Site icon Vistara News

ಕಾಶ್ಮೀರದಲ್ಲಿ ಮುಂಬೈ ದಾಳಿ ರೂವಾರಿ ಹಫೀಜ್‌ ಸಯೀದ್‌ ಆಪ್ತನ ಹತ್ಯೆ; ಈತ ಪಾಕ್‌ ಕಮಾಂಡೋ ಕೂಡ ಹೌದು!

Kupwara Encounter

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಉಗ್ರ ಚಟುವಟಿಕೆಗಳು ಹೆಜ್ಜಾಗಿದ್ದು, ಸೈನಿಕರು ಹಾಗೂ ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗಳು ಜಾಸ್ತಿಯಾಗಿವೆ. ಭಾರತೀಯ ಸೇನೆಯೂ ಉಗ್ರರನ್ನು ಮಟ್ಟ ಹಾಕಲು ಸತತ ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಇದರ ಮಧ್ಯೆಯೇ, ಭಾರತೀಯ ಸೇನೆಯು (Indian Army) ಭಾರಿ ಮುನ್ನಡೆ ಸಾಧಿಸಿದೆ. ಮುಂಬೈ ದಾಳಿ ರೂವಾರಿ, ಜಾಗತಿಕ ಉಗ್ರ ಹಫೀಜ್‌ ಸಯೀದ್‌ ಆಪ್ತನನ್ನು ಭಾರತದ ಯೋಧರು ಕುಪ್ವಾರದಲ್ಲಿ (Kupwara Encounter) ಹೊಡೆದುರುಳಿಸಿದ್ದಾರೆ.

ಹೌದು, ಕುಪ್ವಾರದಲ್ಲಿ ಹಫೀಜ್‌ ಸಯೀದ್‌ ಆಪ್ತ, ಪಾಕಿಸ್ತಾನದ ಸೇನೆಯ ಸ್ಪೆಷಲ್‌ ಸರ್ವಿಸ್‌ ಗ್ರೂಪ್‌ (SSG) ಕಮಾಂಡೋ ಕೂಡ ಆಗಿರುವ ನೊಮಾನ್‌ ಜಿಯಾವುಲ್ಲಾನನ್ನು ಭಾರತದ ಯೋಧರು ಹತ್ಯೆಗೈದಿದ್ದಾರೆ. ಕುಪ್ವಾರ ಜಿಲ್ಲೆಯ ಮಚಿಲ್ ಪ್ರದೇಶದ ಗಡಿಯಲ್ಲಿ ಅಕ್ರಮವಾಗಿ ಒಳನುಸುಳಲು ನೊಮಾನ್‌ ಜಿಯಾವುಲ್ಲಾ ಪ್ರಯತ್ನಿಸುತ್ತಿದ್ದ. ಇದರ ಕುರಿತು ನಿಖರ ಮಾಹಿತಿ ಪಡೆದ ಭಾರತದ ಯೋಧರು, ನೊಮಾನ್‌ ಜಿಯಾವುಲ್ಲಾನನ್ನು ಎನ್‌ಕೌಂಟರ್‌ ಮಾಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಜುಲೈ 27ರಂದೇ ನೊಮಾನ್‌ ಜಿಯಾವುಲ್ಲಾ ಭಾರತದೊಳಗೆ ಅಕ್ರಮವಾಗಿ ನುಸುಳಲು ಪ್ರಯತ್ನಿಸಿದ್ದ. ಅದೇ ದಿನ ಸೈನಿಕರು ಹತ್ಯೆ ಮಾಡಿದ್ದಾರೆ. ನೊಮಾನ್‌ ಜಿಯಾವುಲ್ಲಾನು ಪಾಕಿಸ್ತಾನದ ಎಸ್‌ಎಸ್‌ಜಿ ಕಮಾಂಡೋಗಳು ಧರಿಸುವ ಜಾಕೆಟ್‌ಗಳನ್ನು ಧರಿಸಿ ತೆಗೆಸಿಕೊಂಡ ಫೋಟೊಗಳು ಈಗ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈತನು ಉಗ್ರ ಸಂಘಟನೆಯ ಜತೆ ನಂಟು ಹೊಂದಿರುವುದಲ್ಲದೆ, ಎಸ್‌ಎಸ್‌ಜಿ ಕಮಾಂಡೋ ಕೂಡ ಆಗಿದ್ದ ಎಂದು ತಿಳಿದುಬಂದಿದೆ. ಈತನ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್‌ನ 600 ಕಮಾಂಡೋಗಳ ಪ್ರವೇಶ?

ಪಾಕಿಸ್ತಾನದ 600 ಕಮಾಂಡೋಗಳು ಅಕ್ರಮವಾಗಿ ಜಮ್ಮು-ಕಾಶ್ಮೀರ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂಬುದಾಗಿ ಪಾಕ್‌ ಆಕ್ರಮಿತ ಕಾಶ್ಮೀರದ (PoK) ಹೋರಾಟಗಾರ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. “ಪಾಕಿಸ್ತಾನದ ಎಸ್‌ಎಸ್‌ಜಿ ಜನರಲ್‌ ಆಫಿಸರ್‌ ಕಮಾಂಡಿಂಗ್‌ (ಜಿಒಸಿ) ಮೇಜರ್‌ ಜನರಲ್‌ ಆದಿಲ್‌ ರೆಹಮಾನಿಯು ಜಮ್ಮು ಪ್ರದೇಶದಲ್ಲಿ ದಾಳಿ ನಡೆಸುತ್ತಿದ್ದಾನೆ. ಪಾಕಿಸ್ತಾನದ 600 ಕಮಾಂಡೋಗಳು ಭಾರತಕ್ಕೆ ನುಗ್ಗಿದ್ದು, ಕುಪ್ವಾರದಲ್ಲಿ ಆಶ್ರಯ ಪಡೆದಿದ್ದಾರೆ” ಎಂಬುದಾಗಿ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಪೋಸ್ಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಕಣಿವೆಯಲ್ಲಿ ಪಾಕ್‌ ಕಮಾಂಡೋನನ್ನು ಹೊಡೆದುರುಳಿಸಿರುವುದು ಹಲವು ಅನುಮಾನ ಮೂಡಲು ಕಾರಣವಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲು: ಪಿಒಕೆಯಲ್ಲಿ ಸಮವಸ್ತ್ರದ ಬದಲು ಪಠಾಣಿ ಸೂಟ್ ಧರಿಸಿ ಬೇಹುಗಾರಿಕೆಗೆ ಮುಂದಾದ ಪಾಕ್‌ ಸೇನೆ

Exit mobile version