ ಏರ್‌ಲೈನ್ಸ್‌ಗಳು ಇಸ್ರೇಲ್‌ಗೆ ತಮ್ಮ ಎಲ್ಲಾ ವಾಣಿಜ್ಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದವು. ಈ ಕಾರ್ಯಾಚರಣೆಯ ಅಡಿಯಲ್ಲಿ ವಿಶೇಷ ಚಾರ್ಟರ್ಡ್ ವಿಮಾನಗಳು ಭಾರತೀಯರನ್ನು ಮರಳಿ ಕರೆತರುತ್ತವೆ. ಅಗತ್ಯವಿದ್ದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳನ್ನು ಸಹ ನಿಯೋಜಿಸಲಾಗುವುದು.

ವಿದೇಶಾಂಗ ಸಚಿವಾಲಯ ಇದಕ್ಕಾಗಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ನಿಯಂತ್ರಣ ಕೊಠಡಿಯ ಫೋನ್ ಸಂಖ್ಯೆಗಳು: 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988, ಇಮೇಲ್ ಐಡಿ situationroom@mea.gov.in. ಭಾರತೀಯ ರಾಯಭಾರಿ ಕಚೇರಿಯ 24 ಗಂಟೆಗಳ ತುರ್ತು ಸಹಾಯವಾಣಿಯನ್ನು ಸಹ ಸಂಪರ್ಕಿಸಬಹುದು: +972-35226748 ಮತ್ತು +972-543278392, ಮತ್ತು ಇಮೇಲ್ ಐಡಿ cons1.telaviv@mea.gov.in.

ಇದನ್ನೂ ಓದಿ: Operation Ajay: ಇಸ್ರೇಲಿನಿಂದ ಬಂದಿಳಿದ ಮೊದಲ ವಿಮಾನ, ಐವರು ಕನ್ನಡಿಗರು ತಾಯ್ನಾಡಿಗೆ

Exit mobile version