ಪಾಕಿಸ್ತಾನದಿಂದ ಭಾರತದತ್ತ ಡ್ರೋನ್ (Pakistani Drone) ಹಾರಿಬರುವುದು, ಅದನ್ನು ನಮ್ಮ ಭದ್ರತಾ ಪಡೆಗಳು ಹೊಡೆದುರುಳಿಸುವುದು ದಿನನಿತ್ಯದ ವಿದ್ಯಮಾನವೆಂಬಂತಾಗಿದೆ. ಅದರ ಮಧ್ಯೆ ಈಗ ಪಾಕಿಸ್ತಾನದಿಂದ ಬಲೂನ್ (Pakistani Balloon) ಒಂದು ಹಾರಿಬಂದು ಜಮ್ಮು-ಕಾಶ್ಮೀರದ (Jammu-Kashmir) ಕಥುವಾ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಈ ಬಲೂನ್ ಮೇಲೆ ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ (PIA)ನ ಲೋಗೋ ಇದೆ. ಕಪ್ಪು-ಬಿಳುಪಾಗಿರುವ ಬಲೂನ್ ಥೇಟ್ ವಿಮಾನದಂತೆಯೇ ಇದ್ದು, ಕಥುವಾದ ಹಿರನಗರ್ ಎಂಬಲ್ಲಿ ನೆಲದ ಮೇಲೆ ಬಿದ್ದಿತ್ತು. ಭಾರತೀಯ ಸೇನಾ ಯೋಧರು ಬಲೂನ್ನ್ನು ವಶಪಡಿಸಿಕೊಂಡಿದ್ದಾರೆ. ಇದು ಗೂಢಚಾರಿಕೆಯದ್ದೋ, ಅಥವಾ ಇನ್ಯಾವುದೋ ಕಾರಣಕ್ಕೆ ಕಳಿಸಿದ್ದೋ ಎಂಬ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅಂದಹಾಗೇ, ಹೀಗೆ ಪಿಐಎ ಲೋಗೋ ಇರುವ ಬಲೂನ್ ಭಾರತದ ಕಡೆಗೆ ಹಾರಿಬರುತ್ತಿರುವುದು ಇದೇ ಮೊದಲೇನೂ ಇಲ್ಲ ಇದೇ ವರ್ಷ ಫೆಬ್ರವರಿಯಲ್ಲಿ ಹಸಿರು-ಬಿಳಿ ಮಿಶ್ರಿತ ಬಲೂನ್ವೊಂದು, ಹಿಮಾಚಲ ಪ್ರದೇಶದ ಶಿಮ್ಲಾದ ಒಂದು ಸೇಬು ಉದ್ಯಾನವನದಲ್ಲಿ ಪತ್ತೆಯಾಗಿತ್ತು. ಈ ಸೇಬು ತೋಟದ ಮಾಲೀಕನ ಮಕ್ಕಳು ಆ ಬಲೂನ್ ಹಿಡಿದುಕೊಂಡು ಆಟವಾಡುತ್ತ, ಮನೆಗೆ ತಂದಿದ್ದರು. ಆ ಬಲೂನ್ನ್ನು ತೋಟದ ಮಾಲೀಕ ಖುದ್ದಾಗಿ ಹೋಗಿ ಪೊಲೀಸರಿಗೆ ಕೊಟ್ಟಿದ್ದ. ಅದು ಥೇಟ್ ಪಾಕಿಸ್ತಾನದ ಧ್ವಜದಂತೆ ಭಾಸವಾಗುತ್ತಿತ್ತು. ತನಿಖೆ ನಡೆಸಿದ್ದ ಪೊಲೀಸರು, ಇದು ಪಾಕಿಸ್ತಾನದಿಂದಲೇ ಹಾರಿಬಂದಿದ್ದು ಎಂದು ಹೇಳಿದ್ದರು.
ಇನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ಗಳ ಹಾರಾಟವೂ ಮಿತಿಮೀರುತ್ತಿದೆ. ಪಾಕಿಸ್ತಾನದಿಂದ ಹಲವು ಡ್ರೋನ್ಗಳು ಭಾರತದ ಗಡಿ ದಾಟುತ್ತಿವೆ. ಇತ್ತೀಚೆಗೆ, ಅಂದರೆ ಮೇ 20ರಂದು ಪಂಜಾಬ್ನ ಅಮೃತ್ಸರ್ನಲ್ಲಿ ಪಾಕಿಸ್ತಾನಿ ಡ್ರೋನ್ವೊಂದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದರು. ಅದರಲ್ಲಿ ಇದ್ದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು. ಅದಕ್ಕೂ ಮೊದಲು ಕೂಡ ಇಂಥ ಹಲವು ಪ್ರಕರಣಗಳು ವರದಿಯಾಗಿವೆ. ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಪಾಕಿಸ್ತಾನದ ಡ್ರೋನ್ಗಳು ಹಾರಿಬರುತ್ತಿವೆ. ಬಹುಪಾಲು ಡ್ರೋನ್ಗಳು, ಭಾರತೀಯ ಸೈನಿಕರ ಗುಂಡೇಟಿಗೆ ಪುಡಿಪುಡಿಯಾಗುತ್ತಿವೆ.
ಇದನ್ನೂ ಓದಿ: United Nations : ಡ್ರೋನ್ ಮೂಲಕ ಭಾರತಕ್ಕೆ ಮಾರಕಾಸ್ತ್ರ ರವಾನಿಸುತ್ತಿದೆ ಪಾಕಿಸ್ತಾನ; ವಿಶ್ವ ಸಂಸ್ಥೆಯಲ್ಲಿ ಭಾರತದ ಆರೋಪ