ಮುಂಬೈ: ದೇಶದಲ್ಲಿ ಇತ್ತೀಚೆಗೆ ಪ್ರಮುಖ ನಗರಗಳಲ್ಲಿ ಬಾಂಬ್ ದಾಳಿಗಳ ಬೆದರಿಕೆಗಳು (Bomb Threat) ಜಾಸ್ತಿಯಾಗಿವೆ. ಬೆಂಗಳೂರಿನ ಶಾಲೆಗಳು ಸೇರಿ ಮುಂಬೈ, ದೆಹಲಿ ಏರ್‌ಪೋರ್ಟ್‌ಗಳು (Airports), ಸರ್ಕಾರದ ಕಟ್ಟಡಗಳಿಗೆ ಹುಸಿ ಬೆದರಿಕೆ ಕರೆಗಳು, ಇ-ಮೇಲ್‌ಗಳು ರವಾನೆಯಾಗುತ್ತಲೇ ಇವೆ. ಇದರ ಬೆನ್ನಲ್ಲೇ, ಮಂಗಳವಾರ (ಜೂನ್ 18) ಮುಂಬೈನಲ್ಲಿರುವ 50ಕ್ಕೂ ಅಧಿಕ ಆಸ್ಪತ್ರೆಗಳನ್ನು (Mumbai Hospitals) ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಹಾಗಾಗಿ, ಪೊಲೀಸರು ಆಸ್ಪತ್ರೆಗಳ ಸುತ್ತ ಕಟ್ಟೆಚ್ಚರ ವಹಿಸಿದ್ದಾರೆ.
ಮಂಗಳವಾರವೇ ದೇಶದ 41 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂಬುದಾಗಿ ಹುಸಿ ಬಾಂಬ್ ಬೆದರಿಕೆ ಹಾಕಲಾಗಿತ್ತು. ಆಗಲೂ ಭದ್ರತಾ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯ ಪರಿಶೀಲನೆ ನಡೆಸಿದ್ದರು. ಇದಾದ ಕೆಲವೇ ಗಂಟೆಯಲ್ಲಿ ಮುಂಬೈನ ಆಸ್ಪತ್ರೆಗಳಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ. ಬಾಂಬ್ ಬೆದರಿಕೆಯ ಕುರಿತು ಪೊಲೀಸರೇ ಮಾಹಿತಿ ನೀಡಿದ್ದಾರೆ. ವಿಪಿಎನ್ ನೆಟ್‌ವರ್ಕ್ ಬಳಸಿ ಬಾಂಬ್ ದಾಳಿಯ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
Over 50 Mumbai Hospitals Receive Bomb Threats Via VPN After Hoax Emails To 41 Airports
— Nanik Dasani (@n12dasani) June 18, 2024
Earlier today, forty-one airports across India received bomb threat emails, prompting extensive anti-sabotage checks by security agencies. pic.twitter.com/BHOGCPfAGN
ಮುಂಬೈನಲ್ಲಿರುವ ಪ್ರತಿಷ್ಠಿತ ಜಸ್ಲೋಕ್ ಹಾಸ್ಪಿಟಲ್, ರಹೇಜಾ ಹಾಸ್ಪಿಟಲ್, ಸೆವೆನ್ ಹಿಲ್ಸ್, ಕೊಹಿನೂರ್, ಕೆಇಎಂ, ಜೆಜೆ ಹಾಸ್ಪಿಟಲ್, ಸೇಂಟ್ ಜಾರ್ಜ್ ಹಾಸ್ಪಿಟಲ್ ಸೇರಿ ಹಲವು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ಮಾಡಲಾಗುವುದು ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಇ-ಮೇಲ್ ಮೂಲಕ ಬೆದರಿಕೆ ಒಡ್ಡುತ್ತಲೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯು ಆಸ್ಪತ್ರೆಗಳಿಗೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ, ದೇಶದ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗೆ ಬೆದರಿಕೆಯ ಮೇಲ್ ಬಂದಿತ್ತು. ಬೆಂಗಳೂರು, ದೆಹಲಿ, ಅಹಮದಾಬಾದ್, ಚೆನ್ನೈ ಸೇರಿ ಹಲವು ನಗರಗಳ ಶಾಲೆಗಳನ್ನೂ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿದ್ದವು. ಬಳಿಕ ನಕಲಿ ಬಾಂಬ್ ಬೆದರಿಕೆ ಎಂಬುದಾಗಿ ತಿಳಿದುಬಂದಿತ್ತು. ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಾಗಲಂತೂ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದಾದ ಬಳಿಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವಂತಾಗಿತ್ತು.
ಇದನ್ನೂ ಓದಿ: Kannur Bomb Blast: ಕೇರಳದಲ್ಲಿ ಬಾಂಬ್ ಸ್ಫೋಟಕ್ಕೆ ವೃದ್ಧ ಬಲಿ; ಕಣ್ಣೂರು ಆಗುತ್ತಿದೆಯೇ ಬಾಂಬ್ ಕಾರ್ಖಾನೆ?