ಲಖನೌ: ಪ್ರೀತಿಗೆ ಭಾಷೆ, ವಯಸ್ಸು, ಪ್ರದೇಶ ಎಂಬ ಗಡಿ ಇಲ್ಲ ಎಂಬ ಮಾತಿದೆ. ಅದರಲ್ಲೂ, ಆನ್‌ಲೈನ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೇ ಯುವಕ-ಯುವತಿಯರ ಮಧ್ಯೆ ಪ್ರೀತಿ ಟಿಸಿಲೊಡೆಯುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಆನ್‌ಲೈನ್‌ನಲ್ಲಿ ಪಬ್ಜಿ ಆಡುವಾಗ ಶುರುವಾದ ಸ್ನೇಹವು, ಪ್ರೀತಿಗೆ ತಿರುಗಿ ಮಹಿಳೆಯೊಬ್ಬರು ಪ್ರಿಯಕರನನ್ನು ಅರಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ. ಈ ಅಮರ ಪ್ರೇಮ ಕತೆಯು ಸಾಮಾಜಿಕ ಜಾಲತಾಣಗಳಲ್ಲಿ (Viral News) ಭಾರಿ ವೈರಲ್ ಆಗಿದೆ.
ವಿಸ್ತಾರ ನ್ಯೂಸ್ WhatsApp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಸೀಮಾ ಹೈದರ್ ಎಂಬ ಪಾಕಿಸ್ತಾನದ ಮಹಿಳೆ ಹಾಗೂ ಗ್ರೇಟರ್ ನೊಯ್ಡಾ ನಿವಾಸಿಯಾದ ಸಚಿನ್ ಸಿಂಗ್ ಅವರು ಆನ್‌ಲೈನ್‌ನಲ್ಲಿ ಪಬ್ಜಿ ಆಡುವಾಗ ಇಬ್ಬರ ಮಧ್ಯೆ ಸ್ನೇಹ ಚಿಗುರಿದೆ. ಇಬ್ಬರೂ ನಿತ್ಯ ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಮಾತನಾಡಿ, ನೂರಾರು ಮೆಸೇಜ್ ಮಾಡಿದ್ದು, ಕೆಲವೇ ದಿನಗಳಲ್ಲಿ ಸ್ನೇಹ ಪ್ರೀತಿಯಾಗಿ ತಿರುಗಿದೆ. ಇಬ್ಬರ ಮಧ್ಯೆ 2020ರಲ್ಲಿ ಸ್ನೇಹವುಂಟಾಗಿದೆ. ಇದಾದ ಬಳಿಕ ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದು, ಊರಲ್ಲಿದ್ದ ಮನೆಯನ್ನು 12 ಲಕ್ಷ ರೂಪಾಯಿಗೆ ಮಾರಾಟ ಮಾಡಿ, ಮಹಿಳೆ ಭಾರತಕ್ಕೆ ಬಂದಿದ್ದಾಳೆ.
ಮಹಿಳೆ ಹಾಗೂ ಆಕೆಯ 4 ಮಕ್ಕಳ ಬಂಧನ
27 ವರ್ಷದ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಆದರೆ, ಗಂಡನ ಕಿರುಕುಳ ತಾಳದೆ ಆಕೆ ಗಂಡನಿಂದ ಬೇರೆಯಾಗಿದ್ದಾಳೆ. ಕಳೆದ ಮಾರ್ಚ್‌ನಲ್ಲಿ ಸೀಮಾ ಹಾಗೂ ಸಚಿನ್ ನೇಪಾಳದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದು ಮದುವೆಯಾಗಲು ತೀರ್ಮಾನಿಸಿದ್ದಾರೆ. ಅದರಂತೆ, ಸೀಮಾ ಹೈದರ್ ಪಾಕಿಸ್ತಾನದಿಂದ ದುಬೈಗೆ ವಿಮಾನದಲ್ಲಿ ತೆರಳಿ, ಅಲ್ಲಿಂದ ನೇಪಾಳ ರಾಜಧಾನಿ ಕಠ್ಮಂಡುಗೆ ವಿಮಾನದಲ್ಲಿ ಬಂದಿದ್ದಾಳೆ. ಕೊನೆಗೆ ನೇಪಾಳ ಗಡಿಯಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದಾಳೆ.
ಪಾಕಿಸ್ತಾನದಿಂದ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿ, ನಾಲ್ವರು ಮಕ್ಕಳೊಂದಿಗೆ ಮಹಿಳೆ ನೆಲೆಸಿದ್ದಾಳೆ ಎಂಬ ಸುದ್ದಿ ತಿಳಿಯುತ್ತಲೇ ಪೊಲೀಸರು ಮಹಿಳೆ, ಸಚಿನ್ ಸಿಂಗ್ ತಂದೆಯನ್ನು ಬಂಧಿಸಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆದಾಗ್ಯೂ, ನಾಲ್ವರು ಮಕ್ಕಳು ಕೂಡ ಆಕೆಯ ಜತೆ ಜೈಲಿನಲ್ಲಿ ಇರಲಿದ್ದಾರೆ.
ಇದನ್ನೂ ಓದಿ: Love Case: ಟೀಚರ್ ಮಗನ ಲವ್ ಟಾರ್ಚರ್‌ಗೆ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ!
ಮುಂದಿನ ಗತಿ ಏನು?
ಸೀಮಾ ಹೈದರ್‌ಳನ್ನು ಮದುವೆಯಾಗಲು 22 ವರ್ಷದ ಸಚಿನ್ ಸಿಂಗ್ ಒಪ್ಪಿದ್ದಾನೆ. ದಯಮಾಡಿ ಸರ್ಕಾರ ಹಾಗೂ ಪೊಲೀಸರು ನಮಗೆ ಸಹಾಯ ಮಾಡಬೇಕು ಎಂದು ಅಂಗಲಾಚಿದ್ದಾನೆ. ಅತ್ತ, ಮಹಿಳೆ ಕೂಡ ನಾನು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಸಚಿನ್ ಜತೆ ಇರುತ್ತೇನೆ ಎಂದಿದ್ದಾಳೆ. ಆದರೆ, ಪಾಕಿಸ್ತಾನದಿಂದ ಬಂದು ಭಾರತದಲ್ಲಿ ವಾಸಿಸಲು ಮುಂದಾಗಿರುವ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆಕೆ ಏನಾದರೂ ಗೂಢಚಾರ ಮಾಡುತ್ತಿರಬಹುದು ಎಂಬ ಕುರಿತೂ ತನಿಖೆ ನಡೆಸುತ್ತಿದ್ದಾರೆ. ಸರ್ಕಾರ ಮನಸ್ಸು ಮಾಡಿದರೆ ಇವರಿಬ್ಬರ ಮದುವೆ ಅನುಮತಿ ನೀಡಿ, ಆಕೆ ಭಾರತದಲ್ಲಿಯೇ ನೆಲೆಸುವಂತೆ ಮಾಡಬಹುದಾಗಿದೆ. ತನಿಖೆ ಬಳಿಕ ಪ್ರಕರಣ ಇತ್ಯರ್ಥವಾಗಲಿದೆ ಎಂದು ಹೇಳಲಾಗುತ್ತಿದೆ.