Site icon Vistara News

ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೊ ಗೋವಾ ಭೇಟಿ: 600 ಭಾರತೀಯ ಮೀನುಗಾರರಿಗೆ ಸಿಕ್ತು ಗುಡ್​ನ್ಯೂಸ್​!

Pakistan decides to release 600 Indian fishermen After Bilawal Bhutto Visit Goa

#image_title

ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್​ ಭುಟ್ಟೊ ಜರ್ದಾರಿ (Bilawal Bhutto Zardari) ಅವರು ಭಾರತಕ್ಕೆ ಕಾಲಿಟ್ಟು, ಗೋವಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಸಭೆಯಲ್ಲಿ ಪಾಲ್ಗೊಂಡ ಬಳಿಕ ಪಾಕಿಸ್ತಾನ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಯಾವುದೇ ರಾಜಕಾರಣಿಗಳು ಕಾಲಿಡುತ್ತಲೂ ಇಲ್ಲ. ಹೀಗಿರುವಾಗ 12ವರ್ಷಗಳ ನಂತರ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರೊಬ್ಬರು ಭಾರತಕ್ಕೆ ಬಂದಿದ್ದರು. ಈ ಸೌಹಾರ್ದಯುತ ಭೇಟಿಯ ಹಿನ್ನೆಲೆಯಲ್ಲಿ, ಪಾಕಿಸ್ತಾನದಲ್ಲಿ ಬಂಧಿತರಾಗಿರುವ 600 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಆ ದೇಶ ನಿರ್ಧಾರ ಮಾಡಿದೆ.

ಕರಾವಳಿ ತೀರದಲ್ಲಿ ಭಾರತ-ಪಾಕ್​ ಗಡಿ ದಾಟಿ ಹೋಗಿದ್ದ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಬಂಧಿಸಿಟ್ಟುಕೊಂಡಿದೆ. ಹೀಗೆ ಹೋಗಿ ಅಲ್ಲಿ ಸೇರಿದವರು 700ಕ್ಕೂ ಹೆಚ್ಚು ಜನರಿದ್ದು, ಅವರಲ್ಲಿ 600 ಮೀನುಗಾರರನ್ನು ಇದೇ ತಿಂಗಳಲ್ಲೇ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಈಗ ಹೇಳಿದೆ. ಮೇ 12ರಂದು ಮೊದಲ ಬ್ಯಾಚ್​ನಲ್ಲಿ 200 ಮೀನುಗಾರರನ್ನು ಬಿಟ್ಟುಕಳಿಸಲು ಮತ್ತು ಮೇ 14ರಂದು ಎರಡನೇ ಬ್ಯಾಚ್​​ನಲ್ಲಿ 400 ಮೀನುಗಾರರನ್ನು ಬಿಡುಗಡೆ ಮಾಡಲು ಪಾಕ್​ ನಿರ್ಧಾರ ಮಾಡಿದೆ. ಭಾರತ-ಪಾಕಿಸ್ತಾನದ ಎಲ್ಲ ಗಡಿಗಳಲ್ಲೂ ಶತ್ರುತ್ವ, ಸಂಘರ್ಷವೇ ತುಂಬಿ ಹೋಗಿದೆ. ಹೀಗಿರುವಾಗ ಈಗ ಪಾಕಿಸ್ತಾನ 600 ಭಾರತೀಯ ಮೀನುಗಾರರನ್ನು ಬಿಟ್ಟು ಕಳಿಸಲು ಮುಂದಾಗಿದ್ದು ವಿಶೇಷ ಹೆಜ್ಜೆ ಎನ್ನಿಸಿದೆ.

ಇದನ್ನೂ ಓದಿ: SCO Meeting: ಪಾಕಿಸ್ತಾನ ಸಚಿವನಿಗೆ ಕೈ ಕುಲುಕದ ಭಾರತದ ವಿದೇಶಾಂಗ ಇಲಾಖೆ ಸಚಿವ; ಭಯೋತ್ಪಾದನೆ ವಿರುದ್ಧ ಕಟು ಮಾತು

ಹೀಗೆ ಗಡಿದಾಟಿ ಹೋಗಿ/ಬರುವ ಸೆರೆ ಸಿಗುವ ಕೈದಿಗಳ ಬಿಡುಗಡೆ, ಅವರ ಶಿಕ್ಷೆಯ ಅವಧಿಗೆ ಸಂಬಂಧಪಟ್ಟಂತೆ ಭಾರತದಲ್ಲಾಗಲೀ, ಪಾಕಿಸ್ತಾನದಲ್ಲಾಗಲೀ ಯಾವುದೇ ನಿರ್ದಿಷ್ಟ ಚೌಕಟ್ಟು, ನಿಯಮಗಳು ಇಲ್ಲ. ಹೀಗಾಗಿ ಅದೆಷ್ಟೋ ಕೈದಿಗಳು ಸೆರೆ ಸಿಕ್ಕು, ಜೈಲಿನಲ್ಲಿಯೇ ಇರುತ್ತಾರೆ. ಸದ್ಯ ಪಾಕಿಸ್ತಾನ ಜೈಲಿನಲ್ಲಿ ಭಾರತದ 705 ಜನರಿದ್ದಾರೆ. ಅದರಲ್ಲಿ 654 ಮಂದಿ ಮೀನುಗಾರರು. ಇನ್ನು ಭಾರತದ ಜೈಲಿನಲ್ಲಿ ಪಾಕಿಸ್ತಾನದ 434 ಪ್ರಜೆಗಳಿದ್ದು, ಅದರಲ್ಲಿ ಮೀನುಗಾರರು 96 ಜನರು ಎನ್ನಲಾಗಿದೆ. ಈ ಮೀನುಗಾರರ ಬಂಧನವನ್ನು ಮಾನವ ಹಕ್ಕುಗಳ ಆಯೋಗ ವಿರೋಧಿಸುತ್ತಲೇ ಬಂದಿದೆ. ಮೀನು ಹಿಡಿಯುತ್ತ ಪಾಕಿಸ್ತಾನದತ್ತ ಹೋಗುವ ಮತ್ತು ಅಲ್ಲಿಂದ ಭಾರತಕ್ಕೆ ಬರುವ ಮೀನುಗಾರರನ್ನು ಬಂಧಿಸಬೇಡಿ. ಅವರನ್ನು ಸುದೀರ್ಘ ಕಾಲದವರೆಗೆ ಜೈಲಿನಲ್ಲಿ ಇಡುವುದು ಬೇಡ ಎಂದು ಒತ್ತಾಯಿಸುತ್ತಲೇ ಬಂದಿದೆ.

Exit mobile version