Site icon Vistara News

ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲು: ಪಿಒಕೆಯಲ್ಲಿ ಸಮವಸ್ತ್ರದ ಬದಲು ಪಠಾಣಿ ಸೂಟ್ ಧರಿಸಿ ಬೇಹುಗಾರಿಕೆಗೆ ಮುಂದಾದ ಪಾಕ್‌ ಸೇನೆ

Pakistani Army

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) ಪಾಕಿಸ್ತಾನ ಸೇನಾ ಸಿಬ್ಬಂದಿ (Pakistani Army) ತಮ್ಮ ಪ್ರಮಾಣಿತ ಮಿಲಿಟರಿ ಸಮವಸ್ತ್ರದ ಬದಲು ಸ್ಥಳೀಯ ಉಡುಪಾದ ಪಠಾಣಿ ಸೂಟ್ ಧರಿಸಿರುವುದು ಕಂಡುಬಂದಿದೆ. ನಿಯಂತ್ರಣ ರೇಖೆಯಲ್ಲಿ (Line of Control) ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಚಟುವಟಿಕೆ ಹೆಚ್ಚಿರುವ ಮಧ್ಯೆಯೇ ಈ ಬೆಳವಣಿಗೆ ನಡೆದಿರುವುದು ಸಂದೇಹಕ್ಕೆ ಎಡೆಮಾಡಿ ಕೊಟ್ಟಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸೇನೆ (Indian Army) ಇನ್ನಷ್ಟು ಮುನ್ನೆಚ್ಚರಿಕೆ ವಹಿಸಿದೆ.

ಈ ಹಿಂದೆ ಪಾಕಿಸ್ತಾನ ಸೇನೆಯು ಪಠಾಣಿ ಸೂಟ್ ಧರಿಸಿದ ಭಯೋತ್ಪಾದಕರಿಗೆ ಫಾರ್ವರ್ಡ್ ಪೋಸ್ಟ್‌ಗಳಿಗೆ ಮಾರ್ಗದರ್ಶನ ನೀಡುತ್ತಿರುವುದು ಮತ್ತು ಒಳನುಸುಳುವಿಕೆ ಮಾರ್ಗಗಳನ್ನು ತೋರಿಸುತ್ತಿರುವುದು ಕಂಡುಬಂದಿತ್ತು. ಪಿಒಕೆಯ ಕೋಟ್ಲಿ ಮತ್ತು ಸಮೀಪದ ಪ್ರದೇಶಗಳಲ್ಲಿನ ದೃಶ್ಯ ಸೆರೆಯಾಗಿದ್ದವು.

ಪಠಾಣಿ ಸೂಟ್‌ನಲ್ಲಿ ಪಾಕಿಸ್ತಾನ ಸೇನೆ

ಮೂಲಗಳ ಪ್ರಕಾರ ಪಿಒಕೆಯಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನಿ ಸೇನಾ ಸಿಬ್ಬಂದಿ ತಮ್ಮ ಮಿಲಿಟರಿ ಸಮವಸ್ತ್ರದ ಬದಲು ಸಾಂಪ್ರದಾಯಿಕ ಸ್ಥಳೀಯ ಉಡುಗೆಯಾದ ಪಠಾಣಿ ಸೂಟ್‌ಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ. ಗುರುತುಗಳನ್ನು ಮರೆ ಮಾಚುವ ಮತ್ತು ಸ್ಥಳೀಯರೊಂದಿಗೆ ಬೆರೆಯುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ. ಉಡುಪುಗಳಲ್ಲಿನ ಬದಲಾವಣೆಯು ಈ ಪ್ರದೇಶದಲ್ಲಿನ ಬೇಹುಗಾರಿಕೆಯನ್ನು ಸುಲಭಗೊಳಿಸುತ್ತದೆ ಎನ್ನಲಾಗಿದೆ. ಸಾಮಾನ್ಯರಂತೆ ಬೆರೆತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲು ಪಾಕಿಸ್ತಾನ ಸೇನೆ ಈ ಕುತಂತ್ರ ಅನುಸರಿಸುತ್ತಿದೆ ಎಂದು ಮೂಲಗಳು ಎಚ್ಚರಿಸಿವೆ.

ಈ ಪ್ರದೇಶದಲ್ಲಿ ಬೇಹುಗಾರಿಕೆ ನಡೆಸಲು ಪಾಕಿಸ್ತಾನದ ಸೇನೆ ಪಠಾಣಿ ಸೂಟ್ ಧರಿಸಿದ ತನ್ನ ಸಿಬ್ಬಂದಿಯ ನಾಲ್ಕರಿಂದ ಐದು ಗುಂಪುಗಳನ್ನು ನಿಯೋಜಿಸುತ್ತಿದೆ. ಅವರು ನಿರಂತರವಾಗಿ ವಿಶ್ವಸಂಸ್ಥೆಯ ನಿಯೋಗಗಳನ್ನು ಈ ಪ್ರದೇಶಕ್ಕೆ ಕರೆತರುತ್ತಿದ್ದಾರೆ. ಮುಂದೆ ಸಂಭವಿಸಬಹುದಾದ ಘಟನೆಗಳ ಮೂಲಕ ಅಂತಾರಾಷ್ಟ್ರೀಯ ಗಮನವನ್ನು ಸೆಳೆಯುವ ಗುರಿಯನ್ನು ಈ ಕ್ರಮ ಹೊಂದಿದೆ ಎನ್ನಲಾಗಿದೆ.

ಕುತಂತ್ರ ಬಯಲು

ʼʼಗೊಂದಲವನ್ನು ಸೃಷ್ಟಿಸುವುದು ಈ ಕಾರ್ಯತಂತ್ರದ ಉದ್ದೇಶ. ಗಡಿ ದಾಟಿ ಒಳ ನುಸುಳಿದ ಪಠಾಣ್‌ ಸೂಟ್‌ ಉಡುಪು ಧರಿಸಿದ ಪಾಕ್‌ ಸೇನೆಯನ್ನು ಭಾರತೀಯ ಸೈನಿಕರು ಕೊಂದರೆ, ಭಾರತೀಯ ಸೇನೆಯು ನಾಗರಿಕರನ್ನು ಕೊಲ್ಲುತ್ತಿದೆ ಎಂದು ಆರೋಪಿಸಬಹುದು ಎನ್ನುವುದು ಪಾಕಿಸ್ತಾನದ ಯೋಜನೆ. ಈ ಮೂಲಕ ಹೇಡಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಸಿಲುಕಿಸಲು ಪ್ರಯತ್ನಿಸುತ್ತದೆ. ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ನಾಗರಿಕರ ವಿರುದ್ಧ ಅನ್ಯಾಯದ ಎಸಗಲಾಗುತ್ತಿದೆ ಎನ್ನುವುದನ್ನು ಈ ಮೂಲಕ ರೂಪಿಸಲು ಪಾಕ್‌ ಮುಂದಾಗಿದೆʼʼ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಪಡೆಗಳು ಜಾನುವಾರುಗಳನ್ನು ಗಡಿಗೆ ಹತ್ತಿರ ತರುತ್ತಿವೆ ಎಂಬ ಬಗ್ಗೆಯೂ ವರದಿಗಳು ಬರುತ್ತಿದೆ. ಇದು ಕೂಡ ಅವರ ನಿಜವಾದ ಚಟುವಟಿಕೆಗಳನ್ನು ಮರೆಮಾಚುವ ಉದ್ದೇಶ ಹೊಂದಿದೆ. ಈ ಮೂಲಕ ಸ್ಥಳೀಯರೊಂದಿಗೆ ಬೆರೆಯಲು ಮುಂದಾಗುತ್ತಿದೆ. ಹೀಗಾಗಿ ಭಾರತೀಯ ಸೇನೆಯೂ ಈ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈ ಪರಿಸ್ಥಿತಿಯಿಂದ ಉದ್ಭವಿಸುವ ಸಂಭಾವ್ಯ ರಾಜತಾಂತ್ರಿಕ ಸವಾಲುಗಳಿಗೆ ಎದುರಿಸಲು ಸಿದ್ಧರಾಗುವಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.

ಇದನ್ನೂ ಓದಿ: Pakistani Labours: ಭಿಕ್ಷಾಟನೆ, ಅಪರಾಧ ಕೃತ್ಯ; ಪಾಕಿಸ್ತಾನಿಯರನ್ನು ಒದ್ದು ಓಡಿಸುತ್ತಿರುವ ಗಲ್ಫ್‌ ರಾಷ್ಟ್ರಗಳು!

ಭಾರತವು ಪಾಕಿಸ್ತಾನದೊಂದಿಗೆ 772 ಕಿ.ಮೀ. ಉದ್ದದ ನಿಯಂತ್ರಣ ರೇಖೆ (ಎಲ್ಒಸಿ) ಗಡಿಯನ್ನು ಹಂಚಿಕೊಂಡಿದೆ. ಭಾರತವನ್ನು ದುರ್ಬಲಗೊಳಿಸಲು ಪಾಕಿಸ್ತಾನ ಸೇನೆಯು ಇಂತಹ ಕುತಂತ್ರಗಳಲ್ಲಿ ತೊಡಗಿರುವುದು ಇದೇ ಮೊದಲಲ್ಲ. ಆದಾಗ್ಯೂ ಅದರ ಹಿಂದಿನ ಕಾರ್ಯತಂತ್ರಗಳು ವಿಫಲವಾದ ಕಾರಣ ಇದೀಗ ವಿಶ್ವಸಂಸ್ಥೆಯಲ್ಲಿ ತಾನು ಬಲಿಪಶು ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ವರದಿ ತಿಳಿಸಿದೆ.

Exit mobile version