Site icon Vistara News

ಪ್ರಧಾನಿ ಮೋದಿಗೆ ಕಟುಕ ಎಂದು ಬೈದಿದ್ದ ಪಾಕಿಸ್ತಾನ ಸಚಿವ ಭಾರತಕ್ಕೆ; ಗೋವಾ ತಲುಪಿದ ಬಿಲಾವಲ್​ ಭುಟ್ಟೋ ಜರ್ದಾರಿ

Bilawal Bhutto Zardari Lands In India

#image_title

ಶಾಂಘೈ ಸಹಕಾರ ಸಂಘಟನೆ ಶೃಂಗದ (SCO Meet) ಆತಿಥ್ಯವನ್ನು ವಹಿಸಿರುವ ಭಾರತ ಅದರ ಪೂರ್ವಭಾವಿಯಾಗಿ ಇಂದು ಮತ್ತು ನಾಳೆ (ಮೇ 4 ಮತ್ತು 5) ಗೋವಾದಲ್ಲಿ ವಿದೇಶಾಂಗ ಇಲಾಖೆ ಸಚಿವರ ಸಭೆ ಹಮ್ಮಿಕೊಂಡಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಶಾಂಘೈ ಒಕ್ಕೂಟದಲ್ಲಿರುವ ಚೀನಾ, ತಜಿಕಿಸ್ತಾನ್​, ರಷ್ಯಾ, ಉಜ್ಬೇಕಿಸ್ತಾನ್​, ಕಜಾಕಿಸ್ತಾನ್​, ಕಿರ್ಗಿಸ್ತಾನ್​, ಪಾಕಿಸ್ತಾನ ದೇಶಗಳ ವಿದೇಶಾಂಗ ಸಚಿವರುಗಳು ಗೋವಾಕ್ಕೆ ಬಂದಿಳಿದಿದ್ದಾರೆ. ಅದರಲ್ಲಿ ವಿಶೇಷ ಎನ್ನಿಸಿದ್ದು ಪಾಕಿಸ್ತಾನ ವಿದೇಶಾಂಗ ಸಚಿವರ ಭಾರತ ಭೇಟಿ. ಸದ್ಯ ಎಲ್ಲ ವಿಭಾಗಗಳಲ್ಲೂ ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ. ಹೀಗಿರುವಾಗ ಅಲ್ಲಿನ ವಿದೇಶಾಂಗ ಸಚಿವ ಬಿಲಾವಲ್​ ಭುಟ್ಟೋ ಜರ್ದಾರಿ (Bilawal Bhutto Zardari) ಭಾರತಕ್ಕೆ ಆಗಮಿಸಿದ್ದಾರೆ. ಈ ಮೂಲಕ 11 ವರ್ಷಗಳ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಬಂದಂತಾಗಿದೆ.

ಭಾರತಕ್ಕೆ ಬರುವುದಕ್ಕೂ ಮೊದಲು ಬಿಲಾವಲ್​ ಭುಟ್ಟೋ ಜರ್ದಾರಿ ಅವರು ವಿಡಿಯೊ ಮೂಲಕ ಮಾತನಾಡಿದ್ದರು. ‘ನಾನು ಭಾರತದ ಗೋವಾಕ್ಕೆ ಹೋಗುತ್ತಿದ್ದೇನೆ. ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಇಲಾಖೆ ಸಚಿವರ ಸಭೆಯಲ್ಲಿ ಹಾಜರಾಗುತ್ತಿದ್ದೇನೆ. ಪಾಕ್​ ನಿಯೋಗದ ನೇತೃತ್ವವನ್ನು ನಾನೇ ವಹಿಸಿದ್ದೇನೆ. ಶಾಂಘೈ ಸಹಕಾರ ಸಂಘಟನೆ ಕುರಿತಾಗಿ ಪಾಕಿಸ್ತಾನಕ್ಕೆ ಇರುವ ಬದ್ಧತೆ ಎಂಥದ್ದು ಎಂದು ತೋರಿಸಲು ನಾನು ಅಲ್ಲಿಗೆ ತೆರಳುತ್ತಿದ್ದೇನೆ. ಭಾರತ ಭೇಟಿಯ ವೇಳೆ ನಾನು ಕೇವಲ ಎಸ್​ಸಿಒ (ಶಾಂಘೈ ಸಹಕಾರ ಸಂಘಟನೆ) ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸುತ್ತೇನೆ. ಶಾಂಘೈ ಒಕ್ಕೂಟದಲ್ಲಿರುವ ನಮ್ಮ ಸಹವರ್ತಿ ದೇಶಗಳ ಪ್ರಮುಖರೊಂದಿಗೆ ರಚನಾತ್ಮಕ ಚರ್ಚೆ ನಡೆಸಲು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ಅವರು ಕರಾಚಿಯಿಂದ ಭಾರತಕ್ಕೆ ಬರುವ ವಿಮಾನ ಹತ್ತಿದ ವಿಡಿಯೊ ವೈರಲ್ ಆಗಿದೆ.

ಭಾರತದಲ್ಲಿ ನಡೆಯಲಿರುವ ಸಭೆಗೆ ಉಳಿದೆಲ್ಲ ದೇಶಗಳ ಸಚಿವರುಗಳು ಬಂದರೂ, ಪಾಕಿಸ್ತಾನದ ಸಚಿವ ಬರುವುದು ಅನುಮಾನವೇ ಇತ್ತು. ನಿಯಮದಂತೆ ಭಾರತ ಆಮಂತ್ರಣವನ್ನೇನೋ ಕೊಟ್ಟಿತ್ತು. ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿದ್ದ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ಮುಮ್ತಾಜ್ ಜಹ್ರಾ ಬಲೋಚ್ ‘ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ನಿಯೋಗ, ಮೇ 4 ಮತ್ತು 5ಕ್ಕೆ ಗೋವಾಕ್ಕೆ ತೆರಳಲಿದೆ’ ಎಂದು ಹೇಳಿದ್ದರು.

ಮೋದಿ ಕಟುಕ ಎಂದಿದ್ದ ಬಿಲಾವಲ್​ ಭುಟ್ಟೋ
ಇತ್ತೀಚೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್​ ಭುಟ್ಟೋ, ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ಒಸಮಾ ಬಿನ್ ಲಾಡೆನ್​ ಸತ್ತಿದ್ದಾನೆ, ಆದರೆ ಗುಜರಾತ್​ ಜನರ ಪಾಲಿನ ಕಟುಕ ಬದುಕಿದ್ದಾನೆ. ಆತನೇ ಈಗ ಭಾರತದ ಪ್ರಧಾನಿಯಾಗಿದ್ದಾನೆ’ ಎಂದು ಹೇಳಿದ್ದರು. ಅದಕ್ಕೂ ಮುನ್ನ ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡಿದ್ದ ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಪಾಕಿಸ್ತಾನವರು ಉಗ್ರರ ಕೇಂದ್ರ ಎಂದು ವ್ಯಂಗ್ಯವಾಡಿದ್ದರು. ಅದಕ್ಕೆ ತಿರುಗೇಟು ಕೊಡಲು ಹೋಗಿ ಭುಟ್ಟೋ ವಿವಾದ ಸೃಷ್ಟಿಸಿದ್ದರು.

Exit mobile version