ಕರಾಚಿ: ಭಾರತದ ಜೊತೆಗೆ ಮೂರು ಯುದ್ಧಗಳನ್ನು ನಮ್ಮ ದೇಶ ನಡೆಸಿದ್ದು, ಪಾಠ ಕಲಿತಿದ್ದೇವೆ. ಹೆಚ್ಚಿನ ಯಾತನೆ, ಬಡತನ ಮತ್ತು ನಿರುದ್ಯೋಗ ಮಾತ್ರವೇ ನಮಗೆ ಅದರಿಂದ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ನಿರ್ಣಾಯಕ, ಮುಕ್ತ ಮಾತುಕತೆ ನಡೆಸಲು ಇಚ್ಛಿಸುತ್ತೇನೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್ ಶರೀಫ್ ಅವರು ಹೇಳಿದ್ದಾರೆ.
ಅಲ್ ಅರಬಿಯಾ ಎಂಬ ಅಂತಾರಾಷ್ಟ್ರೀಯ ಅರೇಬಿಕ್ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ನಮ್ಮ ದೇಶ ಆರ್ಥಿಕ ದುಃಸ್ಥಿತಿಯತ್ತ ಜಾರುತ್ತಿದ್ದು, ಜಗತ್ತಿನ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಂತಿದ್ದೇವೆ; ಇನ್ನೊಂದು ಕಡೆ ಭಾರತ ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿದೆ ಎಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ಇತ್ತೀಚೆಗೆ ಬರೆದ ಕೆಲವೇ ದಿನಗಳ ಅಂತರದಲ್ಲಿ ಈ ಸಂದರ್ಶನ ಪ್ರಕಟವಾಗಿದೆ.
ʼʼಭಾರತದ ಪ್ರಧಾನಿ ಹಾಗೂ ಅಲ್ಲಿನ ಆಡಳಿತಕ್ಕೆ ನನ್ನ ಸಂದೇಶ ಏನೆಂದರೆ, ನಾವು ಜತೆಗೆ ಕೂತು ಕಾಶ್ಮೀರ ಸಮಸ್ಯೆಯಂಥ ವಿಚಾರಗಳನ್ನು ಪ್ರಾಮಾಣಿಕ ಹಾಗೂ ನಿರ್ಣಾಯಕ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ. ಇದು ಶಾಂತಿಯುತ ಬದುಕು ಕಂಡುಕೊಳ್ಳಲು, ಪ್ರಗತಿ ಸಾಧಿಸಲು, ಜಗಳದ ಮೂಲಕ ನಮ್ಮ ಸಮಯ ಮತ್ತು ಆಸ್ತಿಗಳನ್ನು ನಾಶ ಮಾಡಿಕೊಳ್ಳದಿರಲು ಇದು ಅಗತ್ಯʼʼ ಎಂದು ಶೆಹಬಾಜ್ ಶರೀಫ್ ಹೇಳಿದ್ದಾರೆ.
ʼʼಎರಡೂ ದೇಶಗಳೂ ನ್ಯೂಕ್ಲಿಯರ್ ಪವರ್‌ಗಳು. ಹಾಗಾಗದಿರಲಿ, ಆದರೆ ಯುದ್ಧ ಸಂಭವಿಸಿದರೆ ಏನಾಯಿತೆಂದು ಹೇಳಲೂ ಯಾರೂ ಉಳಿದಿರುವುದಿಲ್ಲʼʼ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ | Shehbaz Sharif | ಪಾಕಿಸ್ತಾನ ಪಾಠ ಕಲಿತಿದೆ, ನಮಗೆ ಭಾರತದ ಜತೆ ಯುದ್ಧ ಬೇಡ: ಪಾಕ್ ಪಿಎಂ
ಇತ್ತೀಚೆಗೆ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನಲ್ಲಿ ಸಂಪಾದಕೀಯ ಬರೆದಿದ್ದ ಪಾಕಿಸ್ತಾನ ರಕ್ಷಣಾ ವಿಶ್ಲೇಷಣಕಾರ ಶಹಜಾದ್ ಚೌಧುರಿ ಅವರು, ದೇಶದ ಆರ್ಥಿಕತೆಯನ್ನು ಉಳಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಪ್ರಧಾನಿ ಗಂಭೀರವಾಗಿ ಚಿಂತಿಸಬೇಕು ಎಂದು ಕರೆ ನೀಡಿದ್ದರು. ಪರಸ್ಪರ ಶತ್ರುಗಳಾಗಿರುವ ಅಮೆರಿಕ ಹಾಗೂ ರಷ್ಯಾಗಳು ಭಾರತದ ವಿಚಾರ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿರುತ್ತವೆ. ಭಾರತ ತನ್ನದೇ ಪಾಲಿಸಿಗಳು ಹಾಗೂ ಸ್ಥಿತಿಗತಿಗಳೊಂದಿಗೆ ಪ್ರಗತಿ ಹೊಂದುತ್ತಿದೆ. ಯುದ್ಧ ನಡೆಯುತ್ತಿದ್ದರೂ ರಷ್ಯಾದಿಂದ ತೈಲ ಸರಬರಾಜು ಮಾಡಿಕೊಳ್ಳುತ್ತಿದೆ. 2037ರ ಒಳಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದು ಭಾರತದ ಕನಸಾಗಿದೆ. ಅದನ್ನು ಆ ದೇಶ ನನಸಾಗಿಸಿಕೊಳ್ಳಬಲ್ಲದು. ಈಗಾಗಲೇ ಅದು ಬ್ರಿಟನ್ ಅನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಿದೆ. ವಿದೇಶಿ ವಿನಿಮಯ ಮೊತ್ತವೂ 600 ಶತಕೋಟಿ ಡಾಲರ್ (49 ಲಕ್ಷ ಕೋಟಿ ರೂ.) ತಲುಪಿದೆ. ಆದರೆ ಪಾಕಿಸ್ತಾನದ ಬಳಿ 10.19 ಶತಕೋಟಿ ಡಾಲರ್ (83 ಸಾವಿರ ಕೋಟಿ ರೂ.) ವಿದೇಶಿ ವಿನಿಮಯ ಮಾತ್ರ ಇದೆ ಎಂದು ಚೌಧುರಿ ಬರೆದಿದ್ದರು.
ಇದೇ ಸಮಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೂಡ, ಲಷ್ಕರೆ ತಯ್ಬಾ ಸಂಘಟನೆಯ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಉಗ್ರ ಎಂದೂ ಘೋ಼ಷಿಸಿದೆ.
ಇದನ್ನೂ ಓದಿ | ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಂಗಳೂ ಖಾಲಿ- ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಜಿ ಕ್ರಿಕೆಟರ್ ಟ್ವೀಟ್